ಸತತ 4 ನೆ ದಿನವೂ ದಾಖಲೆಯ ಹೊಸ ಕೋವಿಡ್-19 ಪ್ರಕರಣಗಳು
ಸಾವುಗಳ ಸಂಖ್ಯೆ 13,254ಕ್ಕೇರಿಕೆ

ಹೊಸದಿಲ್ಲಿ,ಜೂ.21 ದೇಶದಲ್ಲಿ ರವಿವಾರ ಬೆಳಿಗ್ಗೆಯವರೆಗಿನ 24 ಗಂಟೆಗಳ ಅವಧಿಯಲ್ಲಿ 15,413 ಹೊಸ ಕೊರೋನ ವೈರಸ್ ಪ್ರಕರಣಗಳು ವರದಿಯಾಗಿದ್ದು, ಇದು ಈವರೆಗಿನ ಒಂದು ದಿನದ ಗರಿಷ್ಠ ಏರಿಕೆಯಾಗಿದೆ. ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ ನಾಲ್ಕು ಲಕ್ಷದ ಗಡಿಯನ್ನು ದಾಟಿ 4,10,461ಕ್ಕೇರಿದೆ.
ಈ ಅವಧಿಯಲ್ಲಿ ದೇಶದಲ್ಲಿ 306 ಸಾವುಗಳು ಸಂಭವಿಸಿದ್ದು,ಒಟ್ಟು ಸಾವುಗಳ ಸಂಖ್ಯೆ 13,254ಕ್ಕೇರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ರವಿವಾರ ಬೆಳಿಗ್ಗೆ ಹೇಳಿಕೆಯಲ್ಲಿ ತಿಳಿಸಿದೆ. ವಿಶ್ವದಲ್ಲಿ ನಾಲ್ಕನೇ ಅತ್ಯಂತ ಬಾಧಿತ ದೇಶವಾಗಿರುವ ಭಾರತದಲ್ಲಿ ಕಳೆದ ನಾಲ್ಕು ದಿನಗಳಿಂದಲೂ ಹೊಸ ಪ್ರಕರಣಗಳ ಸಂಖ್ಯೆ ದಾಖಲೆಯನ್ನು ಸೃಷ್ಟಿಸುತ್ತಲೇ ಇದೆ. ಶನಿವಾರ 14,516,ಶುಕ್ರವಾರ 13,586 ಮತ್ತು ಗುರುವಾರ 12,881 ಹೊಸ ಕೊರೋನ ವೈರಸ್ ಪ್ರಕರಣಗಳು ದಾಖಲಾಗಿದ್ದವು.
ದೇಶದಲ್ಲಿ ಈವರೆಗೆ ಸುಮಾರು 2.27 ಲಕ್ಷ ಕೊರೋನ ವೈರಸ್ ರೋಗಿಗಳು ಗುಣಮುಖರಾಗಿದ್ದಾರೆ. ರವಿವಾರ ಬೆಳಗ್ಗಿನವರೆಗೆ ಚೇತರಿಕೆಯ ಪ್ರಮಾಣ ಶೇ.55.48ರಷ್ಟಿದೆ.
ಭಾರತದಲ್ಲಿ 143 ದಿನಗಳಲ್ಲಿ ಕೊರೋನ ವೈರಸ್ ಪ್ರಕರಣಗಳ ಸಂಖ್ಯೆ ನಾಲ್ಕು ಲಕ್ಷವನ್ನು ದಾಟಿದೆ. ಮೇ 19ರವರೆಗೆ ಒಂದು ಲಕ್ಷ ಪ್ರಕರಣಗಳು ದಾಖಲಾಗಿದ್ದವು. ಈ ತಿಂಗಳ ಆರಂಭದಲ್ಲಿ ಪ್ರಕರಣಗಳ ಸಂಖ್ಯೆ ಎರಡು ಲಕ್ಷ ದಾಟಿದ್ದರೆ, ಜೂನ್ 13ರ ವೇಳೆಗೆ ಮೂರು ಲಕ್ಷಕ್ಕೆ ತಲುಪಿತ್ತು.
ದೇಶದಲ್ಲಿ ಶನಿವಾರ ದಾಖಲೆಯ 1.9 ಲ.ಸ್ಯಾಂಪಲ್‌ಗಳನ್ನು ಪರೀಕ್ಷೆಗೊಳಪಡಿಸಲಾಗಿದ್ದು, ಇದರೊಂದಿಗೆ ಸಾಂಕ್ರಾಮಿಕ ಪಿಡುಗು ಆರಂಭಗೊಂಡಾಗಿನಿಂದ ಈವರೆಗೆ ಪರೀಕ್ಷಿಸಲಾದ ಸ್ಯಾಂಪಲ್‌ಗಳ ಸಂಖ್ಯೆ 68,07,226ಕ್ಕೇರಿದೆ. ದೇಶದ ಸರಾಸರಿ ಪಾಸಿಟಿವಿಟಿ ದರ ರವಿವಾರ ಬೆಳಿಗ್ಗೆ ಶೇ.8.08ರಷ್ಟಿತ್ತು.
