ದ.ಕ.ಜಿಲ್ಲೆ: ಕೃಷಿ ಇಲಾಖೆಯಿಂದ ಪಾಳುಬಿದ್ದ ಗದ್ದೆಗಳಲ್ಲಿ ಭತ್ತ ಅಭಿಯಾನ
1 ಸಾವಿರ ಎಕರೆಯಲ್ಲಿ ಸಾಧನೆಯ ಗುರಿ
ಮಂಗಳೂರು, ಜೂ.22: ದ.ಕ. ಜಿಲ್ಲೆಯ ವಿವಿಧೆಡೆಯಲ್ಲಿ ಹಡೀಲು (ಪಾಳು ಬಿದ್ದ) ಗದ್ದೆಗಳಲ್ಲಿ ಭತ್ತದ ಕೃಷಿ ಅಭಿಯಾನವನ್ನು ಕೃಷಿ ಇಲಾಖೆಯು ಆರಂಭಿಸಿದೆ. ಪ್ರಸಕ್ತ ಸಾಲಿನಲ್ಲಿ ಆಸಕ್ತ ರೈತರ ಸಹಕಾರದಿಂದ ಪಾಳುಬಿದ್ದ 1000 ಎಕರೆಗಳಲ್ಲಿ ಭತ್ತದ ಕೃಷಿ ಬೆಳೆಯುವ ಗುರಿಯನ್ನು ಇಲಾಖೆ ಹೊಂದಿದ್ದು, ಈಗಾಗಲೇ ಪಾಳುಬಿದ್ದ 100ಕ್ಕೂ ಅಧಿಕ ಎಕರೆ ಗದ್ದೆಗಳಲ್ಲಿ ಭತ್ತ ಬೆಳೆಯಲು ರೈತರನ್ನು ಉತ್ತೇಜಿಸಿದೆ.
ಯುವ ಸಮೂಹವು ಭತ್ತದ ಕೃಷಿಯಿಂದ ವಿಮುಖರಾಗಿದ್ದರಿಂದ ಹೊಲಗದ್ದೆಗಳು ಪಾಳು ಬೀಳುತ್ತಿರುವುದು ಸಾಮಾನ್ಯವಾಗಿದೆ. ಈ ಮಧ್ಯೆ ಮತ್ತೆ ಭತ್ತದ ಕೃಷಿಗೆ ರೈತರನ್ನು ಪ್ರೇರೇಪಿಸುವ ನಿಟ್ಟಿನಲ್ಲಿ ಜಿಲ್ಲಾ ಕೃಷಿ ಜಂಟಿ ನಿರ್ದೇಶಕರು ಹಾಗೂ ಸಹಾಯಕ ಕೃಷಿ ನಿರ್ದೇಶಕರು ಜಿಲ್ಲೆಯ ವಿವಿಧೆಡೆ ಸಂಚರಿಸಿ ಪಾಳುಬಿದ್ದ ಗದ್ದೆಗಳನ್ನು ಗುರುತಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಈಗಾಗಲೆ ನಗರ ಹೊರವಲಯದ ಸೂರಿಂಜೆ, ಮುಲ್ಕಿ, ಅತಿಕಾರಿಬೆಟ್ಟು ಮತ್ತಿತರ ಕಡೆ ಗದ್ದೆಗಳನ್ನು ಗುರುತಿಸಲಾಗಿದ್ದು, ಅಲ್ಲಿ ಭತ್ತವನ್ನು ಬೆಳೆಯುವಂತೆ ರೈತರಲ್ಲಿ ಮನವಿ ಮಾಡಿದ್ದಾರೆ.
