ವೇದವ್ಯಾಸ ಕಾಮತ್ ರ ಅವಹೇಳನ ಆರೋಪ : 5 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ ಶಾಸಕ
ಅಪಪ್ರಚಾರಕ್ಕೆ ತಡೆಯಾಜ್ಞೆ ನೀಡಿದ ಕೋರ್ಟ್

ವೇದವ್ಯಾಸ ಕಾಮತ್
ಮಂಗಳೂರು, ಜೂ.22: ಸಾಮಾಜಿಕ ಜಾಲತಾಣದಲ್ಲಿ ಶಾಸಕ ವೇದವ್ಯಾಸ ಕಾಮತ್ ವಿರುದ್ಧ ಅವಹೇಳನ ಮಾಡುತ್ತಿದ್ದ ಎನ್ನಲಾದ ವ್ಯಕ್ತಿಯ ವಿರುದ್ಧ ಐದು ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಲಾಗಿದೆ.
ಶಾಸಕರ ವಿರುದ್ಧದ ಅವಹೇಳನಕ್ಕೆ ಐದು ಕೋಟಿ ರೂ. ಪರಿಹಾರ ಮತ್ತು ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ತಡೆಗೆ ಮಂಗಳೂರಿನ ಒಂದನೇ ಹಿರಿಯ ಸೆಷನ್ಸ್ ನ್ಯಾಯಾಲಯದಲ್ಲಿ ಕಳೆದ ವಾರವೇ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿ ಪರಿಗಣಿಸಿದ ನ್ಯಾಯಾಲಯವು, ಸುನಿಲ್ ಬಜಿಲಕೇರಿ ಎಂಬವರಿಂದ ಶಾಸಕರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡುವುದಕ್ಕೆ ತಡೆಯಾಜ್ಞೆ ನೀಡಿ ಸೋಮವಾರ ಆದೇಶಿಸಿದೆ.
ಈ ಬಗ್ಗೆ ‘ವಾರ್ತಾಭಾರತಿ’ಗೆ ಪ್ರತಿಕ್ರಿಯೆ ನೀಡಿದ ಶಾಸಕರ ಪರ ವಾದ ಮಂಡಿಸಿದ್ದ ನ್ಯಾಯವಾದಿ ಎಂ.ಚಿದಾನಂದ ಕೆದಿಲಾಯ, ‘‘ಮಂಗಳೂರು ಮೂಲದ ಸುನಿಲ್ ಬಜಿಲಕೇರಿ ಎಂಬವರು ವೇದವ್ಯಾಸ ಕಾಮತ್ ವಿರುದ್ಧ ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ನಿರಂತರವಾಗಿ ಪೋಸ್ಟ್ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಶಾಸಕರ ವಿರುದ್ಧ ಅಪಪ್ರಚಾರ ಮಾಡುವುದನ್ನು ನಿಲ್ಲಿಸುವುದಲ್ಲದೆ, ಮಾನಹಾನಿ ಪರಿಹಾರ ನೀಡಬೇಕೆಂದು ನ್ಯಾಯಾಲಯಕ್ಕೆ ಮೊಕದ್ದಮೆ ದಾಖಲಿಸಲಾಗಿತ್ತು. ಸೋಮವಾರ ಆದೇಶ ಬಂದಿದ್ದು, ಸುನಿಲ್ ಬಜಿಲಕೆರೆ ಆರೋಪಗಳ ಬಗ್ಗೆ ದಾಖಲೆ ಒದಗಿಸಬೇಕು. ಇಲ್ಲವೇ ಮಾನಹಾನಿ ಪರಿಹಾರ ನೀಡಬೇಕು’’ ಎಂದರು.
‘‘ಶಾಸಕ ಕಾಮತ್ ಭಷ್ಟಾಚಾರದಲ್ಲಿ ಮುಳುಗಿದ್ದಾರೆ, ಆರ್ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ ಕೊಲೆ ಪ್ರಕರಣದಲ್ಲಿ ಭಾಗಿ, ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಲ್ಲಿ ಶೇ.10 ಪರ್ಸೆಂಟೇಜ್ ಪಡೆಯುವುದು, ರಾಹುಲ್ ಗಾಂಧಿ ದೇಶದ ಪಾಪುವಾದರೆ, ಕಾಮತ್ರು ಮಂಗಳೂರಿನ ಪಾಪು ಸೇರಿದಂತೆ ಶಾಸಕರ ವಿರುದ್ಧ ನಿರಂತರವಾಗಿ ಭ್ರಷ್ಟಾಚಾರ ಆರೋಪ ಹೊರಿಸುತ್ತಿದ್ದರು. ಸದ್ಯ ಈತ ಗುಜರಾತ್ನಲ್ಲಿ ಇದ್ದುಕೊಂಡೇ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ಗಳನ್ನು ಪ್ರಕಟಿಸುತ್ತಿದ್ದಾರೆ’’ ಎಂದು ನ್ಯಾಯವಾದಿ ಚಿದಾನಂದ ಕೆದಿಲಾಯ ತಿಳಿಸಿದರು.







