ಕೊರೋನ: ಒಂದೇ ದಿನ ದೇಶದಲ್ಲಿ 400ಕ್ಕೂ ಅಧಿಕ ಸಾವು

ಹೊಸದಿಲ್ಲಿ, ಜೂ.22: ದೇಶದಲ್ಲಿ ಭಾನುವಾರ ಗರಿಷ್ಠ ಸಂಖ್ಯೆಯ ಕೋವಿಡ್-19 ಪ್ರಕರಣಗಳು ದಾಖಲಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 4,26,397ಕ್ಕೇರಿದೆ. ಮೊಟ್ಟಮೊದಲ ಬಾರಿಗೆ ದಿನದಲ್ಲಿ ಮೃತಪಟ್ಟವರ ಸಂಖ್ಯೆ 400ರ ಗಡಿ ದಾಟಿದೆ.
ಜೂನ್ 16ರಂದು ಮಾತ್ರ ಹಳೆಯ ಸಾವಿನ ಪ್ರಕರಣಗಳನ್ನು ಮಹಾರಾಷ್ಟ್ರ ಹಾಗೂ ದಿಲ್ಲಿ ಸರ್ಕಾರಗಳು ಪ್ರಕಟಿಸಿದ ಹಿನ್ನೆಲೆಯಲ್ಲಿ, 2003 ಪ್ರಕರಣಗಳು ವರದಿಯಾಗಿದ್ದವು. ರವಿವಾರ 423 ಮಂದಿ ಪ್ರಾಣ ಕಳೆದುಕೊಳ್ಳುವ ಮೂಲಕ ಸೋಂಕಿಗೆ ಬಲಿಯಾದವರ ಸಂಖ್ಯೆ 13,695ಕ್ಕೇರಿದೆ.
ಮಾಮೂಲಿನಂತೆ ಅಧಿಕ ಸಂಖ್ಯೆಯ ಪ್ರಕರಣಗಳು (3,870) ಮಹಾರಾಷ್ಟ್ರದಿಂದ ವರದಿಯಾಗಿವೆ. ಇದರೊಂದಿಗೆ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 1,32,075ಕ್ಕೇರಿದಂತಾಗಿದೆ. ರಾಜ್ಯದಲ್ಲಿ 186 ಮಂದಿ ಸೋಂಕಿತರು ಕೊನೆಯುಸಿರೆಳೆದಿದ್ದು, ಒಟ್ಟು ಸಾವಿನ ಸಂಖ್ಯೆ ಆರು ಸಾವಿರದ ಗಡಿ ದಾಟಿದೆ. ಮುಂಬೈ ಮಹಾನಗರದಲ್ಲಿ 1,159 ಹೊಸ ಪ್ರಕರಣಗಳು ಹಾಗೂ 110 ಸಾವು ದಾಖಲಾಗಿವೆ.
ದಿಲ್ಲಿಯಲ್ಲಿ 3,630 ಹೊಸ ಪ್ರಕರಣಗಳು ವರದಿಯಾಗಿದ್ದು, 63 ಮಂದಿ ಮೃತಪಟ್ಟಿದ್ದಾರೆ. ರಾಜಧಾನಿಯಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 59,746ಕ್ಕೇರಿದ್ದು, ಸಾವಿನ ಸಂಖ್ಯೆ 2,175 ಆಗಿದೆ.





