ಕೃಷಿ ಯಂತ್ರೋಪಕರಣ ಯೋಜನೆಯಡಿ ಅಧಿಕಾರಿಗಳಿಂದ ಕೋಟ್ಯಂತರ ರೂ. ಭ್ರಷ್ಟಾಚಾರ: ಜಿಪಂ ಕೆಡಿಪಿ ಸಭೆಯಲ್ಲಿ ಆರೋಪ
ಚಿಕ್ಕಮಗಳೂರು

ಚಿಕ್ಕಮಗಳೂರು, ಜೂ.22: ಕೃಷಿ ಯಾಂತ್ರೀಕರಣ ಯೋಜನೆಯಡಿಯಲ್ಲಿ ರೈತರು ಖರೀದಿಸುವ ಯಂತ್ರೋಪಕರಣಗಳಿಗೆ ಸರಕಾರ ನೀಡುವ ಕೋಟ್ಯಂತರ ರೂ. ಸಬ್ಸಿಡಿಯನ್ನು ಕೃಷಿ ಇಲಾಖೆ ಅಧಿಕಾರಿಗಳು ಮತ್ತು ಖಾಸಗಿ ಸಂಸ್ಥೆಗಳು ಲೂಟಿ ಮಾಡಿದ್ದಾರೆ. ರೈತರಿಗಾಗಿರುವ ವಂಚನೆಯ ವಿಷಯದ ಮೇಲೆ ಕೆಡಿಪಿ ಸಭೆಯಲ್ಲಿ ಚರ್ಚೆಗೆ ಅವಕಾಶ ನೀಡದೇ ಆಡಳಿತ ಪಕ್ಷದ ಸದಸ್ಯರು ಹಗರಣ ಮುಚ್ಚಿಹಾಕಲು ಯತ್ನ ನಡೆಸಿದ್ದಾರೆಂದು ಆರೋಪಿಸಿದ ಜಿಪಂ ವಿರೋಧ ಪಕ್ಷದ ಸದಸ್ಯರು ಸಭೆಯಲ್ಲಿ ಗದ್ದಲ ಎಬ್ಬಿಸಿ ಸಭಾತ್ಯಾಗ ಮಾಡಿದ ಘಟನೆ ಸೋಮವಾರ ನಡೆಯಿತು.
ಕೋವಿಡ್-19 ಹಿನ್ನೆಲೆಯಲ್ಲಿ ಕಳೆದ ಮೂರು ತಿಂಗಳಿಂದ ಮುಂದೂಡಲಾಗಿದ್ದ ಜಿಪಂ ಕೆಡಿಪಿ ಸಭೆ ಸೋಮವಾರ ನಗರದ ಜಿಲ್ಲಾ ಪಂಚಾಯತ್ ಕಚೇರಿಯ ನಝೀರ್ ಸಾಬ್ ಸಭಾಂಗಣದಲ್ಲಿ ಸೋಮವಾರ ನಡೆದಿದ್ದು, ಸಭೆಯ ಆರಂಭದಲ್ಲಿ ಅನುಪಾಲನಾ ವರದಿಗೂ ಮುನ್ನ ಸದಸ್ಯರ ಪ್ರಶ್ನಾವಳಿಗಳ ಮೇಲಿನ ಚರ್ಚೆ ಸಂದರ್ಭ ಕಾಂಗ್ರೆಸ್ ಸದಸ್ಯ ಶರತ್ ಕೃಷ್ಣಮೂರ್ತಿ, ಕಳೆದ 2016ರಿಂದ 2019ರವರೆಗೆ ರಾಜ್ಯ ಸರಕಾರ ಯಾಂತ್ರೀಕರಣ ಯೋಜನೆಯಡಿ ಪ್ರತೀ ವರ್ಷ ರೈತರಿಗೆ ನೇಗಿಲು ಮತ್ತಿತರ ಯಂತ್ರೋಪಕರಣಗಳ ಖರೀದಿಗೆ ಸಬ್ಸಿಡಿ ನೀಡುತ್ತಿದೆ. ಈ ಸಬ್ಸಿಡಿ ಹಣವನ್ನು ಕೃಷಿ ಇಲಾಖೆಯ ಅಧಿಕಾರಿಗಳು ಹಾಗೂ ಯಂತ್ರೋಪಕರಣಗಳನ್ನು ಪೂರೈಕೆ ಮಾಡುವ ಖಾಸಗಿ ಕಂಪೆನಿಗಳು ರೈತರ ಅರ್ಜಿಗಳಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಕೋಟ್ಯಂತರ ರೂ. ಸರಕಾರದ ಅನುದಾನವನ್ನು ಲೂಟಿ ಮಾಡಿದ್ದಾರೆ. ಈ ವಿಷಯದ ಮೇಲೆ ಚರ್ಚೆಗೆ ಅವಕಾಶ ನೀಡಬೇಕೆಂದು ಸಭಾಧ್ಯಕ್ಷರಿಗೆ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ ಹಾಗೂ ಉಪಾಧ್ಯಕ್ಷೆ ಸೋಮಶೇಖರ್, ಈ ವಿಷಯ ಸಂಬಂಧ ಹಿಂದಿನ ಕೆಡಿಪಿ ಸಭೆಯಲ್ಲಿ ಚರ್ಚೆಯಾಗಿದ್ದು, ಭಷ್ಟಾಚಾರದ ತನಿಖೆಗಾಗಿ ಅಧಿಕಾರಿಗಳ ನೇತೃತ್ವದಲ್ಲಿ ವಿಚಕ್ಷಣ ಸಮಿತಿಯನ್ನು ನೇಮಕ ಮಾಡಲಾಗಿದೆ. ಸಮಿತಿಯ ವರದಿ ಬಂದ ಬಳಿಕ ಚರ್ಚೆ ಮಾಡೋಣ ಎಂದರು. ಇದಕ್ಕೆ ಸಭೆಯಲ್ಲಿದ್ದ ಬಿಜೆಪಿ ಶಾಸಕರಾದ ಕೂಡೂರಿನ ಬೆಳ್ಳಿ ಪ್ರಕಾಶ್ ಹಾಗು ತರೀಕರೆಯ ಡಿ.ಎಸ್.ಸುರೇಶ್ ಸೇರಿದಂತೆ ಆಡಳಿತ ಪಕ್ಷದ ಎಲ್ಲ ಸದಸ್ಯರು ಬೆಂಬಲ ವ್ಯಕ್ತಪಡಿಸಿ, ಅನುಪಾಲನಾ ವರದಿ ಮೇಲೆ ಚರ್ಚೆ ನಡೆಯಬೇಕೆಂದು ಪಟ್ಟು ಹಿಡಿದರು.
ಆಡಳಿತ ಪಕ್ಷದ ಈ ನಿಲುವಿಗೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಪಕ್ಷದ ಶರತ್ ಕೃಷ್ಣಮೂರ್ತಿ, ಈ ಹಗರಣ ಇಡೀ ಜಿಲ್ಲೆಗೆ ಸಂಬಂಧಿಸಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಈ ಯೋಜನಯಡಿಯಲ್ಲಿ ಸರಕಾರದ ಹಣವನ್ನು ಲೂಟಿ ಮಾಡಲಾಗಿದೆ. ಜಿಲ್ಲೆಯ ಕಡೂರು, ತರೀಕೆರೆ, ಮೂಡಿಗೆರೆ ಸೇರಿದಂತೆ ಎಲ್ಲ ತಾಲೂಕುಗಳಲ್ಲೂ ಈ ಯೋಜನೆಯಡಿಯಲ್ಲಿ ಅಧಿಕಾರಿಗಳು ಭಾರೀ ಭಷ್ಟಾಚಾರ ನಡೆಸಿದ್ದು, ಜಿಲ್ಲೆಯಲ್ಲಿನ ಅಮಾಯಕ ರೈತರನ್ನು ವಂಚಿಸಿ ಸರಕಾರದ ಹಣವನ್ನು ಲೂಟಿ ಮಾಡಿರುವ ಅಧಿಕಾರಿಗಳು ಹಾಗೂ ಖಾಸಗಿ ಕಂಪೆನಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು. ಇಂತಹ ಗಂಭೀರ ವಿಷಯದ ಮೇಲೆ ಚರ್ಚೆ ನಡೆಸಲು ಅವಕಾಶ ನೀಡಬೇಕೆಂದು ಪಟ್ಟು ಹಿಡಿದರು.
