ಚಿಕ್ಕಮಗಳೂರು: ಜಿಲ್ಲೆಯ 8 ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನ ಸೋಂಕಿಗೆ ಚಿಕಿತ್ಸೆ
ಸರಕಾರದ ಆದೇಶಕ್ಕಾಗಿ ಕಾಯುತ್ತಿರುವ ಆಸ್ಪತ್ರೆಗಳು

ಸಾಂದರ್ಭಿಕ ಚಿತ್ರ
ಚಿಕ್ಕಮಗಳೂರು, ಜೂ.21: ದೇಶಾದ್ಯಂತ ಕೊರೋನ ಅಟ್ಟಹಾಸ ಮೆರೆಯುತ್ತಿರುವ ಹಿನ್ನೆಲೆಯಲ್ಲಿ ಸರಕಾರಗಳಿಗೆ ಕೊರೋನ ಸೋಂಕಿತರಿಗೆ ಚಿಕಿತ್ಸೆ ನೀಡುವುದು ಸವಾಲಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ರಿಯಾಯಿತಿ ದರದಲ್ಲಿ ಕೊರೋನ ಶಂಕಿತರ ಪರೀಕ್ಷೆ ಸೇರಿದಂತೆ ಸೋಂಕಿತರಿಗೆ ಚಿಕಿತ್ಸೆ ಕಲ್ಪಿಸಲು ರಾಜ್ಯ ಸರಕಾರ ಚಿಂತನೆ ನಡೆಸಿದ್ದು, ಈ ಸಂಬಂಧ ಜಿಲ್ಲೆಯಲ್ಲಿ 8 ಖಾಸಗಿ ಆಸ್ಪತ್ರೆಗಳನ್ನು ಗುರುತಿಸಿದೆ.
ರಾಜ್ಯ ಸರಕಾರ ಕೊರೋನ ಸೋಂಕಿತರಿಗೆ ಚಿಕಿತ್ಸೆ ಕಲ್ಪಿಸಲು ರಾಜ್ಯಾದ್ಯಂತ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಕೆಲವು ಆಸ್ಪತ್ರೆಗಳಿಗೆ ಅನುಮತಿ ನೀಡಿದ್ದು, ಇದಕ್ಕಾಗಿ ರಾಜ್ಯಾದ್ಯಂತ ಸುಮಾರು 483 ಖಾಸಗಿ ಆಸ್ಪತ್ರೆಗಳನ್ನು ಗುರುತಿಸಿದೆ. ಈ ಪೈಕಿ ಚಿಕ್ಕಮಗಳೂರು ಜಿಲ್ಲೆಯಲ್ಲಿ 8 ಖಾಸಗಿ ಆಸ್ಪತ್ರೆಗಳಿಗೆ ಕೋವಿಡ್-19 ಚಿಕಿತ್ಸೆ ನೀಡಲು ಅನುಮತಿ ನೀಡಿದೆ. ಆದರೆ ಈ ಖಾಸಗಿ ಆಸ್ಪತ್ರೆಗಳಿಗೆ ಸರಕಾರದ ಅಧೀಕೃತ ಆದೇಶ ಇನ್ನೂ ತಲುಪಿಲ್ಲ ಎಂದು ತಿಳಿದು ಬಂದಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿತರಿಗೆ ಚಿಕಿತ್ಸೆ ನೀಡುವ ಖಾಸಗಿ ಆಸ್ಪತ್ರೆಗಳ ಪಟ್ಟಿಯಲ್ಲಿ ನಗರದ 5 ಆಸ್ಪತ್ರೆಗಳಿದ್ದು, ಜಿಲ್ಲೆಯ ನರಸಿಂಹರಾಜಪುರ, ಕೊಪ್ಪ ಹಾಗೂ ಕಡೂರು ತಾಲೂಕುಗಳ ವ್ಯಾಪ್ತಿಯಲ್ಲಿ ತಲಾ ಒಂದು ಖಾಸಗಿ ಆಸ್ಪತ್ರೆಗಳನ್ನು ಗುರುತಿಸಿದೆ.
