ಎಸೆಸೆಲ್ಸಿ ಪರೀಕ್ಷೆಗೆ ಎಲ್ಲಾ ವಿದ್ಯಾರ್ಥಿಗಳು ಹಾಜರಾಗುವಂತೆ ಕ್ರಮವಹಿಸಿ: ಸಚಿವ ಸುರೇಶ್ ಕುಮಾರ್ ಸೂಚನೆ
ಡಿಸಿ, ಸಿಇಒ, ಎಸಿಪಿ, ಡಿಡಿಪಿಐಗಳೊಂದಿಗೆ ವಿಡಿಯೋ ಸಂವಾದ

ಬೆಂಗಳೂರು, ಜೂ.22: ಸಾರಿಗೆ ವ್ಯವಸ್ಥೆ ಸೌಲಭ್ಯವಿಲ್ಲದೇ ರಾಜ್ಯದಲ್ಲಿ ಯಾವುದೇ ಒಬ್ಬ ವಿದ್ಯಾರ್ಥಿಯೂ ಎಸೆಸೆಲ್ಸಿ ಪರೀಕ್ಷೆಗೆ ಗೈರು ಹಾಜರಾಗದಂತೆ ಗಮನಹರಿಸಬೇಕೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಜಿಲ್ಲಾಡಳಿತಗಳಿಗೆ ಸೂಚನೆ ನೀಡಿದ್ದಾರೆ.
ಜೂ.25ರಿಂದ ಆರಂಭವಾಗಲಿರುವ ಎಸೆಸೆಲ್ಸಿ ಪರೀಕ್ಷೆಯ ಹಿನ್ನೆಲೆಯಲ್ಲಿ ಸೋಮವಾರ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು, ಜಿಪಂ ಸಿಇಒಗಳು, ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲಾ ಆರೋಗ್ಯಾಧಿಕಾರಿಗಳು, ಡಿಡಿಪಿಐಗಳೊಂದಿಗೆ ವಿಡಿಯೋ ಸಂವಾದದಲ್ಲಿ ಪರೀಕ್ಷೆಗೆ ಕೈಗೊಂಡ ಸಿದ್ಧತೆಗಳನ್ನು ಪರಿಶೀಲಿಸಿ, ಮಳೆಗಾಲವಾದ್ದರಿಂದ ಯಾವುದೇ ಒಂದೇ ಒಂದು ಮಗುವಿಗೂ ಪರೀಕ್ಷಾ ಕೇಂದ್ರಕ್ಕೆ ಬಂದು ಹೋಗಲು ಯಾವುದೇ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.
ಮಳೆಗಾಲದಲ್ಲಿ ಕರಾವಳಿ, ಮಲೆನಾಡು, ಮುಂಬೈ ಕರ್ನಾಟಕ ಪ್ರದೇಶದ ದೂರದ ಸಂಪರ್ಕರಹಿತ ಪ್ರದೇಶಗಳು, ನೆರೆ ರಾಜ್ಯದ ಗಡಿಭಾಗದ ವಿದ್ಯಾರ್ಥಿಗಳು ಹಾಗೆಯೇ ಮಳೆಯಿಂದ ರಸ್ತೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆಯಿರುವ ಪ್ರದೇಶದ ಜನವಸತಿ ಪ್ರದೇಶದ ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ಎಲ್ಲ ಕ್ರಮಗಳನ್ನೂ ಮತ್ತೊಮ್ಮೆ ಖಾತರಿ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಕೆಲ ಮಕ್ಕಳು ದೋಣಿ, ಬೋಟ್‍ಗಳು ಮತ್ತು ಲಾಂಚ್‍ಗಳನ್ನು ಅವಲಂಬಿಸಿದ್ದಾರೆ. ಅವರು ಪರೀಕ್ಷಾ ಸಮಯಕ್ಕೆ ಸರಿಯಾಗಿ ಬಂದು ಹೋಗಲು ಯಾವುದೇ ತೊಂದರೆಯಾಗದಂತೆ ಅವರಿಗೆ ಎಲ್ಲ ರೀತಿಯ ವ್ಯವಸ್ಥೆ ಕೈಗೊಳ್ಳಬೇಕಾಗಿದ್ದು, ಜಿಲ್ಲಾಡಳಿತಗಳು ಈಗಾಗಲೇ ಮಾಡಿರುವ ವ್ಯವಸ್ಥೆಯನ್ನು ಪುನಃ ಖಾತರಿಪಡಿಸಿಕೊಳ್ಳಬೇಕು. ಕಟ್ಟಕಡೆಯ ಮಗುವೂ ಸಹ ಪರೀಕ್ಷೆಯಿಂದ ವಂಚಿತವಾಗದಂತೆ ಪ್ರತಿಯೊಬ್ಬರೂ ವಿಶೇಷ ಕಾಳಜಿ ವಹಿಸಬೇಕು ಎಂದು ಸಚಿವರು ತಿಳಿಸಿದರು.
