50 ವರ್ಷ ಮೇಲ್ಪಟ್ಟ ಪೊಲೀಸ್ ಸಿಬ್ಬಂದಿಗೆ ರಜೆ ನೀಡಿ: ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸೂಚನೆ

ಬೆಂಗಳೂರು, ಜೂ.21: ಲಾಕ್‍ಡೌನ್ ಘೋಷಣೆ ಬಳಿಕ ಹಗಲಿರುಳೆನ್ನದೆ ಸೇವೆ ಸಲ್ಲಿಸುತ್ತಿರುವ ಪೊಲೀಸರಲ್ಲಿಯೂ ಕೊರೋನ ಸೋಂಕಿನ ಪ್ರಕರಣಗಳು ಕಾಣಿಸಿಕೊಳ್ಳುತ್ತಿದ್ದು, ಸೋಂಕು ಪೀಡಿತರ ಸಂಖ್ಯೆ ದಿನಂಪ್ರತಿ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ 50 ವರ್ಷ ಮೇಲ್ಪಟ್ಟ ಸಿಬ್ಬಂದಿಗೆ ರಜೆ ನೀಡಲು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸೂಚನೆ ನೀಡಿದ್ದಾರೆ.
ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದ ಎಲ್ಲ ಇನ್‍ಸ್ಪೆಕ್ಟರ್, ಪಿಎಸ್‍ಐಗಳಿಗೆ 10 ಸೂಚನೆಗಳನ್ನು ನೀಡಲಾಗಿದ್ದು, ರಕ್ತದೊತ್ತಡ, ಸಕ್ಕರೆ ಖಾಯಿಲೆ ಸೇರಿ ಆರೋಗ್ಯ ಸಮಸ್ಯೆ ಇರುವ 50 ವರ್ಷ ಮೇಲ್ಪಟ್ಟ ಪೊಲೀಸರಿಗೆ ರಜೆ ಕೊಟ್ಟು ಮನೆಗೆ ಕಳುಹಿಸಿ. ಅವರೆಲ್ಲರೂ ಮನೆಯಲ್ಲೇ ಇರುವಂತೆ ನೋಡಿಕೊಳ್ಳಿ ಎಂದು ಹೇಳಲಾಗಿದೆ ಎಂದು ತಿಳಿಸಿದರು.
ಹೆಚ್ಚಿನ ಸಂಖ್ಯೆಯಲ್ಲಿ ವಯಸ್ಕರನ್ನು ಕರ್ತವ್ಯಕ್ಕೆ ಬಳಸಿಕೊಳ್ಳಿ. ಗೃಹ ರಕ್ಷಕ ದಳದಲ್ಲೂ ಯುವಕರಿದ್ದು, ಅವರನ್ನೂ ಅಗತ್ಯವಿರುವ ಕಡೆ ಕರ್ತವ್ಯಕ್ಕೆ ನಿಯೋಜಿಸಬೇಕು. ಯಾರೇ ಸಿಬ್ಬಂದಿ ರಜೆ ಪಡೆದರೂ ಬೆಂಗಳೂರು ಬಿಟ್ಟು ಹೊರಗೆ ಹೋಗಬಾರದು. ಉತ್ತರ ಕರ್ನಾಟಕದ ಸಿಬ್ಬಂದಿ ಸಹ ಇಲ್ಲೇ ಇರಬೇಕು. ಈ ಎಲ್ಲ ಸೂಚನೆಗಳ ಪಾಲನೆ ಜವಾಬ್ದಾರಿಯನ್ನು ಇನ್‍ಸ್ಪೆಕ್ಟರ್ ಹಾಗೂ ಪಿಎಸ್‍ಐಗಳಿಗೆ ವಹಿಸಲಾಗಿದೆ ಎಂದು ತಿಳಿಸಿದರು.
ಸೋಂಕಿತ ಪೊಲೀಸರಿಗೆ ಗುಣಮಟ್ಟದ ಚಿಕಿತ್ಸೆ ಸಿಗುವಂತೆ ನೋಡಿಕೊಳ್ಳಬೇಕು. ಅವರಿಗೆ ನೀಡುವ ಊಟ, ಚಿಕಿತ್ಸೆ ಬಗ್ಗೆ ಕಾಲ ಕಾಲಕ್ಕೆ ವರದಿ ನೀಡಬೇಕು ಎಂದು ತಿಳಿಸಲಾಗಿದೆ ಎಂದು ಹೇಳಿದರು.
ಶಿಸ್ತಿನ ಇಲಾಖೆ ನಮ್ಮದಾಗಿದ್ದು, ಸಮಸ್ಯೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಅಶಿಸ್ತು ಪ್ರದರ್ಶಿಸಬಾರದು. ಪೊಲೀಸ್ ವಸತಿ ಗೃಹದ ಬಗ್ಗೆ ನಿಗಾ ವಹಿಸಲು ಹಾಗೂ ಅಪರಿಚಿತರಿಗೆ ಪ್ರವೇಶ ನೀಡಬಾರದು ಎಂದು ತಿಳಿಸಲಾಗಿದೆ ಎಂದು ಹೇಳಿದರು.
ಮಹತ್ವದ ಪ್ರಕರಣದಲ್ಲಿ ಮಾತ್ರ ಆರೋಪಿಗಳನ್ನು ಬಂಧಿಸಿ. ಡಿಸಿಪಿ ಹಾಗೂ ಎಸಿಪಿ ಅನುಮತಿ ಇಲ್ಲದೇ ಯಾರನ್ನೂ ಬಂಧಿಸಬೇಡಿ ಎಂದು ತಿಳಿಸಲಾಗಿದೆ ಎಂದು ಹೇಳಿದರು.







