ಬೆಂಗಳೂರು: ಬೈಕ್ ವ್ಹೀಲಿಂಗ್ ವೇಳೆ ಅಪಘಾತ; ಮೂವರು ಯುವಕರು ಮೃತ್ಯು
![ಬೆಂಗಳೂರು: ಬೈಕ್ ವ್ಹೀಲಿಂಗ್ ವೇಳೆ ಅಪಘಾತ; ಮೂವರು ಯುವಕರು ಮೃತ್ಯು ಬೆಂಗಳೂರು: ಬೈಕ್ ವ್ಹೀಲಿಂಗ್ ವೇಳೆ ಅಪಘಾತ; ಮೂವರು ಯುವಕರು ಮೃತ್ಯು](https://www.varthabharati.in/sites/default/files/images/articles/2020/06/21/248184-1592741259.jpg)
ಬೆಂಗಳೂರು, ಜೂ.21: ವ್ಹೀಲಿಂಗ್ ಮಾಡುವ ವೇಳೆ ದ್ವಿಚಕ್ರ ವಾಹನಗಳು ಪರಸ್ಪರ ಢಿಕ್ಕಿ ಹೊಡೆದುಕೊಂಡ ಪರಿಣಾಮ ಮೂವರು ಯುವಕರು ಸಾವನ್ನಪ್ಪಿರುವ ಘಟನೆ ಯಲಹಂಕದ ಜಿಕೆವಿಕೆ ಬಳಿ ರವಿವಾರ ಬೆಳಗ್ಗೆ ನಡೆದಿದೆ.
ಮೃತರನ್ನು ನಾಗವಾರ ಸಮೀಪದ ಗೋವಿಂದಪುರ ನಿವಾಸಿಗಳಾದ ಮಹಮ್ಮದ್ ಆದಿಲ್ ಅಯಾನ್(17), ಮಾಜ್ ಅಹಮ್ಮದ್ ಖಾನ್ (17) ಹಾಗೂ ಸಯ್ಯದ್ ರಿಯಾಜ್(22) ಎಂದು ಗುರುತಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿ-7ರ ಜಿಕೆವಿಕೆ ಮುಂಭಾಗ ಜಕ್ಕೂರು ಏರೋಡ್ರಮ್ ಬಳಿ ಯುವಕರು ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನಗಳಲ್ಲಿ ವ್ಹೀಲಿಂಗ್ ಮಾಡುತ್ತಿದ್ದರು ಎನ್ನಲಾಗಿದ್ದು, ಈ ವೇಳೆ ವೇಗವಾಗಿದ್ದ ಬೈಕ್ ಗಳು ನಿಯಂತ್ರಣ ತಪ್ಪಿ ಪರಸ್ಪರ ಢಿಕ್ಕಿ ಹೊಡೆದಿದೆ. ಪರಿಣಾಮ ತಲೆಗೆ ಬಲವಾದ ಪೆಟ್ಟು ಬಿದ್ದು ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೊಬ್ಬ ಯುವಕ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.
ಘಟನೆ ಸಂಬಂಧ ಯಲಹಂಕ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುವಕರ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮರಣೋತ್ತರ ಪರೀಕ್ಷೆಯ ನಂತರ ಮೃತದೇಹಗಳನ್ನು ಆಸ್ಪತ್ರೆಯಲ್ಲಿರಿಸಲಾಗಿದೆ.
ಸ್ಥಳಕ್ಕೆ ಬಂದ ಯಲಹಂಕ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.