ವಿಶೇಷವಾಗಿ ಮಕ್ಕಳ ಆತ್ಮವಿಶ್ವಾಸ ಹೆಚ್ಚಿಸುವ ಮತ್ತು ಆರೋಗ್ಯ ಸುರಕ್ಷಾ ಕ್ರಮಗಳಿಗೆ ಹೆಚ್ಚಿನ ಒತ್ತು ನೀಡುವುದು, ಸುರಕ್ಷಿತ ಅಂತರ ಕಾಪಾಡಿಕೊಳ್ಳುವ ದೃಷ್ಟಿಯಿಂದ ಬೆಳಗ್ಗೆ 7.30ರಿಂದಲೇ ಪರೀಕ್ಷಾ ಕೇಂದ್ರದೊಳಗೆ ಪ್ರವೇಶ ನೀಡುವುದು, ಗಡಿ ಭಾಗದ ಮಕ್ಕಳನ್ನು ಸರಿಯಾದ ಸಮಯಕ್ಕೆ ಕರೆದುಕೊಂಡು ಬರುವುದರ ಕುರಿತು ಹೆಚ್ಚಿನ ಗಮನಹರಿಸಬೇಕಾದ ಅಗತ್ಯವಿದೆ ಎಂದು ಸುರೇಶ್ ಕುಮಾರ್ ಹೇಳಿದರು.
ಮಕ್ಕಳು ಪರೀಕ್ಷಾ ಕೇಂದ್ರಕ್ಕೆ ಬಂದ ತಕ್ಷಣ ಹಾಗೂ ನಂತರ ಪಾಲಿಸಬೇಕಾದ ಕ್ರಮಗಳ ಕುರಿತು ಪರೀಕ್ಷಾ ಸಮಯ ಆರಂಭವಾಗುವ ತನಕ ಎಲ್ಲ ಪರೀಕ್ಷಾ ಕೇಂದ್ರದಲ್ಲಿ ಮೈಕ್ ಮೂಲಕ ಮಕ್ಕಳಿಗೆ ಹಿತವಾಗುವ ರೀತಿಯಲ್ಲಿ ಆಗಾಗ್ಗೆ ಪ್ರಕಟಿಸುವ ವ್ಯವಸ್ಥೆ ಮಾಡುವುದು, ಈಗಾಗಲೇ ಮಕ್ಕಳಿಗೆ ಮಾಸ್ಕ್ ಗಳನ್ನು ಪೂರೈಸಲಾಗಿದೆ. ಯಾರಾದರೂ ಮಕ್ಕಳು ಮಾಸ್ಕ್ ಮರೆತು ಬಂದರೆ ಅವರಿಗೆ ಪರೀಕ್ಷಾ ಕೇಂದ್ರಗಳಲ್ಲಿ ಮತ್ತೊಂದು ಮಾಸ್ಕ್ ನೀಡಲು ಅಗತ್ಯ ಕ್ರಮ ವಹಿಸುವುದು, ಪರೀಕ್ಷಾ ಕೇಂದ್ರದ ವ್ಯಾಪ್ತಿಯೊಳಗೆ ಬರುವ ವಿದ್ಯಾರ್ಥಿ ಆರೋಗ್ಯ ತಪಾಸಣಾ ಕೇಂದ್ರದ ಮೂಲಕವೇ ಹಾದು ಬರುವಂತೆ ಅಲ್ಲಿಂದ ನೇರವಾಗಿ ತನ್ನ ಕೊಠಡಿಗೆ ತೆರಳುವಂತಹ ವ್ಯವಸ್ಥೆ ಮಾಡಲಾಗಿದೆ. ಈ ಕುರಿತಂತೆ ಕೆಲ ಜಿಲ್ಲೆಗಳಲ್ಲಿ ಕೈಗೊಳ್ಳಲಾಗಿರುವ ಉತ್ತಮ ಉಪಕ್ರಮಗಳನ್ನು ಉಳಿದ ಜಿಲ್ಲಾಡಳಿತಗಳು ಅನುಸರಿಸಿ ಸುಲಲಿತ ಪರೀಕ್ಷೆಗೆ ಎಲ್ಲ ಕ್ರಮಗಳನ್ನೂ ಕೈಗೊಳ್ಳಬೇಕೆಂದು ಅವರು ಹೇಳಿದರು.
