ಜುಲೈ 1ರವರೆಗೆ ಕನಕಪುರ ಸ್ವಯಂಪ್ರೇರಿತ ಲಾಕ್‍ಡೌನ್: ಡಿಕೆಶಿ ನೇತೃತ್ವದ ಸಭೆಯಲ್ಲಿ ನಿರ್ಣಯ

ಕನಕಪುರ, ಜೂ.21: ಕೊರೋನ ಸೋಂಕು ತೀವ್ರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕನಕಪುರ ವಿಧಾನಸಭೆ ಕ್ಷೇತ್ರದ ನಾಗರಿಕರು ಜುಲೈ 1 ರವರೆಗೆ ಸ್ವಯಂ ಪ್ರೇರಿತ ಲಾಕ್ ಡೌನ್ ಗೆ ಸ್ಥಳೀಯ ಶಾಸಕರೂ ಆಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ರವಿವಾರ ನಡೆದ ತುರ್ತು ಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಂಡಿದ್ದಾರೆ.
ರವಿವಾರ ಕನಕಪುರ ನಗರಸಭೆ ಕಚೇರಿಯ ಸಭಾಂಗಣದಲ್ಲಿ ನಡೆದ ಈ ಸಭೆಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಈ ಲೌಕ್‍ಡೌನ್ ರಾಜ್ಯ ಸರಕಾರದ ಆದೇಶವಲ್ಲ. ಕನಕಪುರ ಜನತೆ ಮುನ್ನೆಚ್ಚರಿಕೆ ಕ್ರಮವಾಗಿ ತೆಗೆದುಕೊಂಡಿರುವ ಪ್ರಜ್ಞಾಪೂರ್ವಕ ಸ್ವಂತ ನಿರ್ಣಯ. ಜೀವವಿದ್ದರೆ ಜೀವನ ಎಂಬ ನಂಬುಗೆಯ ಆಧಾರದಲ್ಲಿ ಕೈಗೊಂಡಿರುವ ಮಾದರಿ ನಿರ್ಧಾರ. ಅದಕ್ಕಾಗಿ ಅವರನ್ನು ನಾನು ಅಭಿನಂದಿಸುತ್ತೇನೆ ಎಂದರು.
ಬೆಳಗ್ಗೆ 7 ರಿಂದ 11 ಗಂಟೆವರೆಗೆ ಮಾತ್ರ ದಿನಸಿ ವಸ್ತುಗಳು, ಹಣ್ಣು, ತರಕಾರಿ, ಸೊಪ್ಪು, ಮಾಂಸ ಮತ್ತಿತರ ದಿನಬಳಕೆ ಆಹಾರ ವಸ್ತುಗಳ ಮಾರಾಟಕ್ಕೆ ವರ್ತಕರು ಸಮ್ಮತಿಸಿದ್ದಾರೆ. ಕ್ಲಿನಿಕ್ ಗಳು, ಔಷದ ಅಂಗಡಿಗಳ ಸಮಯಾವಧಿ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳು, ಡಿಸಿ, ಎಸ್ಪಿ, ಆಸ್ಪತ್ರೆ ಪ್ರತಿನಿಧಿಗಳು ನಿರ್ಣಯ ಮಾಡುತ್ತಾರೆ ಎಂದು ಅವರು ಹೇಳಿದರು. ಅಬಕಾರಿ ಇಲಾಖೆ ಅಧಿಕಾರಿಗಳು ಹಾಗೂ ಅಸೋಸಿಯೇಷನ್ ನವರು ಮದ್ಯದಂಗಡಿಗಳ ಸಮಯ ನಿಗದಿ ಮಾಡುತ್ತಾರೆ. ಆದರೆ ಎಲ್ಲ ಬಗೆಯ ವರ್ತಕರು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು ಹಾಗೂ ವ್ಯಾಪಾರ ಸ್ಥಳದಲ್ಲಿ ಸ್ಯಾನಿಟೈಸರ್ ವ್ಯವಸ್ಥೆ ಮಾಡಬೇಕು. ಇದರ ಬಗ್ಗೆ ಪೊಲೀಸ್ ಇಲಾಖೆ ಸಿಬ್ಬಂದಿ ನಿಗಾ ವಹಿಸುತ್ತಾರೆ ಎಂದು ಅವರು ಹೇಳಿದರು.
ಕೊರೋನ ಸೋಂಕಿತರು ಚಿಕಿತ್ಸೆ ಪಡೆಯುತ್ತಿರುವ ರಾಮನಗರ ಜಿಲ್ಲೆಯ ಆಸ್ಪತ್ರೆಗಳು ಹಾಗೂ ಕ್ವಾರಂಟೈನ್ ಕೇಂದ್ರಗಳಲ್ಲಿ ಅವರ ಊಟೋಪಾಚಾರಗಳಿಗೆ ನಿತ್ಯ ಬರೀ ತಲಾ 60 ರೂ. ಮಾತ್ರ ಸರಕಾರ ನೀಡುತ್ತಿದೆ. ಇದರಿಂದ ಗುಣಮಟ್ಟದ ಆಹಾರ ಸಿಗುತ್ತಿಲ್ಲ ಎಂಬ ದೂರು ಬಂದಿದೆ. ಹೀಗಾಗಿ ಡಿ.ಕೆ.ಎಸ್. ಚಾರಿಟಬಲ್ ಟ್ರಸ್ಟ್ ನಿಂದ ಹೆಚ್ಚುವರಿಯಾಗಿ ತಲಾ 100 ರೂ. ನೀಡಲಾಗುವುದು ಎಂದು ಶಿವಕುಮಾರ್ ತಿಳಿಸಿದರು.
ಇದರಿಂದ ಒಟ್ಟಾರೆ ತಲಾ 160 ರೂ.ಗಳು ಸೋಂಕಿತರು, ಕ್ವಾರಂಟೈನ್ ಕೇಂದ್ರಗಳಲ್ಲಿ ಇರುವವರಿಗೆ ಸಿಕ್ಕಂತಾಗುತ್ತದೆ. ಜತೆಗೆ ಕ್ವಾರಂಟೈನ್ ಕೇಂದ್ರಗಳಲ್ಲಿ ಇರುವವರು ಮನೆಯಿಂದ ಹಾಸಿಗೆ, ಹೊದಿಕೆ, ಬಟ್ಟೆ ಮತ್ತಿತರ ವಸ್ತುಗಳನ್ನು ತರಿಸಿಕೊಳ್ಳಬಹುದು. ಇಲ್ಲದಿದ್ದರೆ ನಾನೇ ಟ್ರಸ್ಟ್ ಮೂಲಕ ಅದನ್ನು ಒದಗಿಸಲು ಸಿದ್ಧನಿದ್ದೇನೆ. ರೇಷ್ಮೆ ಮಾರುಕಟ್ಟೆ ತೆರೆದಿರುತ್ತಿದೆ. ಅದಕ್ಕೂ ನಿಗದಿತ ಸಮಯ ಇರುತ್ತದೆ ಎಂದು ಅವರು ಮಾಹಿತಿ ನೀಡಿದರು.
ಎಸೆಸೆಲ್ಸಿ, ಕಾಲೇಜು ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ವಿಚಾರದಲ್ಲಿ ರಾಜ್ಯ ಸರಕಾರದ ನಿರ್ಧಾರವೆ ಅಂತಿಮ. ಇದರಲ್ಲಿ ನಾವ್ಯಾರೂ ತಲೆ ಹಾಕುವುದಿಲ್ಲ. ಆದರೆ ಈ ವಿದ್ಯಾರ್ಥಿಗಳಿಗೆ 1 ಲಕ್ಷ ಮಾಸ್ಕ್ ಗಳನ್ನು ವಿತರಿಸಲಾಗುವುದು. ಈಗಾಗಲೇ ಅದನ್ನು ಸಿದ್ಧಪಡಿಸಿ ಇಟ್ಟುಕೊಳ್ಳಲಾಗಿದೆ. ಈ ಸ್ವಯಂ ಪ್ರೇರಿತ ಲಾಕ್ ಡೌನ್ ಸಂದರ್ಭದಲ್ಲಿ ಅನಗತ್ಯ ಓಡಾಟ ವಾಹನ ಸಂಚಾರಕ್ಕೆ ಕಡಿವಾಣ ಹಾಕಿಕೊಳ್ಳಬೇಕು. ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು. ಯಾರೂ ಯಾರ ಮೇಲೂ ದಬ್ಬಾಳಿಕೆ ಮಾಡಬಾರದು ಎಂದು ಶಿವಕುಮಾರ್ ಸೂಚಿಸಿದರು.
ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಇಲಾಖೆಗಳ ಅಧಿಕಾರಿಗಳು, ಸಾಮಾಜಿಕ ಮತ್ತು ನಾಗರಿಕ ಸಂಘಟನೆಗಳ ಪ್ರತಿನಿಧಿಗಳು, ಉದ್ಯಮಿಗಳು, ವರ್ತಕರು ಮತ್ತಿತರರು ಭಾಗವಹಿಸಿದ್ದ ಈ ಸಭೆಯಲ್ಲಿ ಜು.1 ರವರೆಗೆ ಕನಕಪುರ ಸ್ವಯಂ ಪ್ರೇರಿತ ಲಾಕ್ ಡೌನ್ (ಸೆಲ್ಫ್ ಕ್ವಾರಂಟೈನ್) ಬಗ್ಗೆ ಏಕಮತ ನಿರ್ಧಾರಕ್ಕೆ ಬರಲಾಯಿತು. ಇದು ಮಕ್ಕಳು, ವೃದ್ಧರು ಸೇರಿದಂತೆ ಸ್ಥಳೀಯ ನಾಗರಿಕರ ಹಿತದೃಷ್ಟಿ, ಆರೋಗ್ಯ ರಕ್ಷಣೆ, ಕನಕಪುರ ಕ್ಷೇತ್ರದ ಗೌರವ ಕಾಪಾಡಿಕೊಳ್ಳಲು ಅನಿವಾರ್ಯ. ಜು.1ರ ನಂತರ ಪರಿಸ್ಥಿತಿಯನ್ನು ಅವಲೋಕಿಸಿ, ಇದೇ ರೀತಿ ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳೋಣವೆಂದು ಸಭೆಯಲ್ಲಿ ನಿರ್ಣಯಿಸಲಾಯಿತು.
ಸಭೆಯಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಸದಸ್ಯ ಡಿ.ಕೆ.ಸುರೇಶ್, ವಿಧಾನ ಪರಿಷತ್ ಸದಸ್ಯ ಎಸ್.ರವಿ, ರಾಮನಗರ ಜಿಲ್ಲಾಧಿಕಾರಿ ಅರ್ಚನಾ, ಎಸ್ಪಿ ಅನೂಪ್ ಶೆಟ್ಟಿ, ಕನಕಪುರ ಯೋಜನೆ ಪ್ರಾಧಿಕಾರದ ಅಧ್ಯಕ್ಷ ಜಗನ್ನಾಥ್ ಭಾಗವಹಿಸಿದ್ದರು.