ದೇಶದಲ್ಲಿ ಅತ್ಯಂತ ಪೀಡಿತ ರಾಜ್ಯವಾಗಿರುವ ಮಹಾರಾಷ್ಟ್ರ ಕೊರೋನ ವೈರಸ್ ವಿರುದ್ಧ ತನ್ನ ಹೋರಾಟವನ್ನು ತೀವ್ರಗೊಳಿಸಿದ್ದು,ಎಲ್ಲ ಮುಂಚೂಣಿ ಕಾರ್ಯಕರ್ತರಿಗೆ ಆ್ಯಂಟಿಬಾಡಿ ಪರೀಕ್ಷೆಗಳನ್ನು ನಡೆಸಲು ನಿರ್ಧರಿಸಿದೆ. ಈ ಪರೀಕ್ಷೆಯು ವ್ಯಕ್ತಿಯೋರ್ವ ಹಿಂದೆ ಕೋವಿಡ್-19 ಸೋಂಕನ್ನು ಹೊಂದಿದ್ದನೇ ಮತ್ತು ಈಗ ವೈರಸ್‌ನ ವಿರುದ್ಧ ಆ್ಯಂಟಿಬಾಡಿ ಅಥವಾ ಪ್ರತಿಕಾಯಗಳನ್ನು ಹೊಂದಿರುವನೇ ಎನ್ನುವುದನ್ನು ನಿರ್ಧರಿಸುತ್ತದೆ. ರಾಜ್ಯದಲ್ಲಿ ಶನಿವಾರ ಬೆಳಿಗ್ಗೆಯಿಂದ 24 ಗಂಟೆಗಳ ಅವಧಿಯಲ್ಲಿ 3,874 ಹೊಸ ಪ್ರಕರಣಗಳು ದಾಖಲಾಗಿದ್ದು,ಒಟ್ಟು ಪ್ರಕರಣಗಳ ಸಂಖ್ಯೆ 1.28 ಲಕ್ಷಕ್ಕೇರಿದೆ. ಈವರೆಗೆ 5,984 ಜನರು ಮೃತಪಟ್ಟಿದ್ದಾರೆ.
ಮೂರನೇ ಅತ್ಯಂತ ಹೆಚ್ಚು ಪ್ರಕರಣಗಳಿರುವ ದಿಲ್ಲಿಯಲ್ಲಿ 3,630 ಹೊಸ ಪ್ರಕರಣಗಳು ದಾಖಲಾಗಿದ್ದು,ಇದು ಒಂದು ದಿನದಲ್ಲಿ ದಾಖಲೆಯ ಏರಿಕೆಯಾಗಿದೆ. ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ ಸುಮಾರು 56,000ಕ್ಕೇರಿದೆ. ಕೋವಿಡ್-19 ರೋಗಿಗಳ ಚಿಕಿತ್ಸೆ ಸಂದರ್ಭದಲ್ಲಿ ವೆಂಟಿಲೇಟರ್ ಸಹಿತ ಐಸಿಯು ಹಾಸಿಗೆಗಳಿಗೆ ಒಂದು ದಿನಕ್ಕೆ 18,000 ರೂ.ಗಿಂತ ಹೆಚ್ಚಿನ ಶುಲ್ಕವನ್ನು ವಿಧಿಸದಂತೆ ದಿಲ್ಲಿ ಸರಕಾರವು ಶನಿವಾರ ಖಾಸಗಿ ಆಸ್ಪತ್ರೆಗಳಿಗೆ ಆದೇಶಿಸಿದೆ.
ಅತ್ತ ಉತ್ತರ ಪ್ರದೇಶವು ಈ ವರ್ಷದ ಕನ್ವರ್ ಯಾತ್ರೆಯನ್ನು ಅಮಾನತುಗೊಳಿಸಿದೆ. ಗುಜರಾತ ಉಚ್ಚ ನ್ಯಾಯಾಲಯವು ಜೂ.23ಕ್ಕೆ ನಡೆಯಲಿದ್ದ ಅಹ್ಮದಾಬಾದ್‌ನ ವಾರ್ಷಿಕ ಜಗನ್ನಾಥ ರಥ ಯಾತ್ರೆಗೆ ಶನಿವಾರ ತಡೆಯಾಜ್ಞೆಯನ್ನು ನೀಡಿದೆ.







