ಕೋವಿಡ್-19ಗೆ ಇನ್ನೋರ್ವ ಸಿಐಎಸ್‌ಎಫ್ ಸಿಬ್ಬಂದಿ ಬಲಿ

ಹೊಸದಿಲ್ಲಿ,ಜೂ.21: ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್)ಯ ಇನ್ನೋರ್ವ ಸಿಬ್ಬಂದಿ ರವಿವಾರ ಕೋವಿಡ್-19 ಸೋಂಕಿನಿಂದ ಮೃತಪಟ್ಟಿದ್ದು,ಇದರೊಂದಿಗೆ ಪಡೆಯಲ್ಲಿ ಈ ಮಹಾಮಾರಿಗೆ ಬಲಿಯಾದವರ ಸಂಖ್ಯೆ ಆರಕ್ಕೇರಿದೆ.
ಸಿಐಎಸ್‌ಎಫ್ ಸೇರಿದಂತೆ ಐದು ಕೇಂದ್ರೀಯ ಅರೆಸೇನಾ ಪಡೆಗಳಲ್ಲಿ ಇದು ಕೊರೋನ ವೈರಸ್‌ನಿಂದ ಸಂಭವಿಸಿದ 18ನೇ ಸಾವಿನ ಪ್ರಕರಣವಾಗಿದೆ.
ಜ್ವರ ಮತ್ತು ಉಸಿರಾಟದ ತೊಂದರೆಯಿದ್ದ ಕಾನ್‌ಸ್ಟೇಬಲ್ ಜಿತೇಂದ್ರ ಕುಮಾರ(41) ಅವರನ್ನು ಜೂ.10ರಂದು ಇಲ್ಲಿಯ ಆರ್‌ಎಂಐ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಉತ್ತರ ಪ್ರದೇಶದ ಬಾಘಪತ್ ನಿವಾಸಿಯಾದ ಕುಮಾರ್ ಅವರು ಜೈಪುರದಲ್ಲಿ ಸಿಐಎಸ್‌ಎಫ್‌ನ ಎಂಟನೇ ಮೀಸಲು
ಬೆಟಾಲಿಯನ್‌ನ ಸಿಬ್ಬಂದಿಯಾಗಿದ್ದರು. ಕೋವಿಡ್-19 ಲಾಕ್‌ಡೌನ್ ಅವಧಿಯಲ್ಲಿ ದಿಲ್ಲಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಗಾಗಿ ನಿಯೋಜಿಸಲ್ಪಟ್ಟ ಸಂದರ್ಭದಲ್ಲಿ ಅವರು ಕೊರೋನ ವೈರಸ್ ಸೋಂಕಿಗೆ ತುತ್ತಾಗಿದ್ದರು ಎಂದು ಹಿರಿಯ ಸಿಐಎಸ್‌ಎಫ್ ಅಧಿಕಾರಿಯೋರ್ವರು ತಿಳಿಸಿದರು.
ಕುಮಾರ್ ಅವರ ಸಾವಿಗೆ ಸಿಐಎಸ್‌ಎಫ್ ತೀವ್ರ ಸಂತಾಪಗಳನ್ನು ವ್ಯಕ್ತಪಡಿಸಿದೆ.
ಇತರ ಪ್ರಮುಖ ಸ್ಥಾವರಗಳ ಜೊತೆಗೆ ದೇಶದಲ್ಲಿ 60ಕ್ಕೂ ಅಧಿಕ ವಿಮಾನ ನಿಲ್ದಾಣಗಳ ಭದ್ರತಾ ಹೊಣೆಗಾರಿಕೆಯನ್ನು ಹೊಂದಿರುವ ಸಿಐಎಸ್‌ಎಫ್ ಸುಮಾರು 1.62 ಲ.ಸಿಬ್ಬಂದಿಗಳನ್ನು ಹೊಂದಿದೆ. ಶನಿವಾರದಿಂದ ಸಿಐಎಸ್‌ಎಫ್‌ನಲ್ಲಿ 24 ಹೊಸ ಕರೋನ ವೈರಸ್ ಪ್ರಕರಣಗಳು ವರದಿಯಾಗಿವೆ. ಒಟ್ಟು 255 ಸಕ್ರಿಯ ಪ್ರಕರಣಗಳಿದ್ದು,ಈವರೆಗೆ 347 ಸಿಬ್ಬಂದಿಗಳು ಗುಣಮುಖರಾಗಿದ್ದಾರೆ.







