ಜುಲೈ 1ರ ವೇಳೆಗೆ ಭಾರತದಲ್ಲಿ 6 ಲಕ್ಷ ಕೊರೋನ ಸೋಂಕು
ಮಿಶಿಗನ್ ವಿವಿ ಸಂಶೋಧಕಿಯ ವರದಿ

ಮಿಶಿಗನ್ (ಅಮೆರಿಕ), ಜೂ. 22: ಈಗಾಗಲೇ 4 ಲಕ್ಷಕ್ಕೂ ಅಧಿಕ ಕೋವಿಡ್-19 ಸೋಂಕು ಪ್ರಕರಣಗಳನ್ನು ದಾಖಲಿಸಿರುವ ಭಾರತವು ಜುಲೈ ಒಂದರ ವೇಳೆಗೆ 6 ಲಕ್ಷಕ್ಕೂ ಅಧಿಕ ಪ್ರಕರಣಗಳನ್ನು ಕಾಣಲಿದೆ ಹಾಗೂ ಸಾಂಕ್ರಾಮಿಕದ ಹರಡುವಿಕೆಯನ್ನು ತಡೆಯಲು ದೇಶದಲ್ಲಿ ಏಕರೂಪದಲ್ಲಿ ವ್ಯವಸ್ಥಿತ ಯೋಜನೆ ಮತ್ತು ಜಾರಿ ಇನ್ನು ನಡೆದಿಲ್ಲವಾದುದರಿಂದ ಈ ಸಂಖ್ಯೆಯು ಹೆಚ್ಚುತ್ತಲೇ ಹೋಗುತ್ತದೆ ಎಂದು ಅಮೆರಿಕದ ಮಿಶಿಗನ್ ವಿಶ್ವವಿದ್ಯಾನಿಲಯದ ಭಾರತ ಮೂಲದ ಸಂಶೋಧಕಿ ಭ್ರಮರ್ ಮುಖರ್ಜಿ ಹೇಳಿದ್ದಾರೆ.
ಸಾಂಕ್ರಾಮಿಕದ ತೀವ್ರತೆಯನ್ನು ಕಡಿಮೆ ಮಾಡಲು ಈಗ ದೇಶದಲ್ಲಿ ಹೆಚ್ಚೆಚ್ಚು ಪರೀಕ್ಷೆಗಳನ್ನು ನಡೆಸುವ ಅಗತ್ಯವಿದೆ ಎಂದು ಮಿಶಿಗನ್ ವಿಶ್ವವಿದ್ಯಾನಿಲಯದ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನಲ್ಲಿ ಬಯೋಸ್ಟ್ಯಾಟಿಸ್ಟಿಕ್ಸ್ ವಿಭಾಗದ ಮುಖ್ಯಸ್ಥೆ ಹಾಗೂ ಪ್ರೊಫೆಸರ್ ಆಗಿರುವ ಮುಖರ್ಜಿ ಐಎಎನ್‌ಎಸ್ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.
‘‘ಭಾರತ ಈವರೆಗೆ ತನ್ನ ಜನಸಂಖ್ಯೆಯ ಸುಮಾರು 0.5 ಶೇಕಡದಷ್ಟು ಜನರನ್ನು ಪರೀಕ್ಷೆಗೆ ಒಳಪಡಿಸಿದೆ. ಜಾಗತಿಕ ಪರೀಕ್ಷೆಯ ಪ್ರಮಾಣವು ಸರಾಸರಿ ಸುಮಾರು 4 ಶೇಕಡ ಆಗಿದೆ. ಜಾಗತಿಕ ಸರಾಸರಿಯನ್ನು ಶೀಘ್ರದಲ್ಲಿ ತಲುಪಲು ಭಾರತಕ್ಕೆ ಸಾಧ್ಯವಾಗುವುದಿಲ್ಲ. ಹಾಗಾಗಿ, ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಪರ್ಯಾಯವೊಂದು ನಮಗೆ ಬೇಕು’’ ಎಂದು ಅವರು ನುಡಿದರು.





