ಸತತ 15ನೇ ದಿನವೂ ಮುಂದುವರಿದ ಇಂಧನ ದರ ಏರಿಕೆ

ಹೊಸದಿಲ್ಲಿ,ಜೂ.21: ಸತತ 15ನೇ ದಿನವಾದ ರವಿವಾರವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಏರಿಕೆಯಾಗಿದೆ. ಪ್ರತಿ ಲೀ.ಗೆ 60 ಪೈಸೆ ಏರಿಕೆಯೊಂದಿಗೆ ಡೀಸೆಲ್ ದರ ಸಾರ್ವಕಾಲಿಕ ದಾಖಲೆಯನ್ನು ಸೃಷ್ಟಿಸಿದ್ದರೆ, ಪ್ರತಿ ಲೀ.ಗೆ 35 ಪೈಸೆ ಏರಿಕೆಯೊಂದಿಗೆ ಪೆಟ್ರೋಲ್ ಬೆಲೆ ಕಳೆದ ಎರಡು ವರ್ಷಗಳಲ್ಲಿ ಗರಿಷ್ಠ ಮಟ್ಟವನ್ನು ತಲುಪಿದೆ. ಇದರೊಂದಿಗೆ ಕಳೆದ 15 ದಿನಗಳಲ್ಲಿ ಪ್ರತಿ ಲೀ.ಡೀಸೆಲ್ 8.88 ರೂ. ಮತ್ತು ಪೆಟ್ರೋಲ್ 7.97 ರೂ.ಗಳಷ್ಟು ದುಬಾರಿಯಾಗಿವೆ.
ತೈಲ ಮಾರಾಟ ಕಂಪೆನಿಗಳು ಸುದೀರ್ಘ 82 ದಿನಗಳ ವಿರಾಮದ ಬಳಿಕ ಜೂ.7ರಂದು ಬೆಲೆ ಪರಿಷ್ಕರಣೆಯನ್ನು ಪುನರಾರಂಭಿಸಿದಾಗಿನಿಂದ ಇಂಧನ ಬೆಲೆಗಳಲ್ಲಿ ಸತತವಾಗಿ ಏರಿಕೆಯಾಗುತ್ತಿದೆ. ಸರಕಾರವು ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳಲು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಿಸಿದ ಬಳಿಕ ಮಾ.16ರಿಂದ ದೈನಂದಿನ ಬೆಲೆ ಪರಿಷ್ಕರಣೆಯನ್ನು ಸ್ಥಗಿತಗೊಳಿಸಲಾಗಿತ್ತು.
ದಿಲ್ಲಿಯಲ್ಲಿ ರವಿವಾರ ಪ್ರತಿ ಲೀ.ಪೆಟ್ರೋಲ್ ಬೆಲೆ 79.23 ರೂ.ಗೆ ಮತ್ತು ಡೀಸೆಲ್ ಬೆಲೆ 78.27 ರೂ.ಗೆ ಏರಿಕೆಯಾಗಿವೆ.
ಈ ಹಿಂದೆ 2018,ಅಕ್ಟೋಬರ್‌ನಲ್ಲಿ ದಿಲ್ಲಿಯಲ್ಲಿ ಡೀಸೆಲ್ ಬೆಲೆ ಪ್ರತಿ ಲೀ.ಗೆ 75.69 ರೂ.ಗಳ ಗರಿಷ್ಠ ಮಟ್ಟಕ್ಕೇರಿತ್ತು. ಅದೇ ತಿಂಗಳಲ್ಲಿ ಪ್ರತಿ ಲೀ.ಪೆಟ್ರೋಲ್ ಬೆಲೆ 84 ರೂ.ಗಳ ದಾಖಲೆಯ ಎತ್ತರಕ್ಕೇರಿತ್ತು.
ರವಿವಾರ ಮುಂಬೈ,ಚೆನ್ನೈ ಮತ್ತು ಕೋಲ್ಕತಾಗಳಲ್ಲಿ ಪ್ರತಿ ಲೀ.ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಅನುಕ್ರಮವಾಗಿ ರೂ.86.04 ಮತ್ತು ರೂ.76.69,ರೂ.82.58 ಮತ್ತು ರೂ.75.80 ಹಾಗೂ ರೂ.80.95 ಮತ್ತು ರೂ.73.61ಕ್ಕೇರಿವೆ.







