ಭಾರತೀಯ ವಾಯುಪಡೆ ಅಕಾಡಮಿಯಲ್ಲಿ ಪ್ರಥಮ ಸ್ಥಾನ ಗಳಿಸಿದ ಚಹಾ ಮಾರಾಟಗಾರನ ಪುತ್ರಿ

ಫೋಟೊ ಕೃಪೆ: ಟ್ವಿಟರ್
ಹೊಸದಿಲ್ಲಿ,ಜೂ.21: ಮಧ್ಯಪ್ರದೇಶದ ನೀಮಚ್ ಜಿಲ್ಲೆಯಲ್ಲಿ ಚಹಾ ಮಾರಾಟ ಮಾಡುತ್ತಿರುವ ಸುರೇಶ್ ಗಂಗ್ವಾಲ್ ಅವರ ಪುತ್ರಿ ಆಂಚಲ್ ಗಂಗ್ವಾಲ್ ಭಾರತೀಯ ವಾಯುಪಡೆ ಅಕಾಡೆಮಿಯಿಂದ ಫ್ಲೈಯಿಂಗ್ ಆಫೀಸರ್ ಆಗಿ ಹೊರಹೊಮ್ಮಿದ್ದಾರೆ, ಅದೂ ಪ್ರಥಮ ಸ್ಥಾನದೊಂದಿಗೆ. ರಾಷ್ಟ್ರಪತಿಗಳ ಫಲಕಕ್ಕೆ ಪಾತ್ರರಾಗಿರುವ ಆಂಚಲ್ಗೆ ಅದನ್ನು ಶನಿವಾರ ಪ್ರದಾನಿಸಲಾಗಿದ್ದು,ಅದನ್ನು ಟಿವಿಯಲ್ಲಿ ವೀಕ್ಷಿಸುತ್ತಿದ್ದ ಸುರೇಶ್ ಗಂಗ್ವಾಲ್ ಮಗಳ ಬಗ್ಗೆ ಹೆಮ್ಮೆ ಪಟ್ಟುಕೊಂಡಿದ್ದಾರೆ.
ನೀಮಚ್ನ ಸರಕಾರಿ ಇಂಜಿನಿಯರಿಂಗ್ ಕಾಲೇಜಿನಿಂದ ಕಂಪ್ಯೂಟರ್ ಸೈನ್ಸ್ನಲ್ಲಿ ಪದವಿ ಪಡೆದ ಬಳಿಕ ಆಂಚಲ್ ಮಧ್ಯಪ್ರದೇಶ ಪೊಲೀಸ್ ಇಲಾಖೆಯಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿ ಸೇರಿದ್ದರು. ಬಳಿಕ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು ಲೇಬರ್ ಇನ್ಸ್ಪೆಕ್ಟರ್ ಹುದ್ದೆಗೆ ಆಯ್ಕೆಯಾದಾಗ ಎಸ್ಐ ಹುದ್ದೆಗೆ ರಾಜೀನಾಮೆ ನೀಡಿದ್ದರು. ವಾಯುಪಡೆಗೆ ಸೇರುವ ಮುನ್ನ ಎಂಟು ತಿಂಗಳು ಅವರು ಲೇಬರ್ ಇನ್ಸ್ಪೆಕ್ಟರ್ ಎಂದು ಕೆಲಸ ಮಾಡಿದ್ದರು.
ಇಂಜಿನಿಯರಿಂಗ್ ಪದವಿಯನ್ನು ಮುಗಿಸಿದ್ದ ಬೆನ್ನಿಗೇ ಆಂಚಲ್ ವಾಯುಪಡೆ ಸಾಮಾನ್ಯ ಪ್ರವೇಶ ಪರೀಕ್ಷೆ (ಎಎಫ್ಸಿಎಟಿ)ಗೆ ಹಾಜರಾಗಲು ಆರಂಭಿಸಿದ್ದರು ಮತ್ತು ತನ್ನ ಆರನೇ ಪ್ರಯತ್ನದಲ್ಲಿ ಯಶಸ್ಸು ಸಾಧಿಸಿದ್ದರು.