ದ.ಕ. ಜಿಲ್ಲೆಯಲ್ಲಿ ಭತ್ತದ ಕೃಷಿಯು ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಿದೆ. 6 ವರ್ಷದ ಹಿಂದೆ ಜಿಲ್ಲೆಯಲ್ಲಿ 34,000 ಹೆಕ್ಟೇರ್‌ನಲ್ಲಿ ಭತ್ತ ಬೆಳೆಯಲಾಗುತ್ತಿದ್ದರೆ, 2020ರ ಮುಂಗಾರು ಹಂಗಾಮಿನಲ್ಲಿ ಇದು 10,260 ಹೆಕ್ಟೇರ್‌ಗೆ ಕುಸಿದಿದೆ. ವಿವಿಧ ಕಾರಣಗಳಿಂದಾಗಿ ರೈತರು ಭತ್ತದ ಬೆಳೆಯಿಂದ ವಿಮುಖರಾಗುತ್ತಿದ್ದು, ಪಾಳುಬೀಳುವ ಗದ್ದೆಗಳ ಸಂಖ್ಯೆ ಮತ್ತು ಪ್ರಮಾಣ ಹೆಚ್ಚುತ್ತಿದೆ. ಇದನ್ನು ಮನಗಂಡ ಇಲಾಖೆಯು ಭತ್ತದ ಬೆಳೆಯತ್ತ ಮತ್ತೆ ರೈತರನ್ನು ಆಕರ್ಷಿಸಿ ಹರಸಾಹಸ ಮಾಡುತ್ತಿದೆ.
ಕೊರೋನ-ಲಾಕ್‌ಡೌನ್ ಹಿನ್ನೆಲೆಯಲ್ಲಿ ಬೇರೆ ಬೇರೆ ಕಡೆ ಕೆಲಸ ಮಾಡಿಕೊಂಡಿದ್ದವರು ಊರಿಗೆ ಮರಳಿದ್ದು, ಅವರು ಭತ್ತದ ಕೃಷಿಯತ್ತ ಆಸಕ್ತರಾಗುವಂತೆ ಅಧಿಕಾರಿಗಳು ಅಭಿಯಾನವನ್ನೇ ಅರಂಭಿಸಿದ್ದಾರೆ. ಅಂದರೆ ಪಾಳುಬಿದ್ದ ಗದ್ದೆಗಳ ಬಗ್ಗೆ ಕೃಷಿ ಸಹಾಯಕರಿಂದ ಮಾಹಿತಿ ಪಡೆಯಲಾಗುತ್ತಿದೆ. ಬಳಿಕ ಅಲ್ಲಿಗೆ ಕೃಷಿ ಇಲಾಖೆ ಜಿಲ್ಲಾ ಜಂಟಿ ನಿರ್ದೇಶಕರ ಸಹಿತ ಇತರ ಅಧಿಕಾರಿಗಳು ಭೇಟಿ ನೀಡಿ ಸ್ಥಳೀಯವಾಗಿ ರೈತರನ್ನು ಸೇರಿಸಿ ಪಾಳು ಬಿದ್ದ ಗದ್ದೆಗಳಲ್ಲಿ ಭತ್ತ ಬೆಳೆಯಲು ಪ್ರೋತ್ಸಾಹದಾಯಕ ಮಾತುಗಳೊಂದಿಗೆ ಮನವಿ ಮಾಡುತ್ತಾರೆ. ಈಗಾಗಲೇ ಕೆಲವು ಪ್ರಗತಿಪರ ಕೃಷಿಕರು ಇಲಾಖೆಯೊಂದಿಗೆ ಕೈಜೋಡಿಸಿದ್ದಾರೆ. ಭತ್ತದ ಬೆಳೆ ಮುಂದಾಗುವ ರೈತರಿಗೆ ಸಹಾಯಧನದಲ್ಲಿ ಬಿತ್ತನೆ ಬೀಜ, ಯಂತ್ರಧಾರೆ ಯೋಜನೆಯಲ್ಲಿ ಉಳುವೆ ಯಂತ್ರ ಸೌಲಭ್ಯವನ್ನು ಒದಗಿಸಲಾಗುತ್ತದೆ. ಅಲ್ಲದೆ ಸಹಾಯಧನ ಆಧಾರಿತ ಯೋಜನೆಗಳನ್ನು ಇದಕ್ಕೆ ಜೋಡಿಸುವ ಪ್ರಯತ್ನಗಳು ಕೂಡಾ ಕೃಷಿ ಇಲಾಖೆಯಿಂದ ನಡೆಯುತ್ತಿದೆ.







