ರಾಜ್ಯ ಸರಕಾರಕ್ಕೆ 10 ಲಕ್ಷ ರೂ. ದಂಡ ವಿಧಿಸಿದ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ

ಬೆಂಗಳೂರು, ಜೂ.21: ನಗರದ ಬೊಮ್ಮಸಂದ್ರ ವ್ಯಾಪ್ತಿಯ ಕಿತ್ತಗಾನಹಳ್ಳಿ ಕೆರೆಯಲ್ಲಿ ಸಮರ್ಪಕವಾಗಿ ಮಾಲಿನ್ಯ ನಿಯಂತ್ರಣ ಮಾಡಿಲ್ಲ ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ರಾಜ್ಯ ಸರಕಾರಕ್ಕೆ 10 ಲಕ್ಷ ರೂ. ಮತ್ತು ಬೊಮ್ಮಸಂದ್ರ ಪುರಸಭೆಗೆ 5 ಲಕ್ಷ ರೂ.ದಂಡ ವಿಧಿಸಿದೆ.
ಕಿತ್ತಗಾನಹಳ್ಳಿ ಕೆರೆಯಲ್ಲಿ ಮಾಲಿನ್ಯ ಕಾರಕ ವಸ್ತುಗಳು ಕೆರೆ ಸೇರುವುದನ್ನು ತಡೆಯುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿ ಸಂಜಯ್ ರಾವ್ ಹಾಗೂ ಇತರರು ಅರ್ಜಿ ಸಲ್ಲಿಸಿದ್ದರು.
ರವಿವಾರ ಎನ್‌ಜಿಟಿ ಅಧ್ಯಕ್ಷ ಹಾಗೂ ನ್ಯಾಯಮೂರ್ತಿ ಆದರ್ಶ್ ಕುಮಾರ್ ಗೋಯೆಲ್ ನೇತೃತ್ವದ ನ್ಯಾಯಪೀಠವು ಅರ್ಜಿ ವಿಚಾರಣೆ ನಡೆಸಿ, ಬೊಮ್ಮಸಂದ್ರ ಪುರಸಭೆಯು ಕರ್ತವ್ಯ ನಿರ್ವಹಿಸುವಲ್ಲಿ ವಿಫಲವಾಗಿದೆ ಹಾಗೂ ಪರಿಸರಕ್ಕೆ ಹಾನಿಯುಂಟಾಗಿದ್ದರಿಂದ ರಾಜ್ಯ ಸರ್ಕಾರಕ್ಕೆ 10 ಲಕ್ಷ ರೂ. ಹಾಗೂ ಬೊಮ್ಮಸಂದ್ರ ಪುರಸಭೆಗೆ 5 ಲಕ್ಷ ರೂ. ಮಧ್ಯಂತರ ದಂಡ ವಿಧಿಸಲಾಗಿದೆ. ರಾಜ್ಯ ಮತ್ತು ಪುರಸಭೆಯ ಪ್ರತಿಕ್ರಿಯೆ ನಂತರ ಅಂತಿಮ ಪರಿಹಾರ ನಿರ್ಧರಿಸಲಾಗುವುದು ಎಂದು ನ್ಯಾಯಮಂಡಳಿ ತಿಳಿಸಿದೆ.
ಪುರಸಭೆ ಹಾಗೂ ರಾಜ್ಯ ಸರಕಾರದ ಅಧಿಕಾರಿಗಳು ಮಾಲಿನ್ಯ ತಡಗಟ್ಟುವಲ್ಲಿ ವಿಫಲರಾಗಿದ್ದಾರೆ. ನ್ಯಾಯಮಂಡಳಿ ಮತ್ತು ಸುಪ್ರೀಂ ಕೋರ್ಟ್ ಆದೇಶಗಳನ್ನು ಪಾಲಿಸಿಲ್ಲ. ಇದು ದುರದೃಷ್ಟಕರವಾಗಿದ್ದು, ಇದಕ್ಕೆ ತ್ವರಿತ ಪರಿಹಾರ ಕ್ರಮ ತೆಗೆದುಕೊಳ್ಳುವ ಅಗತ್ಯವಿದೆ. ಕೇವಲ ಪತ್ರ ಬರೆದರೆ ಕಾನೂನು ಅನುಸರಣೆ ಮಾಡಿದಂತಾಗುವುದಿಲ್ಲ. ಸಂಸ್ಕರಿಸದ ಒಳಚರಂಡಿ ನೀರು ಕೆರೆಗೆ ಸೇರುವ ಮೂಲಕ ಭಾರಿ ಹಾನಿಯಾಗಿದೆ. ಸಾರ್ವಜನಿಕರ ಆರೋಗ್ಯದ ಮೇಲೂ ಇದು ಪರಿಣಾಮ ಬೀರುತ್ತದೆ. ಒಳಚರಂಡಿ ನೀರು ಸೇರುವುದನ್ನು ತಡೆಯುವುದು ಅಧಿಕಾರಿಗಳ ಕರ್ತವ್ಯ ಎಂದು ಎನ್‌ಜಿಟಿ ತಿಳಿಸಿದೆ.
ಅಗತ್ಯ ಬಿದ್ದರೆ ತಜ್ಞರ ಸಮಿತಿಯನ್ನು ನೇಮಕ ಮಾಡಲಾಗುವುದು. ತಪ್ಪಿತಸ್ಥ ಅಧಿಕಾರಿಗಳಿಂದ ದಂಡದ ಮೊತ್ತವನ್ನು ವಸೂಲಿ ಮಾಡಲು ರಾಜ್ಯ ಮತ್ತು ಪುರಸಭೆಗೆ ಅಧಿಕಾರವಿದೆ. ಮಧ್ಯಂತರ ದಂಡವನ್ನು ಒಂದು ತಿಂಗಳೊಳಗೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗೆ (ಸಿಪಿಸಿಬಿ) ಜಮಾ ಮಾಡಿ, ಪರಿಸರ ಪುನರ್ ಸ್ಥಾಪನೆಗೆ ಅದನ್ನು ಬಳಸಲಾಗುವುದು ಎಂದು ನ್ಯಾಯಮಂಡಳಿ ತಿಳಿಸಿದೆ.