ಈಗಾಗಲೇ ಇಲಾಖೆ ಮಾಸ್ಕ್ ಮತ್ತು ಸ್ಯಾನಿಟೈಸರ್ ಗಳನ್ನು ಪರೀಕ್ಷಾ ಕೇಂದ್ರಗಳಿಗೆ ತಲುಪಿಸಿದೆ. ಕೆಲ ದಾನಿಗಳು ಮಾಸ್ಕ್ ವಿತರಿಸಲು ಮುಂದೆ ಬಂದಿದ್ದಾರೆ. ಸುರಕ್ಷಿತ ಅಂತರ ಕಾಪಾಡಲು ತೊಂದರೆಯಾಗುವುದರಿಂದ ಅವರಿಗೆ ಪರೀಕ್ಷಾ ಕೇಂದ್ರಗಳ ಮುಂದೆ ಮಾಸ್ಕ್ ಹಂಚಲು ಅವಕಾಶ ಮಾಡಿಕೊಡದಂತೆ ಪೊಲೀಸ್ ಇಲಾಖೆ ಅಗತ್ಯ ಕ್ರಮ ವಹಿಸಬೇಕು ಎಂದು ಸಚಿವರು ವಿವರಿಸಿದರು.
ತುಮಕೂರು, ಚಿತ್ರದುರ್ಗ, ಬಳ್ಳಾರಿ, ರಾಯಚೂರು, ಯಾದಗಿರಿ ಜಿಲ್ಲೆಗಳಿಗೆ ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಿಂದ ಚಾಮರಾಜನಗರ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯ ಕೆಲ ಕೇಂದ್ರಗಳಿಗೆ ತಮಿಳುನಾಡು ಮತ್ತು ಕೇರಳ ರಾಜ್ಯಗಳಿಂದ ಹಾಗೆಯೇ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಮತ್ತು ಕಾಗವಾಡ ತಾಲೂಕುಗಳು ಪರೀಕ್ಷಾ ಕೇಂದ್ರಗಳಿಗೆ ಮಹಾರಾಷ್ಟ್ರದಿಂದ ಬರುವ ಮಕ್ಕಳಿಗೆ ತೊಂದರೆಯಾಗದಂತೆ ನೆರೆ ರಾಜ್ಯದ ಜಿಲ್ಲಾಡಳಿತದೊಂದಿಗೆ ವ್ಯವಹರಿಸಿ ಗಡಿಭಾಗದವರೆಗೆ ಅವರಿಗೆ ಬರಲು ವ್ಯವಸ್ಥೆ ಮಾಡಿ ನಮ್ಮ ಗಡಿಭಾಗದಿಂದ ಅವರಿಗೆ ಸುರಕ್ಷಿತ ವಾತಾವರಣದಲ್ಲಿ ನಮ್ಮ ಪರೀಕ್ಷಾ ಕೇಂದ್ರಗಳಿಗೆ ಕರೆತಂದು ಸಂಜೆ ವಾಪಾಸು ಕಳಿಸಲು ಅಗತ್ಯ ವ್ಯವಸ್ಥೆ ಮಾಡುವುದು. ಹಾಗೆಯೇ ಹೊರರಾಜ್ಯಗಳಿಂದ ಬಂದು ಹೋಗಲು ತೊಂದರೆಯಾಗುವ ವಿದ್ಯಾರ್ಥಿಗಳಿಗೆ ಅಗತ್ಯಬಿದ್ದರೆ ಆಯಾ ತಾಲೂಕಿನ ಹಾಸ್ಟೆಲ್‍ಗಳಲ್ಲಿ ಊಟ ವಸತಿಗೆ ಕ್ರಮ ವಹಿಸಬೇಕು. ಆ ಹಾಸ್ಟೆಲ್‍ನಿಂದ ಪರೀಕ್ಷಾ ಕೇಂದ್ರಕ್ಕೆ ಸಮಯಕ್ಕೆ ಸರಿಯಾಗಿ ಬಸ್ ಇಲ್ಲವೇ ಜೀಪ್ ವ್ಯವಸ್ಥೆ ಮಾಡಬೇಕೆಂದು ಸುರೇಶ್ ಕುಮಾರ್ ತಿಳಿಸಿದರು.
