ಥೆರಪಿ ಚಿಕಿತ್ಸೆ ನೀಡುವುದಾಗಿ ನಂಬಿಸಿ ವಂಚನೆ: ನಕಲಿ ವೈದ್ಯೆಯ ಬಂಧನ

ಬೆಂಗಳೂರು, ಜೂ.22: ಥೆರಪಿ ಚಿಕಿತ್ಸೆ ನೀಡುವುದಾಗಿ ನಂಬಿಸಿ ವಂಚಿಸುತ್ತಿದ್ದ ಆರೋಪ ಕೇಳಿಬಂದ ಹಿನ್ನೆಲೆ ನಕಲಿ ವೈದ್ಯೆಯೊಬ್ಬಳನ್ನು ಮಲ್ಲೇಶ್ವರಂ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಸಂಗೀತಾ ಎಂಬಾಕೆ ಬಂಧಿತ ನಕಲಿ ವೈದ್ಯೆ. ಸೋಮವಾರ ಸರ್ಚ್ ವಾರಂಟ್ ಅನ್ವಯ ಕ್ಲಿನಿಕ್ ಮೇಲೆ ದಾಳಿ ನಡೆಸಿದ ಪೊಲೀಸರ ತಂಡ, ನಕಲಿ ವೈದ್ಯೆ ಸಂಗೀತಾಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಸಂಗೀತಾ ಇಲ್ಲಿನ ಮಲ್ಲೇಶ್ವರಂ ಬಳಿ ಕ್ಲಿನಿಕ್ ಹೊಂದಿದ್ದು, ಹಲವಾರು ಜನರಿಗೆ ಥೆರಪಿ ಚಿಕಿತ್ಸೆ ನೀಡುವುದಾಗಿ ನಂಬಿಸಲಾಗಿತ್ತು. ಈ ಸಂಬಂಧ ದೂರುಗಳು ಕೇಳಿಬಂದ ಹಿನ್ನೆಲೆ ಮೊಕದ್ದಮೆ ದಾಖಲಿಸಿಕೊಂಡ ಮಲ್ಲೇಶ್ವರಂ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಈಕೆಯ ಮನೆ ಮೇಲೂ ದಾಳಿ ನಡೆಸಿದಾಗ ನಕಲಿ ವೈದ್ಯೆಯ ದಾಖಲೆ ಪತ್ರಗಳು ಪತ್ತೆಯಾಗಿದ್ದು, ವಿವಿಧ ಬ್ಯಾಂಕ್‍ಗಳಲ್ಲಿ ಠೇವಣಿ ಇಟ್ಟಿದ್ದ ನಗದನ್ನು ಜಪ್ತಿ ಮಾಡಿ, ತನಿಖೆ ಮುಂದುವರಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Next Story





