ದಮಾಮ್‌ನಿಂದ ಮಂಗಳೂರು ತಲುಪಿದ ಅನಿವಾಸಿ ಕನ್ನಡಿಗರನ್ನು ಹೊತ್ತ ಬಾಡಿಗೆ ವಿಮಾನ
‘ಸೌದಿ ಕನ್ನಡಿಗಾಸ್ ಹ್ಯುಮಾನಿಟಿ ಫೋರಮ್’ನಿಂದ ವ್ಯವಸ್ಥೆ

ಮಂಗಳೂರು, ಜೂ.22: ಕೊರೋನ-ಲಾಕ್‌ಡೌನ್ ಹಿನ್ನೆಲೆಯಲ್ಲಿ ಗಲ್ಫ್ ರಾಷ್ಟ್ರಗಳಲ್ಲಿ ಸಂಕಷ್ಟಕ್ಕೀಡಾದ ಅನಿವಾಸಿ ಕನ್ನಡಿಗರನ್ನು ತವರೂರಿಗೆ ಕಳುಹಿಸಿಕೊಡುವ ಪ್ರಕ್ರಿಯೆ ಮುಂದುವರಿದ ಭಾಗವಾಗಿ ಸೋಮವಾರ ದಮಾಮ್‌ನಿಂದ (ಸೌದಿ ಅರೇಬಿಯಾದ ಕಾಲಮಾನ 2 ಗಂಟೆ) ಹೊರಟ ಬಾಡಿಗೆಯ ಇಂಡಿಗೋ ವಿಮಾನವು ರಾತ್ರಿ 9:30ಕ್ಕೆ ಮಂಗಳೂರು ವಿಮಾನ ನಿಲ್ದಾಣ ತಲುಪಿದೆ.
ಸೌದಿ ಅರೇಬಿಯಾದಲ್ಲಿ ಅಸ್ತಿತ್ವಕ್ಕೆ ಬಂದ ‘ಸೌದಿ ಕನ್ನಡಿಗಾಸ್ ಹ್ಯುಮಾನಿಟಿ ಫೋರಂ’ ಈ ವ್ಯವಸ್ಥೆ ಕಲ್ಪಿಸಿದೆ. ಪ್ರಯಾಣದ ವೆಚ್ಚವನ್ನು ಪ್ರಯಾಣಿಕರೇ ಭರಿಸಿದ್ದಾರೆ. ಈ ವಿಮಾನದಲ್ಲಿ 8 ಪುಟಾಣಿಗಳಲ್ಲದೆ ಇತರ 165 ಪ್ರಯಾಣಿಕರಿದ್ದರು ಎಂದು ‘ಸೌದಿ ಕನ್ನಡಿಗಾಸ್ ಹ್ಯುಮಾನಿಟಿ ಫೋರಂ’ನ ಮುಖಂಡರು ತಿಳಿಸಿದ್ದಾರೆ.
ಕರ್ನಾಟಕ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಕ್ಲಬ್ (ಕೆಎಸ್‌ಸಿಸಿ) ವ್ಯವಸ್ಥೆಗೊಳಿಸಿದ್ದ ವಿಮಾನವು ರವಿವಾರ ಮಂಗಳೂರಿಗೆ ಆಗಮಿಸಿತ್ತು. ಇದರಲ್ಲಿ 173 ಪ್ರಯಾಣಿಕರಿದ್ದರು. ಅಲ್ಲದೆ ವಂದೇ ಮಾತರಂ ಮಿಷನ್ ಯೋಜನೆಯಡಿ ರವಿವಾರ ಮಂಗಳೂರಿಗೆ ಬಂದ ಇಂಡಿಗೋ ವಿಮಾನದಲ್ಲಿ 11 ಪುಟಾಣಿಗಳು ಮತ್ತು ಇತರ 169 ಪ್ರಯಾಣಿಕರಿದ್ದರು.
ವಿದೇಶದಿಂದ ಬಂದ ಎಲ್ಲಾ ಪ್ರಯಾಣಿಕರನ್ನು ಸಾಂಸ್ಥಿಕ ನಿಗಾವಣೆ (ಇನ್‌ಸ್ಟಿಟ್ಯೂಶನಲ್ ಕ್ವಾರಂಟೈನ್)ಯಲ್ಲಿರಿಸಲಾಗುತ್ತದೆ. ಈ ಪ್ರಯಾಣಿಕರ ಗಂಟಲಿನ ದ್ರವ ಮಾದರಿಯ ಪರೀಕ್ಷೆಯನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಆ ವರದಿ ಬರುವವರೆಗೂ ಪ್ರಯಾಣಿಕರು ಕ್ವಾರಂಟೈನ್‌ನಲ್ಲಿರುತ್ತಾರೆ.
1987 ಪ್ರಯಾಣಿಕರ ಆಗಮನ: ದ.ಕ. ಜಿಲ್ಲೆಗೆ ಕಳೆದ ಮೂರು ವಾರಗಳ ಅವಧಿಯಲ್ಲಿ 12 ವಿಮಾನಗಳಲ್ಲಿ 1987 ಪ್ರಯಾಣಿಕರು (ಸೋಮವಾರ ಬಂದ 173 ಮಂದಿಯ ಸಹಿತ) ವಿದೇಶದಿಂದ ಆಗಮಿಸಿದ್ದಾರೆ. ಆ ಪೈಕಿ 239 ಮಂದಿಗೆ ಕೊರೋನ ಪಾಸಿಟಿವ್ ಆಗಿದೆ. ಉಳಿದಂತೆ 1,575 ಮಂದಿಯ ವರದಿಯು ನೆಗೆಟಿವ್ ಬಂದಿದೆ.







