ವಿಭಜಿತ ಜಗತ್ತಿನೊಂದಿಗೆ ಕೊರೋನ ಸೋಲಿಸಲು ಸಾಧ್ಯವಿಲ್ಲ: ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ

ದುಬೈ, ಜೂ. 22: ಕೊರೋನ ವೈರಸ್‌ನ ಅಪಾಯಗಳ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಸೋಮವಾರ ಹೊಸದಾಗಿ ಎಚ್ಚರಿಕೆಯನ್ನು ಹೊರಡಿಸಿದೆ.
ಜಾಗತಿಕ ಮಟ್ಟದಲ್ಲಿ ನೂತನ-ಕೊರೋನ ವೈರಸ್ ಸೋಂಕು ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವ ಹೊರತಾಗಿಯೂ, ಹಲವಾರು ಐರೋಪ್ಯ ದೇಶಗಳು ಜನರ ಚಲನವಲನಗಳ ಮೇಲೆ ವಿಧಿಸಲಾಗಿರುವ ನಿರ್ಬಂಧಗಳನ್ನು ಸಡಿಲಗೊಳಿಸುತ್ತಿರುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರಾಸ್ ಅದನಾಮ್ ಗೇಬ್ರಿಯೇಸಸ್ ಕಳವಳ ವ್ಯಕ್ತಪಡಿಸಿದರು.
ಅವರು ದುಬೈ ಏರ್ಪಡಿಸಿದ್ದ ಆರೋಗ್ಯ ವಿಚಾರಸಂಕಿರಣದಲ್ಲಿ ಮಾತನಾಡುತ್ತಿದ್ದರು.
‘‘ಸಾಂಕ್ರಾಮಿಕವು ಈಗಲೂ ಏರುಗತಿಯಲ್ಲೇ ಸಾಗಿದೆ. ಅದು ಆರೋಗ್ಯ ಬಿಕ್ಕಟ್ಟಿಗಿಂತಲೂ ಹೆಚ್ಚಿನದು ಎನ್ನುವುದು ನಮಗೆ ಗೊತ್ತಿದೆ. ಅದು ಆರ್ಥಿಕ ಬಿಕ್ಕಟ್ಟಾಗಿದೆ, ಸಾಮಾಜಿಕ ಬಿಕ್ಕಟ್ಟಾಗಿದೆ ಹಾಗೂ ಹಲವು ದೇಶಗಳಲ್ಲಿ ರಾಜಕೀಯ ಬಿಕ್ಕಟ್ಟಾಗಿದೆ’’ ಎಂದು ಈ ಸಂದರ್ಭದಲ್ಲಿ ಮಾತನಾಡಿದ ಅವರು ಹೇಳಿದರು.
‘‘ಅದರ ಪರಿಣಾಮಗಳನ್ನು ಮುಂದಿನ ಹಲವಾರು ದಶಕಗಳಲ್ಲಿಯೂ ನಾವು ಅನುಭವಿಸಬೇಕಾಗುತ್ತದೆ’’ ಎಂದು ಅವರು ಅಭಿಪ್ರಾಯಪಟ್ಟರು.
ಜಗತ್ತು ಈಗ ಎದುರಿಸುತ್ತಿರುವ ಅತಿ ದೊಡ್ಡ ಬೆದರಿಕೆ ವೈರಸ್ ಮಾತ್ರವಲ್ಲ, ಜಾಗತಿಕ ಒಗ್ಗಟ್ಟು ಮತ್ತು ಜಾಗತಿಕ ನಾಯಕತ್ವದ ಕೊರತೆಯೂ ಬೆದರಿಕೆಯಾಗಿದೆ ಎಂದು ಗೇಬ್ರಿಯೇಸಸ್ ಹೇಳಿದರು. ‘‘ವಿಭಜಿತ ಜಗತ್ತಿನೊಂದಿಗೆ ನಾವು ಈ ಸಾಂಕ್ರಾಮಿಕವನ್ನು ಜಯಿಸಲು ಸಾಧ್ಯವಿಲ್ಲ’’ ಎಂದು ಹೇಳಿದ ಅವರು, ‘‘ಸಾಂಕ್ರಾಮಿಕದ ರಾಜಕೀಕರಣವು ಪರಿಸ್ಥಿತಿಯನ್ನು ಹದಗೆಡಿಸಿದೆ’’ ಎಂದು ಅಭಿಪ್ರಾಯಪಟ್ಟರು.