ಹೆಚ್ಚುವರಿ ಸಿಬ್ಬಂದಿ-ಹೆಚ್ಚುವರಿ ಪರೀಕ್ಷಾ ಕೇಂದ್ರ: ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಹೆಚ್ಚುವರಿ ಪರೀಕ್ಷಾ ಸಿಬ್ಬಂದಿ, ವಾಹನಗಳು, ಎರಡು ಹೆಚ್ಚುವರಿ ಪರೀಕ್ಷಾ ಕೇಂದ್ರಗಳನ್ನು ಚುನಾವಣೆ ಸಮಯದಲ್ಲಿ ಕಾಯ್ದಿರಿಸುವಂತೆ ಮುನ್ನೆಚ್ಚರಿಕೆ ಕ್ರಮವಾಗಿ ತೆಗೆದಿರಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಯಾವುದೇ ಪರೀಕ್ಷಾ ಕೇಂದ್ರವು ಕಂಟೈನ್ಮೆಂಟ್ ವಲಯದಲ್ಲಿ ಇರಕೂಡದು. ಒಂದು ವೇಳೆ ಯಾವುದೇ ಸಂದರ್ಭದಲ್ಲಿ ಹೊಸದಾಗಿ ಕಂಟೈನ್ಮೆಂಟ್ ವಲಯಗಳು ಘೋಷಿತವಾದಲ್ಲಿ ತಕ್ಷಣವೇ ಪರೀಕ್ಷಾ ಕೇಂದ್ರವನ್ನು ಕಾಯ್ದಿರಿಸಿದ ಪರೀಕ್ಷಾ ಕೇಂದ್ರಕ್ಕೆ ಬದಲಾಯಿಸಲು ಕ್ರಮ ವಹಿಸಿ ಮಕ್ಕಳಿಗೆ ತೊಂದರೆಯಾಗದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕೆಂದು ಸಚಿವರು ತಿಳಿಸಿದರು.
ವಿಡಿಯೋ ಕಾನ್ಫರೆನ್ಸ್ ನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ. ಕೆ.ಜಿ. ಜಗದೀಶ್ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು.
ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ
ಹೊರ ರಾಜ್ಯಗಳಿಂದ ಬರುವ ಪರೀಕ್ಷಾರ್ಥಿಗಳಿಗೆ ಪ್ರತ್ಯೇಕ ಕೊಠಡಿಗಳಲ್ಲಿ ಪರೀಕ್ಷೆಗೆ ಅವಕಾಶ ಕಲ್ಪಿಸುವುದು, ಕಂಟೈನ್ಮೆಂಟ್ ಪ್ರದೇಶದಿಂದ ಬರುವ ಮಕ್ಕಳು ಮತ್ತು ಶೀತ, ನೆಗಡಿ, ಜ್ವರದಂತಹ ಲಕ್ಷಣವಿರುವ ಮಕ್ಕಳನ್ನು ಸಹ ಪ್ರತ್ಯೇಕ ಕೊಠಡಿಗಳಲ್ಲಿ ಪರೀಕ್ಷೆಗೆ ಅವಕಾಶ ಕಲ್ಪಿಸಬೇಕೆಂದು ಸುರೇಶ್ ಕುಮಾರ್ ತಿಳಿಸಿದರು.
