ಚೀನಿ ಉತ್ಪನ್ನಗಳನ್ನು ಬಹಿಷ್ಕರಿಸಿದಲ್ಲಿ ಭಾರತಕ್ಕೆ ಆರ್ಥಿಕ ಹಾನಿ: ಬ್ರಿಟನ್ ಅರ್ಥಶಾಸ್ತ್ರಜ್ಞ ಸ್ಟೀವ್ ಎಚ್.ಹ್ಯಾಂಕ್

ಹೊಸದಿಲ್ಲಿ,ಜೂ.21: ಚೀನಾದ ಜೊತೆಗಿನ ಮಿಲಿಟರಿ ಸಂಘರ್ಷದಲ್ಲಿ ತೊಡಗುವ ಬದಲು ಭಾರತವು ತನ್ನ ಆರ್ಥಿಕ ಸುಧಾರಣೆಗಳ ಬಗ್ಗೆ ಗಮನಹರಿಸುವ ಅಗತ್ಯವಿದೆಯೆಂದು ಅಮೆರಿಕದ ಜಾನ್ ಹಾಪ್ಕಿನ್ಸ್ ವಿವಿ.ಯ ಅನ್ವಯಿಕ ಅರ್ಥಶಾಸ್ತ್ರದ ಪ್ರೊಫೆಸರ್ ಸ್ಟೀವ್ ಎಚ್.ಹ್ಯಾಂಕ್ ಅಭಿಪ್ರಾಯಿಸಿದ್ದಾರೆ. ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸಿದಲ್ಲಿ ಅದರಿಂದ ಭಾರತಕ್ಕೇ ಅಧಿಕ ಹಾನಿಯಾಗಲಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಔಟ್‌ಲುಕ್‌ನ ಜೀವನ್ ಪ್ರಕಾಶ್ ಶರ್ಮಾ ಅವರಿಗೆ ಈಮೇಲ್ ಮೂಲಕ ಸಂದರ್ಶನ ನೀಡಿರುವ ಅವರು, ಗಲ್ವಾನ್ ಕಣಿವೆಯಲ್ಲಿನ ಘರ್ಷಣೆಯು ಚೀನಾ ನಡೆಸಿದ ಪೂರ್ವಯೋಜಿತ ದಾಳಿಯಲ್ಲ. ಆದರೆ ಕೋವಿಡ್-19 ಸಮಸ್ಯೆಗಳಿಂದ ಚೀನಾದ ಜನತೆಯ ಗಮನವನ್ನು ಬೇರೆಡೆ ಸೆಳೆಯಲು, ಈ ಘಟನೆಯನ್ನು ರಾಷ್ಟ್ರೀಯವಾದದ ಉನ್ಮಾದವನ್ನು ಸೃಷ್ಟಿಸಲು ಅದನ್ನು ಚೀನಾ ಆಡಳಿತ ಬಳಸಿಕೊಳ್ಳಲಿದೆ ಎಂದರು.
ಗಲ್ವಾನ್ ಕಣಿವೆಯು ತನ್ನ ಪ್ರದೇಶವೆಂದು ಚೀನಾ ಭಾವಿಸುತ್ತಿದ್ದು, ಅವರು ಅದನ್ನು ಕಬಳಿಸಲು ಬಯಸುತ್ತಿದ್ದಾರೆ. ಇದಕ್ಕಾಗಿ ಅವರು ಏನನ್ನೂ ಮಾಡಲು ಸಿದ್ಧರಿದ್ದಾರೆ. ಚೀನಾ ಅಧ್ಯಕ್ಷ ಕ್ಸಿಜಿನ್‌ಪಿಂಗ್ ಅವರ ಅಧಿಕಾರಾವಧಿಯಲ್ಲಿ ಚೀನಾದ ಪ್ರಾದೇಶಿಕ ಮಹತ್ವಾಕಾಂಕ್ಷೆಗಳು ಹೆಚ್ಚು ಆಕ್ರಮಣಕಾರಿಯಾಗಿವೆ ಎಂದು ಹ್ಯಾಂಕ್ ಹೇಳಿದ್ದಾರೆ.
ಚೀನಾದ ಎಲ್ಲ ಉತ್ಪನ್ನಗಳಿಗೂ ಭಾರತವು ಒಂದು ಬೃಹತ್ ಮಾರುಕಟ್ಟೆಯಾಗಿದೆ. ಗಡಿಯಲ್ಲಿ ಉದ್ವಿಗ್ನತೆ ಉಲ್ಬಣಿಸುವುದರಿಂದ ಭಾರತೀಯರು ಚೀನಿ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಪ್ರಚೋದನೆ ನೀಡಲಿದೆಯೆಂಬುದನ್ನು ಚೀನಿಯರು ಮೊದಲೇ ಅರಿತುಕೊಂಡಿದ್ದಾರೆಂದು ಅವರು ಹೇಳಿದರು.
ಆದರೆ ಚೀನಿ ಉತ್ಪನ್ನಗಳನ್ನು ನಿಷೇಧಿಸುವುದರಿಂದ ಭಾರತಕ್ಕೆ ಅಧಿಕ ಹಾನಿಯಾಗಲಿದೆ. ‘ಭಾರತೀಯ ಮೂಲಭೂತವಾದಿಗಳು ತಮ್ಮ ಕಾಲಿಗೆ ತಾವು ಗುಂಡಿಕ್ಕಿಕೊಳ್ಳುವುದನ್ನು ಚೀನಿಯರು ಆನಂದಿಸುತ್ತಾರೆ ’ ಎಂದು ಹ್ಯಾಂಕ್ ಹೇಳಿದ್ದಾರೆ.
ಮೋದಿ ಅವರು ತನ್ನ ರಾಷ್ಟ್ರವಾದಿ ವಾಕ್ ವೈಖರಿಯಿಂದ ಹಿಂದೆ ಸರಿದು, ಅವರು ಭರವಸೆ ನೀಡಿದ್ದರೂ ಈಡೇರಿಸದಿರುವ ನೈಜವಾದ ಆರ್ಥಿಕ ಸುಧಾರಣೆಗಳ ಬಗ್ಗೆ ಗಮನಹರಿಸಬೇಕು. ಪ್ರಧಾನಿ ಮೋದಿ ಹಾಗೂ ಕ್ಸಿ ಇಬ್ಬರೂ ಕಟ್ಟರ್ ವಾದಿ ನಾಯಕರಾಗಿದ್ದು, ಅವರು ರಾಷ್ಟ್ರವಾದದ ಕಾರ್ಡ್ ಗಳನ್ನು ಬಳಸುತ್ತಿರುವುದು ಅತ್ಯಂತ ಅಪಾಯಕಾರಿ ಆಟವಾಗಿದೆ ಎಂದವರು ತಿಳಿಸಿದ್ದಾರೆ.







