ಮಹಾಕವಿ ಮಂದಾರರ ಪಾರಂಪರಿಕ ಗೃಹ ಸಂರಕ್ಷಣೆ, ಮರು ನಿರ್ಮಾಣಕ್ಕೆ ಆಗ್ರಹ
ಮಂಗಳೂರು, ಜೂ.22: ಮಂದಾರ ರಾಮಾಯಣ ಮೇರು ಕೃತಿಯ ಕರ್ತೃ, ತುಳು ವಾಲ್ಮೀಕಿ ಎಂದೇ ಹೆಸರಾಗಿರುವ ಮಂದಾರ ಕೇಶವ ಭಟ್ಟರ ಪಾರಂಪರಿಕ ಗೃಹವನ್ನು ಸಂರಕ್ಷಣೆ ಹಾಗೂ ಮರು ನಿರ್ಮಾಣ ಮಾಡಬೇಕೆಂದು ಹಿರಿಯ ಸಾಂಸ್ಕೃತಿಕ ತಜ್ಞರು ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಡಾ.ಎಂ.ಪ್ರಭಾಕರ ಜೋಷಿ, ಪಚ್ಚನಾಡಿಯ ಮಂದಾರದಲ್ಲಿ ಕಳೆದ ವರ್ಷ ತ್ಯಾಜ್ಯ ಹರಿದು ಹಾನಿಗೊಳಗಾಗಿರುವ ಮನೆಯನ್ನು ಸಂರಕ್ಷಿಸಬೇಕು. ಅದಕ್ಕಾಗಿ ಪ್ರತ್ಯೇಕ ಜಾಗವನ್ನು ಗುರುತಿಸಿ ರಾಷ್ಟ್ರೀಯ ಸ್ಮಾರಕ ನಿರ್ಮಾಣದ ಜತೆಗೆ ಪಾರಂಪರಿಕ ವಾಸ್ತು ವೈಶಿಷ್ಟದಿಂದ ಕೂಡಿದ ಮನೆಯನ್ನು ಸಂರಕ್ಷಿಸಬೇಕು ಎಂದು ಒತ್ತಾಯಿಸಿದರು.
ಪ್ರಾಧ್ಯಾಪಕರಾಗಿ ತುಳು ಹಾಗೂ ಕನ್ನಡದಲ್ಲಿ ಹತ್ತು ಹಲವು ಕೃತಿಗಳನ್ನು ನಾಡಿಗೆ ನೀಡಿರುವ, ಯಕ್ಷಗಾನ ಅರ್ಥಧಾರಿಯಾಗಿ, ಪ್ರಸಂಗಕರ್ತರಾಗಿ, ಭಾಗವತರಾಗಿಯೂ ತೊಡಗಿದ್ದ ಕೇಶ ಭಟ್, ತುಳು ಭಾಷೆ ಬಳಕೆಗೆ ಸಂಬಂಧಿಸಿ ವ್ಯಾಕರಣ, ಛಂದಸ್ಸು ಸೇರಿದಂತೆ ಸೃಜನಶೀಲ ಬರವಣಿಗೆ ಮತ್ತು ಶಾಸ್ತ್ರ ಸಾಹಿತ್ಯದಲ್ಲಿ ಅಪಾರ ಶ್ರದ್ಧೆ ತೋರಿದ ಮೇರು ವ್ಯಕ್ತಿ. 2019ರಲ್ಲಿ ಮಂದಾರರ ಜನ್ಮ ಶತಮಾನೋತ್ಸವದ ಸಂಭ್ರಮ. ಆಧುನಿಕತೆಯ ಸ್ಪರ್ಶವಿಲ್ಲದೆ, ಪರಂಪರೆಯ ಶೈಲಿಗೆ ಧಕ್ಕೆಯಾಗದಂತೆ ಕಾಪಾಡಿಕೊಂಡು ಬಂದಿದ್ದ ಅವರ ಮನೆ ಹಾಗೂ ಸುತ್ತಮುತ್ತಲಿನ ದೈವ ದೇವರುಗಳ ಸಾನ್ನಿಧ್ಯ ತ್ಯಾಜ್ಯ ರಾಶಿಯಿಂದ ಹುದುಗಿ ಹೋಗಿದೆ. ಮಂದಾರದ ಮನೆ ವಾಸ ಯೋಗ್ಯವಲ್ಲದ ಸ್ಥಿತಿಗೆ ತಲುಪಿದ್ದು, ಅದನ್ನು ಕಾಪಾಡಿಕೊಳ್ಳಬೇಕಾಗಿರುವುದು ಸರಕಾರ ಹಾಗೂ ಸಮಾಜದ ಜವಾಬ್ಧಾರಿ ಎಂದವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪ್ರಾಧ್ಯಾಪಕಿ ಚಂದ್ರಕಲಾ ನಂದಾವರ, ಭಾಸ್ಕರ ರೈ ಕುಕ್ಕುವಳ್ಳಿ, ಕಸಾಪ ದ.ಕ. ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ದಿ. ಕೇಶವ ಭಟ್ಟರ ಮೊಮ್ಮಗ ಪ್ರಮೋದ್ ಸಪ್ರೆ ಉಪಸ್ಥಿತರಿದ್ದರು.







