ಟ್ರಂಪ್‌ರ ಟಲ್ಸ ಪ್ರಚಾರ ತಂಡದ 6 ಮಂದಿಗೆ ಕೊರೋನ ವೈರಸ್

ಟಲ್ಸ (ಅಮೆರಿಕ), ಜೂ. 21: ಅಮೆರಿಕದ ಓಕ್ಲಹಾಮದ ಟಲ್ಸದಲ್ಲಿ ಶನಿವಾರ ನಡೆದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಚುನಾವಣಾ ಪ್ರಚಾರ ಕಾರ್ಯಕ್ರಮದ ಉಸ್ತುವಾರಿ ಹೊತ್ತಿದ್ದ ತಂಡದ ಆರು ಸದಸ್ಯರು ಕೊರೋನ ವೈರಸ್ ಸೋಂಕಿಗೆ ಗುರಿಯಾಗಿದ್ದಾರೆ ಎಂದು ಅವರ ಪ್ರಚಾರ ತಂಡ ತಿಳಿಸಿದೆ. ಆ ಕಾರ್ಯಕ್ರಮದಲ್ಲಿ ಟ್ರಂಪ್ ಭಾಗವಹಿಸುವ ಗಂಟೆಗಳ ಮೊದಲು ಅವರಿಗೆ ಕೊರೋನ ತಗಲಿರುವ ವಿಷಯ ಬೆಳಕಿಗೆ ಬಂದಿದೆ.
ಕೊರೋನ ವೈರಸ್ ಹಿನ್ನೆಲೆಯಲ್ಲಿ, ಅಮೆರಿಕದಲ್ಲಿ ಹಲವು ತಿಂಗಳ ಕಾಲ ಚುನಾವಣಾ ಪ್ರಚಾರ ಕಾರ್ಯಕ್ರಮಗಳು ಸ್ಥಗಿತಗೊಂಡ ಬಳಿಕ, ಟ್ರಂಪ್‌ರ ಈ ಪ್ರಚಾರ ಕಾರ್ಯಕ್ರಮವು ಮೊದಲನೆಯದಾಗಿದೆ. ಅದೇ ವೇಳೆ, ಟ್ರಂಪ್‌ರ ಈ ಕಾರ್ಯಕ್ರಮವು ಕೊರೋನ ವೈರಸ್‌ನ ‘ಸೂಪರ್ ಸ್ಪ್ರೆಡರ್’ (ಸೋಂಕಿನ ಗತಿಯನ್ನು ಅತಿ ವೇಗವಾಗಿ ವಿಸ್ತರಿಸುವ) ಕಾರ್ಯಕ್ರಮವಾಗಬಹುದಾಗಿದೆ ಎಂಬುದಾಗಿ ಅವರ ಟೀಕಾಕಾರರು ಈಗಾಗಲೇ ಆರೋಪಿಸಿದ್ದಾರೆ.
‘‘ಸುರಕ್ಷತಾ ನಿಯಮಗಳಂತೆ, ಕಾರ್ಯಕ್ರಮಕ್ಕೆ ಮುಂಚಿತವಾಗಿ ಅಭಿಯಾನ ಸಿಬ್ಬಂದಿಯನ್ನು ಕೋವಿಡ್-19 ತಪಾಸಣೆಗೆ ಗುರಿಪಡಿಸಲಾಗಿದೆ’’ ಎಂದು ಟ್ರಂಪ್ ಚುನಾವಣಾ ಅಭಿಯಾನದ ಸಂವಹನ ನಿರ್ದೇಶಕ ಟಿಮ್ ಮರ್ಟಾ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
‘‘ಈಗಾಗಲೇ ನೂರಾರು ಪರೀಕ್ಷೆಗಳನ್ನು ಮಾಡಲಾಗಿದ್ದು ತಂಡದ ಆರು ಸದಸ್ಯರಲ್ಲಿ ಸೋಂಕು ಪತ್ತೆಯಾಗಿದೆ ಹಾಗೂ ಅವರನ್ನು ತಕ್ಷಣ ಕ್ವಾರಂಟೈನ್‌ನಲ್ಲಿರಿಸಲಾಗಿದೆ’’ ಎಂದು ಮರ್ಟಾ ತಿಳಿಸಿದರು.





