‘ಯಾವುದೇ ಸಾಕ್ಷಿಗಳಿಲ್ಲ’: ದಿಲ್ಲಿ ಹಿಂಸಾಚಾರ ಪ್ರಕರಣದಲ್ಲಿ ಶಾಲೆಯ ಮಾಲಕನಿಗೆ ಜಾಮೀನು ನೀಡಿದ ಕೋರ್ಟ್

ಹೊಸದಿಲ್ಲಿ: ಪೊಲೀಸರು ಮಾಡಿರುವ ಆರೋಪಗಳಿಗೆ ಯಾವುದೇ ಸಾಕ್ಷಿಗಳಿಲ್ಲ ಎಂದು ಹೇಳಿರುವ ದಿಲ್ಲಿ ಕೋರ್ಟ್ ದಿಲ್ಲಿ ಹಿಂಸಾಚಾರಕ್ಕೆ ಸಂಬಂಧಿಸಿ ಬಂಧನಕ್ಕೊಳಗಾಗಿದ್ದ ಶಾಲೆಯೊಂದರ ಮಾಲಕರಿಗೆ ಜಾಮೀನು ನೀಡಿದೆ.
ಪೊಲೀಸರು ಆರೋಪ ಮಾಡಿದ್ದರೂ ಶಾಲೆಯ ಮಾಲಕರು ಭಯೋತ್ಪಾದನೆ ಚಟುವಟಿಕೆಗಳಿಗೆ ಹಣ ನೀಡಿದ್ದಾರೆ ಅಥವಾ ಪಿಂಜ್ರಾ ಟೋಡ್ ಗುಂಪಿನ ಜೊತೆ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಜೊತೆ ಮತ್ತು ಮುಸ್ಲಿಂ ಧರ್ಮಗುರುಗಳ ಜೊತೆ ಸಂಬಂಧವಿದೆ ಎನ್ನುವುದಕ್ಕೆ ಚಾರ್ಜ್ ಶೀಟ್ ಯಾವುದೇ ಸಾಕ್ಷಿಗಳನ್ನು ಒದಗಿಸಿಲ್ಲ ಎಂದು ಕೋರ್ಟ್ ಹೇಳಿದೆ.
ಘಟನೆ ನಡೆದಾಗ ಅವರು ಸ್ಥಳದಲ್ಲಿರಲಿಲ್ಲ ಎನ್ನುವುದು ಪ್ರಾಥಮಿಕ ತನಿಖೆಗಳಿಂದ ತಿಳಿದುಬಂದಿದೆ ಎಂದು ಹೇಳಿರುವ ನ್ಯಾಯಾಲಯ ರಾಜಧಾನಿ ಪಬ್ಲಿಕ್ ಸ್ಕೂಲ್ ನ ಮಾಲಕ ಫೈಸಲ್ ಫಾರೂಕ್ ರಿಗೆ ಜಾಮೀನು ನೀಡಿದೆ.
ಡಿಆರ್ ಪಿ ಕಾನ್ವೆಂಟ್ ಸ್ಕೂಲ್ ಪಕ್ಕದಲ್ಲಿರುವ ಎರಡು ಪಾರ್ಕಿಂಗ್ ಲಾಟ್ ಗಳು ಮತ್ತು ಬೇಕರಿಯೊಂದಕ್ಕೆ ಬೆಂಕಿ ಹಚ್ಚಲು ಗುಂಪಿಗೆ ಸೂಚನೆ ನೀಡಿದ್ದ ಆರೋಪವನ್ನು ಫೈಸಲ್ ಮೇಲೆ ಹೊರಿಸಲಾಗಿತ್ತು.
ಆದರೆ ಗಲಭೆ ನಡೆಯುವಾಗ ತಾನು ಶಾಲೆಯಲ್ಲಿರಲಿಲ್ಲ, ತಾನು ಸಹಾಯಕ್ಕಾಗಿ ಪೊಲೀಸರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದೆ ಎಂದು ಫೈಸಲ್ ಹೇಳಿದ್ದರು.







