ಚಿಕ್ಕಮಗಳೂರು: 5 ತಿಂಗಳ ಮಗು ಸೇರಿ ಐವರಲ್ಲಿ ಕೊರೋನ ಸೋಂಕು

ಚಿಕ್ಕಮಗಳೂರು, ಜೂ.22: ರವಿವಾರ ತಾಲೂಕಿನಲ್ಲಿ ಓರ್ವ ವ್ಯಕ್ತಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದರೆ, ಸೋಮವಾರ 5 ತಿಂಗಳ ಮಗು ಸೇರಿದಂತೆ ಒಂದೇ ಕುಟುಂಬದ ನಾಲ್ವರಲ್ಲಿ ಸೋಂಕು ಇರುವುದು ಪ್ರಯೋಗಾಲಯದ ವರದಿಯಿಂದ ದೃಢಪಟ್ಟಿದೆ.
ಸೋಮವಾರ ಜಿಲ್ಲೆಯಲ್ಲಿ ಪತ್ತೆಯಾಗಿರುವ 5 ಪ್ರಕರಣಗಳ ಪೈಕಿ ನಾಲ್ಕು ಪ್ರಕರಣಗಳು ತರೀಕೆರೆ ತಾಲೂಕಿನ ಅಜ್ಜಂಪುರ ಸಮೀಪದ ನಾರಾಯಣಪುರ ಗ್ರಾಮಕ್ಕೆ ಸೇರಿರುವ ವ್ಯಕ್ತಿಗಳಲ್ಲಿ ಕಂಡು ಬಂದಿದೆ. ಈ ನಾಲ್ಕು ಪ್ರಕರಣಗಳು ಒಂದೇ ಕುಟುಂಬಕ್ಕೆ ಸೇರಿದ್ದು, ಈ ಪೈಕಿ 5 ತಿಂಗಳ ಮಗುವೂ ಸೇರಿದೆ ಎಂದು ತಿಳಿದು ಬಂದಿದೆ.
ಅಜ್ಜಂಪುರದ ಈ ನಾಲ್ಕು ಪ್ರಕರಣಗಳು ಪೊಲೀಸ್ ಪೇದೆಯ ಕುಟುಂಬಸ್ಥರದ್ದಾಗಿದ್ದು, ಬೆಂಗಳೂರಿನಲ್ಲಿ ಕರ್ತವ್ಯದಲ್ಲಿರುವ ಪೊಲೀಸ್ ಪೇದೆ ಇತ್ತೀಚೆಗೆ ತರೀಕೆರೆ ತಾಲೂಕಿನ ತನ್ನ ಪತ್ನಿ ಮನೆಗೆ ಬಂದು ಹೋಗಿದ್ದರು. ಈ ಪೇದೆಗೆ ಸೋಂಕು ಇರುವುದು ರವಿವಾರ ಬೆಂಗಳೂರಿನಲ್ಲಿ ಪತ್ತೆಯಾಗಿದ್ದು, ಇವರ ಪ್ರಾಥಮಿಕ ಸಂಪರ್ಕಗಳಾಗಿದ್ದ 5 ತಿಂಗಳ ಮಗು ಸೇರಿದಂತೆ ಪತ್ನಿ, ಅತ್ತೆ, ಮಾವನ ರಕ್ತ, ಗಂಟಲ ದ್ರವದ ಮಾದರಿಯನ್ನು ರವಿವಾರ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಸೋಮವಾರ ಪ್ರಯೋಗಾಲಯದ ವರದಿ ಜಿಲ್ಲಾಡಳಿತ ಕೈಸೇರಿದ್ದು, ನಾಲ್ವರಲ್ಲೂ ಕೊರೋನ ಪಾಸಿಟಿವ್ ಇರುವುದು ಬೆಳಕಿಗೆ ಬಂದಿದೆ. ನಾರಾಯಣಪುರದಲ್ಲಿ ಸೋಮವಾರ ನಾಲ್ಕು ಮಂದಿಗೆ ಸೋಂಕು ಪತ್ತೆಯಾಗಿರುವುದರಿಂದ ಇಡೀ ಗ್ರಾಮದಲ್ಲಿ ಆತಂಕ ಮನೆ ಮಾಡಿದ್ದು, ಅಜ್ಜಂಪುರದಲ್ಲೂ ಭೀತಿ ಆವರಿಸಿದೆ.