ಶರತ್ ಕೃಷ್ಣಮೂರ್ತಿ ಅವರ ಮನವಿಗೆ ಕಾಂಗ್ರೆಸ್ ಸದಸ್ಯರಾದ ಕೆ.ಆರ್.ಪ್ರಭಾಕರ್ ಸೇರಿದಂತೆ ವಿರೋಧ ಪಕ್ಷಗಳ ಎಲ್ಲ ಸದಸ್ಯರು ಬೆಂಬಲ ಸೂಚಿಸಿ ಈ ವಿಷಯದ ಮೇಲೆ ಚರ್ಚೆಯಾಗಲೇ ಬೇಕು ಎಂದು ಒತ್ತಾಯಿಸಿದರು.
ಆದರೆ ಶರತ್ ಕೃಷ್ಣಮೂರ್ತಿ ಅವರ ಮನವಿಗೆ ಆಡಳಿತ ಪಕ್ಷದ ಸದಸ್ಯರು ಸೊಪ್ಪು ಹಾಕದ ಹಿನ್ನೆಲೆಯಲ್ಲಿ ವಿರೋಧ ಪಕ್ಷದ ಸದಸ್ಯರು ಸಭಾತ್ಯಾಗ ಮಾಡಲು ಮುಂದಾದರು. ಈ ವೇಳೆ ಶರತ್ ಕೃಷ್ಣಮೂರ್ತಿ ಸಭೆಯ ವೇದಿಕೆ ಮುಂದೆ ತೆರಳಿ ಚರ್ಚೆಗೆ ಅವಕಾಶ ನೀಡದಿರುವ ಬಗ್ಗೆ ಭಾರೀ ಆಕ್ರೋಶ ವ್ಯಕ್ತಪಡಿಸಿ ಗದ್ದಲ ಎಬ್ಬಿಸಿದರು. ಈ ವೇಳೆ ಕೂಡುರು ಕ್ಷೇತ್ರದಾ ಶಾಸಕ ಬೆಳ್ಳಿಪ್ರಕಾಶ್ ಹಾಗೂ ಶರತ್ ಕೃಷ್ಣಮೂರ್ತಿ ನಡುವೆ ವೇದಿಕೆ ಮುಂಭಾಗದಲ್ಲಿ ಮಾತಿನ ಚಕಮಕಿ ನಡೆದು ಸಭೆ ಗೊಂದಲ ಗೂಡಾಗಿ ಮಾರ್ಪಟ್ಟಿತು. ಈ ವೇಳೆ ಜಿಪಂ ಅಧ್ಯಕ್ಷೆ, ಉಪಾಧ್ಯಕ್ಷರು ಅನುಪಾಲನಾ ವರದಿ ಬಳಿಕ ಚರ್ಚೆಗೆ ಅವಕಾಶ ನೀಡುತ್ತೇವೆ. ಸಭೆಯ ಮಧ್ಯೆ ಚರ್ಚೆಗೆ ಅವಕಾಶ ನೀಡುವುದಿಲ್ಲ ಎಂದು ರೂಲಿಂಗ್ ನೀಡಿದರು. ಆದರೂ ಪಟ್ಟು ಬಿಡದ ವಿರೋಧ ಸದಸ್ಯರಾದ ಶರತ್ ಕೃಷ್ಣಮೂರ್ತಿ, ಪ್ರಭಾಕರ್, ಲೋಕೇಶ್, ರಾಧಾ, ಶಕುಂತಲಾ, ಪ್ರೇಮಾಬಾಯಿ, ರೇಣುಕಮ್ಮ ಸಭಾತ್ಯಾಗ ಮಾಡಿದರು, ಸಭಾತ್ಯಾಗ ಮಾಡಿದ್ದಲ್ಲೇ ಆಡಳಿತ ಪಕ್ಷದ ನಿಲುವು ಖಂಡಿಸಿ ಜಿಪಂ ಕಚೇರಿ ಆವರಣದಲ್ಲಿ ಧರಣಿ ನಡೆಸಿದರು.
