ಬೆಂಗಳೂರು: ಒಂದೇ ದಿನ 196 ಮಂದಿಗೆ ಕೊರೋನ ದೃಢ; ಸೋಂಕಿತರ ಸಂಖ್ಯೆ 1,272ಕ್ಕೆ ಏರಿಕೆ

ಬೆಂಗಳೂರು, ಜೂ.21: ನಗರದಲ್ಲಿ ರವಿವಾರವೂ ಕೊರೋನ ಅಟ್ಟಹಾಸ ಮುಂದುವರಿದಿದ್ದು, 42 ಪೊಲೀಸರು ಸೇರಿದಂತೆ ಒಂದೇ ದಿನ 196 ಹೊಸ ಕೊರೋನ ಪ್ರಕರಣ ದೃಢಪಟ್ಟಿವೆ. ಅಲ್ಲದೇ ಮೂರು ಮಂದಿ ಮೃತಪಟ್ಟಿದ್ದಾರೆ.
ಇಲ್ಲಿಯವರೆಗೆ ನಗರದಲ್ಲಿ 1,272 ಕೊರೋನ ಸೋಂಕಿತರು ಪತ್ತೆಯಾಗಿದ್ದಾರೆ. 796 ಜನರು ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 64 ಜನರು ಸೋಂಕಿಗೆ ಬಲಿಯಾಗಿದ್ದು, ಓರ್ವ ವ್ಯಕ್ತಿ ಅನ್ಯಕಾರಣದಿಂದ ಮೃತರಾಗಿದ್ದಾನೆ.
ಅಲ್ಲದೇ ರವಿವಾರ 17 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 36 ಜನರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ 31 ಜ್ವರ ಚಿಕಿತ್ಸಾಲಯದಲ್ಲಿ ಒಟ್ಟು 15,131 ವ್ಯಕ್ತಿಗಳಿಗೆ ಕೊರೋನ ತಪಾಸಣೆ ಮಾಡಲಾಗಿದೆ. ರವಿವಾರ ಒಂದೇ ದಿನ 196 ಪ್ರಕರಣ ದಾಖಲಾಗಿದ್ದು, ಇದರಲ್ಲಿ 42 ಪೊಲೀಸರೂ ಸೇರಿದ್ದಾರೆ.
ಮೂವರು ಮೃತ
ರೋಗಿ ನಂ. 6,553 ಬೆಂಗಳೂರು ಮೂಲದ 53 ವರ್ಷದ ಮಹಿಳೆ. ಜ್ವರದ ಲಕ್ಷಣಗಳು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಜೂ.10ರಂದು ದಾಖಲಾಗಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಜೂ.20ರಂದು ನಿಧನರಾಗಿದ್ದಾರೆ.
ರೋಗಿ ನಂ.8,872, ಬೆಂಗಳೂರು ಮೂಲದ 62 ವರ್ಷದ ಪುರುಷ ಜ್ವರದ ಲಕ್ಷಣಗಳು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಜೂ.16ರಂದು ದಾಖಲಾಗಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಅಂದೇ ನಿಧನರಾಗಿದ್ದಾರೆ.
ರೋಗಿ ನಂ. 8,880 ಬೆಂಗಳೂರು ಮೂಲದ ವ್ಯಕ್ತಿ ಉಸಿರಾಟದ ತೊಂದರೆ ಹಿನ್ನೆಲೆಯಲ್ಲಿ ಜೂನ್ 18ರಂದು ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಜೂ.20ರಂದು ನಿಧನರಾಗಿದ್ದಾರೆ.
ಹಜ್ ಭವನ ತಾತ್ಕಾಲಿಕ ಕೊರೋನ ಆಸ್ಪತ್ರೆ
ನಗರದಲ್ಲಿ ಕೊರೋನ ಸಂಖ್ಯೆ ದಿನದಿಂದ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹಜ್ ಭವನವನ್ನು ಕೊರೋನ ಸೋಂಕು ಚಿಕಿತ್ಸಾ ಕೇಂದ್ರವಾಗಿ ಬದಲಾಯಿಸಲಾಗಿದೆ. ಹಜ್ ಭವನದಲ್ಲಿ 500 ಜನರಿಗೆ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, ಇಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡವರಿಗೆ ಚಿಕಿತ್ಸೆ ನೀಡಲು ಪಾಲಿಕೆ ಮುಂದಾಗಿದೆ.
ಚಿಕ್ಕಪೇಟೆ ಒಂದು ವಾರ ಕಾಲ ಸ್ವಯಂ ಬಂದ್
ನಗರದ ಚಿಕ್ಕಪೇಟೆ ವ್ಯಾಪ್ತಿಯಲ್ಲಿ ಕೊರೋನ ಪ್ರಕರಣಗಳು ದಿನೇ ದಿನೇ ಏರಿಕೆಯಾಗುತ್ತಿರುವ ಹಿನ್ನೆಲೆ ಅಲ್ಲಿನ ವ್ಯಾಪಾರಿ ಸಂಘಟನೆಗಳು ಒಂದು ವಾರ ಸ್ವಯಂ ಬಂದ್ ಮಾಡಲು ನಿರ್ಧರಿಸಿವೆ. ಈಗಾಗಲೇ ಚಿಕ್ಕಪೇಟೆಯ ವ್ಯಾಪ್ತಿಯಲ್ಲಿ 25 ಮಂದಿಗೆ ಕೊರೋನ ಸೋಂಕು ತಗುಲಿದೆ. ಅಲ್ಲದೇ ಇನ್ನೂ ಸೋಂಕಿತರ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿರುವ ಹಿನ್ನೆಲೆ ಚಿಕ್ಕಪೇಟೆಯಲ್ಲಿನ ಸುಮಾರು 8 ರಿಂದ 10 ವ್ಯಾಪಾರಿ ಸಂಘಗಳು ಅಂಗಡಿಗಳನ್ನು ಬಂದ್ ಮಾಡಲು ನಿರ್ಧರಿಸಿದ್ದು, ಚಿಕ್ಕಪೇಟೆ ಮಾರುಕಟ್ಟೆ ಜೂ.22ರಿಂದ ಜೂ.28ರವರೆಗೆ ಬಂದ್ ಮಾಡಲಾಗಿದೆ.
