ಮೈಸೂರು: ಸೂರ್ಯಗ್ರಹಣ ವೇಳೆ ಉಪಹಾರ ಸೇವಿಸಿದ ಸಾಹಿತಿಗಳು, ಪ್ರಗತಿಪರರು

ಮೈಸೂರು,ಜೂ.21: ಪ್ರತಿಯೊಂದಕ್ಕೂ ಒಂದು ಮಿತಿಯುಂಟು. ಹಾಗೆಯೇ ನಂಬಿಕೆಗೂ ಒಂದು ಇತಿಮಿತಿ ಇದೆ. ನಂಬಿಕೆ ಇರಬೇಕು ನಿಜ ಆದರೆ ಮೂಢನಂಬಿಕೆ ಖಂಡಿತ ಬೇಡ ಎಂದು ಸಾಹಿತಿ ಬನ್ನೂರು ಕೆ. ರಾಜು ಹೇಳಿದರು.
ಸಾರ್ವಜನಿಕರಲ್ಲಿ ವೈಚಾರಿಕ ಮತ್ತು ವೈಜ್ಞಾನಿಕ ಪ್ರಜ್ಞೆ ಮೂಡಿಸಲು ಸೂರ್ಯಗ್ರಹಣ ದಂದು ನಗರದ ಕೃಷ್ಣಮೂರ್ತಿಪುರಂನ ಅಂಬೇಡ್ಕರ್ ಮುಖ್ಯರಸ್ತೆಯಲ್ಲಿರುವ ಚೈತ್ರ ಮಿಲ್ಕ್ ಸೆಂಟರ್ ನಲ್ಲಿ ರವಿವಾರ ಗ್ರಹಣ ಪ್ರಕೃತಿ ವಿಸ್ಮಯ, ಭಯ ಬೇಡ ಎಂಬ ಹೆಸರಿನಲ್ಲಿ ಏರ್ಪಡಿಸಿದ್ದ ಮೌಡ್ಯ ವಿರೋಧಿ ಕಾರ್ಯಕ್ರಮವನ್ನು ಬುದ್ಧ, ಬಸವ, ಅಂಬೇಡ್ಕರ್, ಪೆರಿಯಾರ್, ಮುಂತಾದವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ ನಮಿಸುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಹಣ ಕಾಲದಲ್ಲಿ ಮನೆಯಿಂದ ಹೊರ ಬರಬಾರದು, ತಿಂಡಿ ತಿನಿಸು ಊಟ ಏನನ್ನೂ ಸೇವಿಸಬಾರದು ಎಂಬಂತಹ ಮೂಢನಂಬಿಕೆಗಳನ್ನು ಬಿತ್ತಿ ಬೆಳೆಯುತ್ತಿರುವ ನಮ್ಮ ಸಮಾಜದಲ್ಲಿ ಇಂತಹ ಮೌಢ್ಯತೆಯ ಮಾರಿಯನ್ನು ಹೋಗಲಾಡಿಸಬೇಕೆಂದರೆ ಪ್ರತಿಯೊಬ್ಬರೂ ವೈಚಾರಿಕ ಮತ್ತು ವೈಜ್ಞಾನಿಕ ಪ್ರಜ್ಞೆಯನ್ನು ಬೆಳಸಿಕೊಂಡು ವಿಚಾರವಂತ ರಾಗಬೇಕು. ಸೂರ್ಯಗ್ರಹಣವೇ ಆಗಲಿ ಚಂದ್ರಗ್ರಹಣವೇ ಆಗಲಿ ಅದು ಪ್ರಕೃತಿ ನಿಯಮಾನುಸಾರ ಸಂಭವಿಸುವ ಒಂದು ಸಹಜ ಪ್ರಕ್ರಿಯೆ. ಕೆಲವು ಡೋಂಗಿ ಜ್ಯೋತಿಷಿಗಳು ಹೇಳುವಂತೆ ಇದರಿಂದ ನಾಗರೀಕ ಸಮಾಜದ ಮೇಲೆ ಯಾವುದೇ ದುಷ್ಪರಿಣಾಮವಾಗದೆಂದ ಅವರು, ವಿದ್ಯಾವಂತರು, ಅವಿದ್ಯಾವಂತರೆನ್ನದೆ ಪ್ರತಿಯೊಬ್ಬರೂ ಇದರ ಅರಿವನ್ನು ಮೂಡಿಸುವ ಕೆಲಸ ಮಾಡಬೇಕು ಎಂದರು.
ಖ್ಯಾತ ಸಾಹಿತಿ ಇತಿಹಾಸ ತಜ್ಞ ಪ್ರೊ.ಪಿ. ವಿ. ನಂಜರಾಜ ಅರಸ್ ಅವರು ಮಾತನಾಡಿ ಇವತ್ತು ದಿನದ 24 ಗಂಟೆಯೂ ಟಿವಿ ಚಾನಲ್ ಗಳು ಜ್ಯೋತಿಷಿಗಳನ್ನು ಕೂರಿಸಿಕೊಂಡು ಮೌಡ್ಯದ ಮೂಲಕ ಜನರನ್ನು ಎದರಿಸುವ, ಬೆದರಿಸುವ ಕೆಲಸ ಮಾಡುತ್ತಿವೆ. ಇಂತಹದನ್ನು ನಂಬದೆ ಜನರು ಪ್ರಜ್ಞಾವಂತರಾಗಬೇಕೆಂದು ಹೇಳಿದ ಅವರು, ಅಮಾವಾಸ್ಯೆ ಗ್ರಹಣ ಕಾಲದಲ್ಲಿ ಮನೆಯಲ್ಲಿ ಮಾತ್ರವಲ್ಲ ಸ್ಮಶಾನದಲ್ಲಿ ಊಟ ಮಾಡಿದರೂ ಏನೂ ಆಗುವುದಿಲ್ಲ ಎಂದು ಹೇಳಿದರು. ಅಲ್ಲದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾರ್ವಜನಿಕರೊಡಗೂಡಿ ಅವರು ಉಪಹಾರ ಸೇವಿಸಿ ಕಾರ್ಯಕ್ರಮವನ್ನು ಆಯೋಜಿಸಿದ್ದ ವಿಚಾರವಾದಿ ಚೈತ್ರ ಮಿಲ್ಕ್ ಸೆಂಟರ್ ನ ಪದ್ಮರಾಜ್ ಅವರ ಸೇವೆಯನ್ನು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಲೇಖಕರಾದ ಸಿದ್ಧ ಸ್ವಾಮಿ, ಗೋವಿಂದರಾಜು, ಮಾಜಿ ಮಹಾಪೌರ ಪುರುಷೋತ್ತಮ್, ಮಹಾನಗರ ಪಾಲಿಕೆ ಸದಸ್ಯರಾದ ಪಲ್ಲವಿ ಬೇಗಂ, ಶಾರದಮ್ಮ, ಕೆ ಆರ್ ಬ್ಯಾಂಕ್ ಮಾಜಿ ಅಧ್ಯಕ್ಷ ವಾಸು, ಕನ್ನಡಪರ ಹೋರಾಟಗಾರ ದೇಶಳ್ಳಿ ರಾಮಚಂದ್ರಾಚಾರ್, ಕಾರ್ಯಕ್ರಮದ ಆಯೋಜಕ ಚೈತ್ರ ಮಿಲ್ಕ್ ಸೆಂಟರ್ ನ ಪದ್ಮರಾಜ್ ಮುಂತಾದವರು ಉಪಸ್ಥಿತರಿದ್ದರು.