ಕೊರೋನ ಸೋಂಕಿನ ಚಿಕಿತ್ಸೆಗೆ ಚಿಕ್ಕಮಗಳೂರು ನಗರದಲ್ಲಿ ಗುರುತಿಸಲಾಗಿರುವ ಖಾಸಗಿ ಆಸ್ಪತ್ರೆಗಳಲ್ಲಿ ನಗರದ ಹೌಸಿಂಗ್ ಬೋರ್ಡ್ನಲ್ಲಿರುವ ಹೋಲಿ ಕ್ರಾಸ್ ಆಸ್ಪತ್ರೆ, ನಗರದ ತೊಗರಿಹಂಕಲ್ ಸರ್ಕಲ್ನಲ್ಲಿರುವ ಆಶ್ರಯ ಆಸ್ಪತ್ರೆ, ಬಸವನಹಳ್ಳಿ ರಸ್ತೆಯಲ್ಲಿರುವ ಕೆಆರ್ಎಸ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಮಲ್ಲಂದೂರು ರಸ್ತೆಯಲ್ಲಿರುವ ರೆಟಿಕಾರ್ನ್ ಕಣ್ಣಿನ ಆಸ್ಪತ್ರೆ, ವಿಜಯಪುರದಲ್ಲಿರುವ ವಾಸ್ತಲ್ಯ ಆಸ್ಪತ್ರೆ ಸೇರಿವೆ. ಉಳಿದಂತೆ ಕಡೂರು ಪಟ್ಟಣದಲ್ಲಿರುವ ಶ್ರೀ ಮಾರುತಿ ಆಸ್ಪತ್ರೆ, ಕೊಪ್ಪ ಪಟ್ಟಣದಲ್ಲಿರುವ ಪ್ರಶಾಮಣಿ ಆಸ್ಪತ್ರೆ ಹಾಗೂ ನರಸಿಂಹರಾಜಪುರ ಪಟ್ಟಣದ ಪುಷ್ಪಾ ಆಸ್ಪತ್ರೆಗಳನ್ನು ಕೊರೋನ ಸೋಂಕಿತರಿಗೆ ಚಿಕಿತ್ಸೆ ನೀಡಲು ಗುರುತಿಸಿದೆ ಎಂದು ತಿಳಿದು ಬಂದಿದೆ.
ಕೋವಿಡ್-19 ಸೋಂಕಿತರಿಗೆ ಚಿಕಿತ್ಸೆ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಜಿಲ್ಲೆಯಲ್ಲಿ 8 ಖಾಸಗಿ ಆಸ್ಪತ್ರೆಗಳನ್ನು ಗುರುತಿಸಿದೆಯಾದರೂ ಈ ಸಂಬಂಧ ಖಾಸಗಿ ಆಸ್ಪತ್ರೆಗಳು ಚಿಕಿತ್ಷೆ, ಪರೀಕ್ಷೆ ವೇಳೆ ಪಾಲಿಸಬೇಕಾದ ಮಾರ್ಗಸೂಚಿ, ಚಿಕಿತ್ಸಾ ಶುಲ್ಕಗಳಿಗೆ ಸಂಬಂಧಿಸಿದಂತೆ ಇನ್ನೂ ಅಧಿಕೃತ ಆದೇಶ ನೀಡಿಲ್ಲ ಎಂದು ಈ ಆಸ್ಪತ್ರೆಗಳ ಮುಖ್ಯಸ್ಥರು ತಿಳಿಸಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಸಂಬಂಧ ಸರಕಾರ ಶೀಘ್ರ ಆದೇಶ ಹೊರಡಿಸಬಹುದು ಎಂದಿದ್ದಾರೆ.