ವಿರೋಧ ಪಕ್ಷದ ಸದಸ್ಯರು ಅತ್ತ ಧರಣಿ ನಡೆಸುತ್ತಿದ್ದರೆ, ಇತ್ತ ಆಡಳಿತ ಪಕ್ಷದ ಸದಸ್ಯರು ಅನುಪಾಲನಾ ವರದಿ ಮೇಲೆ ಚರ್ಚೆ ಮುಂದುವರಿಸಿದರು. ಈ ಚರ್ಚೆ ನಡೆಯುತ್ತಿದ್ದ ವೇಳೆ ಸಭೆಗೆ ತಡವಾಗಿ ಆಗಮಿಸಿ ಶೃಂಗೇರಿ ಕ್ಷೇತ್ರ ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ವಿರೋಧ ಪಕ್ಷದ ಸದಸ್ಯರನ್ನು ಹೊರಗಿಟ್ಟು ಸಭೆ ನಡೆಸಿದರೆ ಸಭೆಯಲ್ಲಾಗುವ ಚರ್ಚೆಗಳಿಗೆ ಅರ್ಥ ಇರುವುದಿಲ್ಲ. ವಿರೋಧ ಪಕ್ಷದ ಸದಸ್ಯರನ್ನು ಜನರೇ ಅಯ್ಕೆ ಮಾಡಿದ್ದಾರೆ. ಅವರ ಸಮಸ್ಯೆಯನ್ನು ಆಲಿಸುವುದು ಆಡಳಿತ ಪಕ್ಷದ ಕೆಲಸವೂ ಆಗಿದೆ. ವಿರೋಧ ಪಕ್ಷಗಳನ್ನು ಹೊರಗಿಟ್ಟು ಚರ್ಚೆ ನಡೆಸಿದರೆ ಪ್ರಜಾಪ್ರಭುತ್ವ ವ್ಯವಸ್ಥೆಗೂ ಅರ್ಥ ಇರುವುದಿಲ್ಲ. ಆಡಳಿತ ಪಕ್ಷದ ಸದಸ್ಯರು ಸಭಾತ್ಯಾಗ ಮಾಡಿದವರ ಮನವೊಲಿಸಿ ಸಭೆಗೆ ಕರೆತರಬೇಕೆಂದು ಮನವಿ ಮಾಡಿದರು.
ಇದಕ್ಕೆ ಬಿಜೆಪಿ ಶಾಸಕ ಡಿ.ಎಸ್.ಸುರೇಶ್ ಸೇರಿದಂತೆ ಆಡಳಿತ ಪಕ್ಷದ ಜಿಪಂ ಸದಸ್ಯರಾದ ಮಹೇಶ್ ಒಡೆಯರ್, ಕೆ.ಆರ್.ಆನಂದಪ್ಪ, ರಾಮಸ್ವಾಮಿ ಮತ್ತಿತರರು ವಿರೋಧ ವ್ಯಕ್ತಪಡಿಸಿ, ಜನಪ್ರತಿನಿಧಿಗಳ ಹಕ್ಕನ್ನು ಇಲ್ಲಿ ಯಾರೂ ಮೊಟಕುಗೊಳಿಸಿಲ್ಲ. ಜಿಪಂ ನಿಯಮಾವಳಿ ಮೀರಿ ವಿರೋಧ ಪಕ್ಷದ ಸದಸ್ಯರು ಸಭಾತ್ಯಾಗ ಮಾಡಿದ್ದಾರೆ. ಸಭೆಯ ಮಹತ್ವ ಅರಿತು ಅವರೇ ಸಭೆಗೆ ಹಾಜರಾಗಬೇಕಿತ್ತು. ಆದರೆ ಯಾರೂ ಬಂದಿಲ್ಲ. ಆದರೂ ಅವರ ಮನವೊಲಿಸಿ ಸಭೆಗೆ ಕರೆತರುವ ಪ್ರಯತ್ನ ಮಾಡಲಾಗುವುದು ಎಂದರು.
ಬಳಿಕ ಜಿಪಂ ಅಧ್ಯಕ್ಷೆ, ಉಪಾಧ್ಯಕ್ಷರೂ ಸೇರಿದಂತೆ ಕೆಲ ಆಡಳಿತ ಪಕ್ಷದ ಸದಸ್ಯರು ಸಭಾತ್ಯಾಗ ಮಾಡಿದ್ದ ವಿರೋಧ ಪಕ್ಷದ ಸದಸ್ಯರ ಮನವೊಲಿಕೆಗೆ ಪ್ರಯತ್ನ ನಡೆಸಿದರಾದರೂ ಆರಂಭದಲ್ಲಿ ಪಟ್ಟು ಸಡಿಲಿಸದೇ ಧರಣಿ ಮುಂದುವರಿಸಿದ್ದರು.
.jpg)







