ಬೋಲ್ಟನ್ ಪುಸ್ತಕಕ್ಕೆ ತಡೆ ಹಾಕಲು ನ್ಯಾಯಾಧೀಶ ನಕಾರ
ವಾಶಿಂಗ್ಟನ್, ಜೂ. 21: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್‌ರ ನೂತನ ಪುಸ್ತಕದ ಪ್ರಕಟನೆಯನ್ನು ತಡೆಯಲು ಅಮೆರಿಕದ ನ್ಯಾಯಾಧೀಶರೊಬ್ಬರು ಶನಿವಾರ ನಿರಾಕರಿಸಿದ್ದಾರೆ.
ತನ್ನ ಪುಸ್ತಕದಲ್ಲಿ ಬೋಲ್ಟನ್ ಟ್ರಂಪ್‌ರನ್ನು ಅಸಮರ್ಥ ಹಾಗೂ ಭ್ರಷ್ಟ ಎಂಬುದಾಗಿ ಬಣ್ಣಿಸಿದ್ದಾರೆ ಎಂದು ಹೇಳಲಾಗಿದೆ. ಅದೂ ಅಲ್ಲದೆ, ಅಧ್ಯಕ್ಷೀಯ ಚುನಾವಣೆ ಹತ್ತಿರ ಬರುತ್ತಿದ್ದಂತೆ, ಟ್ರಂಪ್‌ರನ್ನು ಇಕ್ಕಟ್ಟಿಗೆ ಸಿಲುಕಿಸಬಲ್ಲ ಹಲವು ಘಟನೆಗಳನ್ನು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ ಎನ್ನಲಾಗಿದೆ.
ಅವರ ಪುಸ್ತಕ ‘ದ ರೂಮ್ ವೇರ್ ಇಟ್ ಹ್ಯಾಪನ್ಡ್’ ಮಂಗಳವಾರ ಅಮೆರಿಕದಲ್ಲಿ ಬಿಡುಗಡೆಯಾಗಲಿದೆ.
ತನ್ನ ಪುಸ್ತಕದಲ್ಲಿ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಚಾರಗಳಿಲ್ಲ ಎಂಬ ಬಗ್ಗೆ ಶ್ವೇತಭವನಕ್ಕೆ ಮನವರಿಕೆ ಮಾಡಿ ಅನುಮತಿ ತೆಗೆದುಕೊಳ್ಳುವಲ್ಲಿ ಬೋಲ್ಟನ್ ವಿಫಲರಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಅದೇ ವೇಳೆ, ಪುಸ್ತಕದ ಬಿಡುಗಡೆಗೆ ತಡೆಯೊಡ್ಡುವುದು ಸೂಕ್ತ ಪರಿಹಾರ ಎನ್ನುವುದನ್ನು ಸಾಬೀತುಪಡಿಸಲು ಸರಕಾರವೂ ವಿಫಲವಾಗಿದೆ ಎಂದು ನ್ಯಾಯಾಧೀಶ ರಾಯ್ಸಾ ಲ್ಯಾಂಬರ್ಟ್ ತನ್ನ ತೀರ್ಪಿನಲ್ಲಿ ಹೇಳಿದ್ದಾರೆ.