ಕೊರೋನ ಸೋಂಕಿತರಿಗೆ ಚಿಕಿತ್ಸೆ ನೀಡಲು ಸರಕಾರ ಗುರುತು ಮಾಡಿರುವ ಜಿಲ್ಲೆಯ 8 ಆಸ್ಪತ್ರೆಗಳು ಈ ಸಂಬಂಧ ಸರಕಾರದ ಅಧಿಕೃತ ಆದೇಶಕ್ಕಾಗಿ ಎದುರು ನೋಡುತ್ತಿದ್ದು, ಶೀಘ್ರ ಆದೇಶ ಬಂದಲ್ಲಿ ಚಿಕಿತ್ಸೆಗೆ ಅಗತ್ಯವಿರುವ ಮೂಲಸೌಕರ್ಯಗಳ ಸಿದ್ಧತೆ ಸೇರಿದಂತೆ ಯಂತ್ರೋಪಕರಣಗಳು, ಸಿಬ್ಬಂದಿ, ವೈದ್ಯರ ನೇಮಕದಂತಹ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲು ಸಹಕಾರಿಯಾಗಲಿದೆ ಎಂದು ಈ ಆಸ್ಪತ್ರೆಗಳ ಮುಖ್ಯಸ್ಥರು ಹೇಳುತ್ತಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ ಮೇ ತಿಂಗಳಲ್ಲಿ 18 ಪಾಸಿಟಿವ್ ಪ್ರಕರಣಗಳು ಪ್ರಯೋಗಾಲಯದ ವರದಿಗಳಿಂದ ಬೆಳಕಿಗೆ ಬಂದಿತ್ತು. ಈ ಪೈಕಿ ಎರಡು ಪ್ರಕರಣಗಳು ಫಾಲ್ಸ್ ಪಾಸಿಟಿವ್ ಆಗಿದ್ದು, 16 ಮಂದಿಗೆ ಕೊರೋನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಸೋಂಕಿತರು ಗುಣಮುಖರಾದ ಹಿನ್ನೆಲೆಯಲ್ಲಿ 16 ಮಂದಿಯನ್ನು ಬಿಡುಗಡೆ ಮಾಡಲಾಗಿದೆ. ಬಳಿಕ ಜೂ.1ರಿಂದ ಜೂ.21ರವರೆಗೆ ಜಿಲ್ಲೆಯಲ್ಲಿ ಮತ್ತೆ 19 ಪ್ರಕರಣಗಳು ಬೆಳಿಕಿಗೆ ಬಂದಿದ್ದು, ಈ ಪೈಕಿ ಇತ್ತೀಚೆಗೆ ಅಜ್ಜಂಪುರದ 72 ವರ್ಷದ ವೃದ್ಧೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದು ಹಾಗೂ ಎಸೆಸೆಲ್ಸಿ ವಿದ್ಯಾರ್ಥಿಯಲ್ಲಿ ನೆಗೆಟಿವ್ ಕಂಡು ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ರವಿವಾರ ಸದ್ಯ ಜಿಲ್ಲೆಯಲ್ಲಿ 17 ಸಕ್ರೀಯ ಕೊರೋನ ಪಾಸಿಟಿವ್ ಪ್ರಕರಣಗಳಿದ್ದು, ಎಲ್ಲ ಸೋಂಕಿತರಿಗೆ ಜಿಲ್ಲಾಸ್ಪತ್ರೆಯ ಕೊರೋನ ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಜಿಲ್ಲೆಯಲ್ಲಿ ಇದುವರೆಗೂ ಪತ್ತೆಯಾಗಿರುವ ಪಾಸಿಟಿವ್ ಪ್ರಕರಣಗಳ ಪೈಕಿ ಬಹುತೇಕ ಪ್ರರಕಣಗಳು ಹೊರರಾಜ್ಯಗಳಿಂದ ಜಿಲ್ಲೆಗೆ ಆಗಮಿಸಿರುವವರಲ್ಲಿ ಕಂಡು ಬಂದಿದ್ದು, ಇತ್ತೀಚೆಗೆ ಸ್ಥಳೀಯರಲ್ಲೂ ಕಂಡುಬರುತ್ತಿದೆ. ಜಿಲ್ಲೆಯಲ್ಲಿ ಹೊರ ದೇಶ, ಹೊರರಾಜ್ಯಗಳಿಂದ ಬಂದವರು ಭಾರೀ ಸಂಖ್ಯೆಯಲ್ಲಿದ್ದು, ಪಾಸಿಟಿವ್ ಪ್ರಕರಗಳ ಸಂಖ್ಯೆ ಜೂನ್ ತಿಂಗಳಲ್ಲಿ ಹೆಚ್ಚತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಯಲ್ಲಿರುವ ಕೊರೋನ ಚಿಕಿತ್ಸಾ ಘಟಕವೊಂದರಲ್ಲೇ ಎಲ್ಲ ಸೋಂಕಿತರಿಗೆ ಚಿಕಿತ್ಸೆ ನೀಡುವುದು ಅಸಾಧ್ಯವಾಗಿದೆ. ಈ ಕಾರಣಕ್ಕೆ ಜಿಲ್ಲೆಯಲ್ಲಿನ ಖಾಸಗಿ ಆಸ್ಪತ್ರೆಗಳಲ್ಲೂ ಕೊರೋನ ಚಿಕಿತ್ಸೆಗೆ ಅವಕಾಶ ಕಲ್ಪಿಸುತ್ತಿರುವ ಸರಕಾರದ ಕ್ರಮ ಉತ್ತಮ ಬೆಳವಣಿಗೆಯಾಗಿದೆ ಎಂದು ನಾಗರಿಕರು ತಿಳಿಸಿದ್ದಾರೆ.
ಕೊರೋನ ಸೋಂಕಿತರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಜಿಲ್ಲೆಯಲ್ಲಿ ಗುರುತು ಮಾಡಿರುವ ಖಾಸಗಿ ಆಸ್ಪತ್ರೆಗಳ ಪಟ್ಟಿ, ಪಾಲಿಸಬೇಕಾದ ಮಾರ್ಗಸೂಚಿ, ಚಿಕಿತ್ಸಾ ಶುಲ್ಕಗಳ ಬಗ್ಗೆ ಅಧಿಕೃತ ಆದೇಶದ ಪ್ರತಿ ಇನ್ನೂ ಜಿಲ್ಲಾಡಳಿತಕ್ಕೆ ತಲುಪಿಲ್ಲ. ಆದೇಶ ತಲುಪಿದ ಬಳಿಕ ಆದೇಶದಂತೆ ಸೂಕ್ತ ಕ್ರಮಕೈಗೊಳ್ಳಲಾಗುವುದು.
- ಡಾ.ಕುಮಾರ್, ಅಪರ ಜಿಲ್ಲಾಧಿಕಾರಿ
ಕೊರೋನ ಸೋಂಕಿತರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕಲ್ಪಿಸಲು ಜಿಲ್ಲೆಯಲ್ಲಿ 8 ಆಸ್ಪತ್ರೆಗಳನ್ನು ಗುರುತಿಸಿದ್ದು, ಈ ಆಸ್ಪತ್ರೆಗಳ ಪಟ್ಟಿಯಲ್ಲಿ ಆಶ್ರಯ ಆಸ್ಪತ್ರೆ ಇರುವುದು ತಿಳಿದಿದೆ. ಆದರೆ ಸರಕಾರ ಅಥವಾ ಜಿಲ್ಲಾಡಳಿತದಿಂದ ಈ ಬಗ್ಗೆ ಇನ್ನೂ ಆದೇಶದಪ್ರತಿ, ಸೂಚನೆ ಬಂದಿಲ್ಲ. ಸರಕಾರ ಕೊರೋನ ಸೋಂಕಿತರಿಗೆ ಚಿಕಿತ್ಸೆ ನೀಡಬೇಕೆಂದು ಸರಕಾರ ತಿಳಿಸಿದರೆ ಸರಕಾರದ ಆದೇಶ ಪಾಲಿಸಬೇಕಿದೆ. ಈ ಸಂಬಂಧ ಆದೇಶದ ಪ್ರತಿ ತಲಪಿದ ಬಳಿಕ ಕ್ರಮವಹಿಸಲಾಗುವುದು.
- ಡಾ.ವಿಜಯ್ ಕುಮಾರ್, ಆಶ್ರಯ ಆಸ್ಪತ್ರೆಯ ಮುಖ್ಯಸ್ಥ







