‘ವಂದೇ ಭಾರತ’ ಅಭಿಯಾನದಡಿ ಮತ್ತೆ 6,084 ಭಾರತೀಯರು ದೇಶಕ್ಕೆ ವಾಪಸ್: ಸಚಿವ ಪುರಿ

ಹೊಸದಿಲ್ಲಿ,ಜೂ.22: ‘ವಂದೇ ಭಾರತ’ ಅಭಿಯಾನದಡಿ ಏರ್ ಇಂಡಿಯಾದ ಜೊತೆ ಕೈಜೋಡಿಸಿದ್ದ ಖಾಸಗಿ ವಿಮಾನಯಾನ ಸಂಸ್ಥೆಗಳ ನೆರವಿನಿಂದ ವಿದೇಶಗಳಲ್ಲಿ ಸಿಕ್ಕಿಹಾಕಿಕೊಂಡಿದ್ದ ಭಾರೀ ಸಂಖ್ಯೆಯ ಭಾರತೀಯರನ್ನು ಸ್ವದೇಶಕ್ಕೆ ಮರಳಿ ಕರೆತರಲು ಸರಕಾರಕ್ಕೆ ಸಾಧ್ಯವಾಗಿದೆ. ರವಿವಾರ ಒಂದೇ ದಿನ 6,084 ಭಾರತಿಯರು ಸ್ವದೇಶಕ್ಕೆ ಮರಳಿದ್ದಾರೆ ಎಂದು ಕೇಂದ್ರ ವಾಯುಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ತಿಳಿಸಿದ್ದಾರೆ.
ಕೊರೋನ ವೈರಸ್ ಲಾಕ್‌ಡೌನ್‌ನಿಂದಾಗಿ ವಿದೇಶಗಳಲ್ಲಿ ಸಿಕ್ಕಿಹಾಕಿಕೊಂಡ ಭಾರತೀಯರನ್ನು ಸ್ವದೇಶಕ್ಕೆ ವಾಪಸ್ ಕರೆತರಲು ಮೇ 7ರಂದು ಆರಂಭಗೊಂಡಿದ್ದ ವಂದೇ ಭಾರತ ಅಭಿಯಾನವು ಪ್ರಸಕ್ತ ಮೂರನೇ ಹಂತದಲ್ಲಿದೆ. ಜೂ.11ರಿಂದ ಆರಂಭವಾಗಿರುವ ಈ ಹಂತದಲ್ಲಿ ಭಾರತವು ಒಟ್ಟು 550 ಯಾನಗಳನ್ನು ನಿರ್ವಹಿಸುತ್ತಿದೆ ಎಂದು ನಾಗರಿಕ ವಾಯುಯಾನ ಸಚಿವಾಲಯವು ತಿಳಿಸಿದೆ.
ವಂದೇ ಭಾರತ ಅಭಿಯಾನ ಆರಂಭಗೊಂಡಾಗಿನಿಂದ ಈವರೆಗೆ 2,50,087 ಭಾರತೀಯರನ್ನು ವಾಪಸ್ ಕರೆತರಲಾಗಿದೆ.
Next Story





