2 ದಿನಗಳಲ್ಲಿ ವಿದೇಶಿ ಉದ್ಯೋಗಿಗಳ ವೀಸಾಗಳಿಗೆ ನಿರ್ಬಂಧ: ಟ್ರಂಪ್

ವಾಶಿಂಗ್ಟನ್, ಜೂ. 21: ಕೊರೋನ ವೈರಸ್ ಸಾಂಕ್ರಾಮಿಕದಿಂದಾಗಿ ಉದ್ಯೋಗ ಕಳೆದುಕೊಂಡಿರುವ ಅಮೆರಿಕನ್ನರನ್ನು ರಕ್ಷಿಸುವುದಕ್ಕಾಗಿ ನಿರ್ದಿಷ್ಟ ವಿದೇಶಿ ಉದ್ಯೋಗಿಗಳ ಅಮೆರಿಕ ಪ್ರವೇಶವನ್ನು ತಡೆಯಲು ಇನ್ನೆರಡು ದಿನಗಳಲ್ಲಿ ಹೊಸ ವೀಸಾ ನಿರ್ಬಂಧಗಳನ್ನು ಘೋಷಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಹೇಳಿದ್ದಾರೆ.
‘‘ವೀಸಾಗಳ ಬಗ್ಗೆ ಕೆಲವು ವಿಚಾರಗಳನ್ನು ನಾಳೆ ಅಥವಾ ಅದರ ಮಾರನೇ ದಿನ ನಾವು ಘೋಷಿಸಲಿದ್ದೇವೆ’’ ಎಂದು ‘ಫಾಕ್ಸ್ ನ್ಯೂಸ್’ ಚಾನೆಲ್‌ನೊಂದಿಗೆ ಮಾತನಾಡಿದ ಅವರು ಹೇಳಿದರು.
ಹೊಸ ನಿರ್ಬಂಧಗಳಿಂದ ಯಾರಿಗಾದರೂ ವಿನಾಯಿತಿಯಿದೆಯೇ ಎಂಬ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ತುಂಬಾ ಕಡಿಮೆ ವಿನಾಯಿತಿಗಳಿವೆ ಎಂದುತ್ತರಿಸಿದರು.
‘‘ದೊಡ್ಡ ಉದ್ಯಮಗಳಿಗಾಗಿ ಈ ರಿಯಾಯಿತಿಗಳ ಅಗತ್ಯವಿದೆ. ಅಲ್ಲಿಗೆ ತುಂಬಾ ಸಮಯದಿಂದ ಜನರು ವಿದೇಶಗಳಿಂದ ಬರುತ್ತಿದ್ದಾರೆ. ಆದರೆ, ವಿನಾಯಿತಿ ತುಂಬಾ ಕಡಿಮೆಯಿರುತ್ತದೆ ಹಾಗೂ ಕಠಿಣವಾಗಿರುತ್ತದೆ. ಹಾಗೂ ನಿರ್ದಿಷ್ಟ ಅವಧಿಗೆ ವಿನಾಯಿತಿಗಳಿಲ್ಲದೆಯೂ ಹೋಗಬಹುದು’’ ಎಂದರು.
ಆದರೆ, ಅವರು ಹೆಚ್ಚಿನ ವಿವರಗಳನ್ನು ನೀಡಲು ನಿರಾಕರಿಸಿದರು.