ಪೂರಕ ಪರೀಕ್ಷೆಯಲ್ಲಿ ಅವಕಾಶ
ಕೋವಿಡ್ ಹಿನ್ನೆಲೆಯಲ್ಲಿ ಪಾಸಿಟಿವ್ ಇರುವವರ, ಕ್ವಾರಂಟೈನ್‍ನಲ್ಲಿರುವವರ ಮತ್ತು ಸಂಬಂಧಿಕರ ಸಂಪರ್ಕವಿರುವ ಮಕ್ಕಳಿಗೆ ಈ ಪರೀಕ್ಷೆ ನಿರಾಕರಿಸಿ ಪೂರಕ ಪರೀಕ್ಷೆಯಲ್ಲಿ ಅವಕಾಶ ಕಲ್ಪಿಸಬೇಕು ಎಂದು ಸಚಿವರು ವಿವರಿಸಿದರು.
ಅಣಕು ಪರೀಕ್ಷಾ ಕೇಂದ್ರ
ಮಕ್ಕಳು ಮತ್ತು ಪೊಷಕರಿಗೆ ಭರವಸೆ ಮೂಡಿಸುವ ನಿಟ್ಟಿನಲ್ಲಿ ಪರೀಕ್ಷಾ ಕೇಂದ್ರಗಳಲ್ಲಿ ವಿವಿಧ ಇಲಾಖೆಗಳ ಆಶ್ರಯದಲ್ಲಿ ಕೈಗೊಳ್ಳಲಾದ ಎಲ್ಲ ವ್ಯವಸ್ಥೆ ಮತ್ತು ಸಾಮಾಜಿಕ ಸುರಕ್ಷಾ ಕ್ರಮಗಳನ್ನು ತೋರಿಸುವ ಹಿನ್ನೆಲೆಯಲ್ಲಿ ಪರೀಕ್ಷೆಗಿಂತ ಒಂದು ದಿನ ಮುಂಚೆ ಅಂದರೆ ಜೂ.24ರಂದು ಬೆಳಗ್ಗೆ 11ರಿಂದ 2 ಗಂಟೆಯವರೆಗೆ ಪರೀಕ್ಷಾ ಕೇಂದ್ರಗಳ ಅಣುಕು ಪ್ರದರ್ಶನ ನಡೆಸಲಾಗುವುದು. ಇದರಲ್ಲಿ ಆಸಕ್ತ ಪೋಷಕರು ಮತ್ತು ಮಕ್ಕಳು ಭಾಗವಹಿಸಬಹುದಾಗಿದೆ ಎಂದು ಸಚಿವರು ತಿಳಿಸಿದರು. ಹಾಗೆಯೇ ಆರೋಗ್ಯ, ಗೃಹ, ಸಾರಿಗೆ ಇಲಾಖೆ ಸೇರಿದಂತೆ ಆಯಾ ಸ್ಥಳೀಯಾಡಳಿತಗಳು ಪರೀಕ್ಷೆಗಾಗಿ ಎಲ್ಲ ಕ್ರಮಗಳನ್ನು ಕೈಗೊಂಡಿವೆ. ನಮ್ಮ ಪರೀಕ್ಷೆಯತ್ತ ನ್ಯಾಯಾಲಯಗಳು ಸೇರಿದಂತೆ ಇಡೀ ದೇಶವೇ ನೋಡುತ್ತಿರುವುದರಿಂದ ಪರೀಕ್ಷೆಯ ಯಶಸ್ಸಿಗೆ ಪ್ರತಿಯೊಬ್ಬರೂ ಸಮರ್ಪಣಾ ಮನೋಭಾವದಿಂದ ತೊಡಗಿಸಿಕೊಳ್ಳಬೇಕು ಎಂದು ಸಚಿವರು ಮನವಿ ಮಾಡಿದರು.







