ಒಂದು ದಿನದ ಕೊರೋನ ಸೋಂಕಿತರ ಸಂಖ್ಯೆಯಲ್ಲಿ ದಾಖಲೆಯ ಹೆಚ್ಚಳ

ಜಿನೀವ (ಸ್ವಿಟ್ಸರ್‌ಲ್ಯಾಂಡ್), ಜೂ. 22: ಇಪ್ಪತ್ತನಾಲ್ಕು ಗಂಟೆಗಳ ಅವಧಿಯಲ್ಲಿ ದಾಖಲಾದ ಈವರೆಗಿನ ಅತಿ ಹೆಚ್ಚು ಸಂಖ್ಯೆಯ ಜಾಗತಿಕ ಕೊರೋನ ವೈರಸ್ ಸೋಂಕು ಪ್ರಕರಣಗಳನ್ನು ವಿಶ್ವ ಆರೋಗ್ಯ ಸಂಸ್ಥೆಯು ರವಿವಾರ ವರದಿ ಮಾಡಿದೆ. ಈ ಅವಧಿಯಲ್ಲಿ 1,83,020 ಹೊಸ ಸೋಂಕು ಪ್ರಕರಣಗಳು ವರದಿಯಾಗಿವೆ ಎಂದು ಅದು ತಿಳಿಸಿದೆ.
ಈ ಪೈಕಿ ಅತಿ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ಉತ್ತರ ಮತ್ತು ದಕ್ಷಿಣ ಅಮೆರಿಕ ಖಂಡಗಳಿಂದ ವರದಿಯಾಗಿವೆ. ಈ ಎರಡು ಖಂಡಗಳಲ್ಲಿ 1,16,000ಕ್ಕೂ ಅಧಿಕ ಪ್ರಕರಣಗಳು 24 ಗಂಟೆಗಳ ಅವಧಿಯಲ್ಲಿ ದಾಖಲಾಗಿವೆ ಎಂದು ಸಂಸ್ಥೆಯ ದೈನಂದಿನ ವರದಿ ತಿಳಿಸಿದೆ.
ಇದರೊಂದಿಗೆ ಒಟ್ಟು ಜಾಗತಿಕ ಸೋಂಕು ಪ್ರಕರಣಗಳ ಸಂಖ್ಯೆ 87 ಲಕ್ಷವನ್ನು ದಾಟಿದೆ ಹಾಗೂ ಒಟ್ಟು ಜಾಗತಿಕ ಸಾವಿನ ಸಂಖ್ಯೆ 4.61 ಲಕ್ಷಕ್ಕೂ ಅಧಿಕವಾಗಿದೆ.
ಇದಕ್ಕಿಂತ ಹಿಂದಿನ ಒಂದು ದಿನದ ಅತ್ಯಧಿಕ ಹೊಸ ಸೋಂಕು ಪ್ರಕರಣಗಳ ಸಂಖ್ಯೆ 1,81,232 ಜೂನ್ 18ರಂದು ದಾಖಲಾಗಿತ್ತು.
ಬ್ರೆಝಿಲ್: 50,000 ದಾಟಿದ ಕೊರೋನ ವೈರಸ್ ಸಾವು
ದೇಶದಲ್ಲಿ ಕೊರೋನ ವೈರಸ್ ಸಾವಿನ ಒಟ್ಟು ಸಂಖ್ಯೆ ರವಿವಾರ 50,000ವನ್ನು ದಾಟಿದೆ ಹಾಗೂ ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ 10 ಲಕ್ಷವನ್ನು ಮೀರಿದೆ ಎಂದು ಬ್ರೆಝಿಲ್ ತಿಳಿಸಿದೆ. ಬ್ರೆಝಿಲ್ ಅಮೆರಿಕದ ಬಳಿಕ ಮಾರಕ ಸಾಂಕ್ರಾಮಿಕದ ದಾಳಿಯಲ್ಲಿ ಅತ್ಯಂತ ಹಾನಿಗೊಳಗಾದ ಎರಡನೇ ದೇಶವಾಗಿದೆ.
ಕಳೆದ 24 ಗಂಟೆಗಳಲ್ಲಿ 641 ಸಾವುಗಳು ಸಂಭವಿಸಿವೆ ಎಂದು ಬ್ರೆಝಿಲ್‌ನ ಆರೋಗ್ಯ ಸಚಿವಾಲಯ ತಿಳಿಸಿದೆ. ಇದರೊಂದಿಗೆ ಸಾವಿನ ಒಟ್ಟು ಸಂಖ್ಯೆ 50,617ಕ್ಕೆ ಏರಿದೆ. ಅದೇ ವೇಳೆ, ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ 10,85,038ನ್ನು ತಲುಪಿದೆ.
ಮಾರಕ ಕೊರೋನ ವೈರಸನ್ನು ‘ಒಂದು ಸಣ್ಣ ಜ್ವರವಷ್ಟೆ’ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದ ಬ್ರೆಝಿಲ್ ಅಧ್ಯಕ್ಷ ಜೈರ್ ಬೊಲ್ಸೊನಾರೊ, ಸಾಂಕ್ರಾಮಿಕ ಹರಡುವುದನ್ನು ತಡೆಯಲು ದೇಶದಲ್ಲಿ ಬೀಗಮುದ್ರೆ ಹೇರುವುದನ್ನು ತೀವ್ರವಾಗಿ ವಿರೋಧಿಸಿದ್ದರು. ಈ ವಿಷಯದಲ್ಲಿ ಅವರು ತನ್ನ ಅಧಿಕಾರಿಗಳು ಮತ್ತು ಮಂತ್ರಿಗಳೊಂದಿಗೆ ಆಗಾಗ್ಗೆ ಜಗಳ ಮಾಡುತ್ತಿರುವುದು ವರದಿಯಾಗಿದೆ.