ಕಲಾಸಿಪಾಳ್ಯ ಠಾಣೆಯ 23 ಪೊಲೀಸರಿಗೆ ಕೊರೋನ
ನಗರದ ಕಲಾಸಿಪಾಳ್ಯ ಪೊಲೀಸ್ ಠಾಣೆಯ ಒಟ್ಟು 23 ಸಿಬ್ಬಂದಿಗೆ ಕೊರೋನ ಸೋಂಕು ಕಂಡುಬಂದಿದೆ. ಮೊದಲು ಎಂಟು ಮಂದಿ ಪೊಲೀಸರಿಗೆ ಕೊರೋನ ಸೋಂಕು ಕಾಣಿಸಿಕೊಂಡಿತ್ತು. ಆನಂತರ ಠಾಣೆಯ ಇತರೆ ಸಿಬ್ಬಂದಿಗೆ ಗಂಟಲು ದ್ರವ ಪರೀಕ್ಷೆ ಮಾಡಿಸಿದಾಗ ಇನ್ನೂ 15 ಮಂದಿಗೆ ಸೋಂಕು ಇರುವುದು ಕಂಡುಬಂದಿದೆ ಎಂದು ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೇಂದು ಮುಖರ್ಜಿ ತಿಳಿಸಿದ್ದಾರೆ.
ಸಂಚಾರಿ ವಿಭಾಗದ 18 ಪೊಲೀಸರಿಗೆ ಕೊರೋನ
ಬೆಂಗಳೂರು ನಗರ ಸಂಚಾರಿ ವಿಭಾಗದಲ್ಲಿ ಕೆಲಸ ಮಾಡುವ 18 ಮಂದಿ ಪೊಲೀಸರಿಗೆ ಕೊರೋನ ತಗುಲಿದೆ. ನಗರ ಸಂಚಾರಿ ಪೊಲೀಸ್ ವಿಭಾಗದಲ್ಲಿ ಈವರೆಗೂ ಇಬ್ಬರು ಎಎಸೈ ಗಳು ಸಾವನ್ನಪ್ಪಿದ್ದಾರೆ. ಒಬ್ಬರು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಉಳಿದ 15 ಮಂದಿ ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಂಟಿ ಪೊಲೀಸ್ ಆಯುಕ್ತ(ಸಂಚಾರಿ) ರವಿಕಾಂತೇಗೌಡ ತಿಳಿಸಿದ್ದಾರೆ.
ಮೂರು ಕೊರೋನ ಸೆಂಟರ್ ಸ್ಥಾಪನೆ
ನಗರದಲ್ಲಿ ಕೊರೋನ ಪ್ರಕರಣಗಳು ದಿನೇ ದಿನೇ ಏರಿಕೆಯಾಗುತ್ತಿರುವ ಹಿನ್ನೆಲೆ ನಗರದಲ್ಲಿರುವ ಒಳಾಂಗಣ ಕ್ರೀಡಾಂಗಣಗಳನ್ನು ಕೊರೋನ ಸೆಂಟರ್ ಗಳನ್ನಾಗಿ ಮಾಡಲು ಸರಕಾರ ನಿರ್ಧರಿಸಿದೆ. ನಗರದ ರವಿಶಂಕರ್ ಆಶ್ರಮ, ಕಂಠೀರವ ಒಳಾಂಗಣ ಕ್ರೀಡಾಂಗಣ ಹಾಗೂ ಕೋರಮಂಗಲ ಒಳಾಂಗಣ ಕ್ರೀಡಾಂಗಣಗಳನ್ನು ರೋಗ ಲಕ್ಷಣವಿಲ್ಲದ ಕೊರೋನ ಸೋಂಕಿತರ ಚಿಕಿತ್ಸಾ ಕೇಂದ್ರಗಳಾಗಿ ಕಾರ್ಯ ನಿರ್ವಹಿಸಲಿವೆ.
ಕಂಟೈನ್ಮೆಂಟ್ ಝೋನ್ ಏರಿಕೆ
ಬೊಮ್ಮನಹಳ್ಳಿ ವಲಯ- 8, ದಾಸರಹಳ್ಳಿ ವಲಯ- 9, ಬೆಂಗಳೂರು ಪೂರ್ವ ವಲಯ- 45, ಮಹದೇವಪುರ ವಲಯ- 31, ರಾಜರಾಜೇಶ್ವರಿ ನಗರ- 12, ಬೆಂಗಳೂರು ದಕ್ಷಿಣ ವಲಯ- 81, ಬೆಂಗಳೂರು ಪಶ್ಚಿಮ ವಲಯ- 38 ಯಲಹಂಕ ವಲಯ- 17 ಕಂಟೈನ್ಮೆಂಟ್ ಝೋನ್ ಗಳನ್ನಾಗಿ ಮಾಡಲಾಗಿದೆ.