ಇನ್ನು ಸೋಮವಾರ ಪತ್ತೆಯಾದ ಮತ್ತೊಂದು ಪ್ರಕರಣ ಶೃಂಗೇರಿ ತಾಲೂಕಿನದ್ದಾಗಿದ್ದು, ಇವರು ಇತ್ತೀಚೆಗೆ ಮಹಾರಾಷ್ಟ್ರದಿಂದ ಹಿಂದಿರುಗಿದವರರಾಗಿದ್ದಾರೆ. ಸೋಮವಾರ ಪತ್ತೆಯಾಗಿರುವ ಶೃಂಗೇರಿಯ ಓರ್ವರು ಹಾಗೂ ತರೀಕೆರೆಯ ನಾಲ್ವರನ್ನೂ ನಗರದ ಕೊರೋನ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಆರಂಭಿಸಲಾಗಿದೆ. ರವಿವಾರ ಹಾಗೂ ಸೋಮವಾರ ಜಿಲ್ಲೆಯಲ್ಲಿ ಪತ್ತೆಯಾಗಿರುವ ಸೋಂಕಿತರ ಪ್ರಕರಣದಿಂದಾಗಿ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 22ಕ್ಕೇರಿದೆ.
ರವಿವಾರ ಪತ್ತೆಯಾಗಿರುವ ಪಾಸಿಟಿವ್ ಪ್ರಕರಣ ಚಿಕ್ಕಮಗಳೂರು ತಾಲೂಕಿನ ಅಂಬಳೆ ಹೋಬಳಿಯ ಬೋದನಿಕೆ ಗ್ರಾಮದ ವ್ಯಕ್ತಿಯದ್ದಾಗಿದೆ. ಈ ವ್ಯಕ್ತಿ ಹಾಸನ ತಾಲೂಕು ವ್ಯಾಪ್ತಿಯಲ್ಲಿರುವ ಚಿಕ್ಕಮಗಳೂರು ತಾಲೂಕಿನ ಗಡಿ ಭಾಗದ ಗ್ರಾಮದ ಹನಿಕೆ ಗ್ರಾಮದಲ್ಲಿನ ಸಂತೆಗೆ ಪ್ರತೀ ವಾರ ಹೋಗುತ್ತಿದ್ದರೆಂದು ತಿಳಿದು ಬಂದಿದೆ. ಹನಿಕೆ ಗ್ರಾಮದ ಸಂತೆಯಿಂದಲೇ ವ್ಯಕ್ತಿಗೆ ಸೋಂಕು ಹರಡಿರಬಹುದು ಎಂದು ಊಹಿಸಲಾಗಿದೆ. ಟ್ರಾವೆಲ್ ಹಿಸ್ಟರಿಯೇ ಇಲ್ಲದ ಬೋದನಿಕೆ ಗ್ರಾಮದ ವ್ಯಕ್ತಿಯಲ್ಲಿ ಸೋಂಕು ಬಂದಿರುವುದರಿಂದ ಕೊರೋನ ಸೋಂಕು ಸಮುದಾಯಕ್ಕೂ ಹರಡಿದೆಯೇ ಎಂಬ ಅನುಮಾನ ಜಿಲ್ಲಾಡಳಿತ ಸೇರಿದಂತೆ ಸಾರ್ವಜನಿಕರನ್ನು ಕಾಡಲಾರಂಭಿಸಿದೆ. ಸೋಂಕಿತನನ್ನು ರವಿವಾರ ನಗರದ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸೋಂಕಿತನ ಕುಟುಂಬ ಸದಸ್ಯರನ್ನು ಸಾಂಸ್ಥಿಕ ಕ್ವಾರಂಟೈನ್‍ಗೆ ಒಳಪಡಿಸಲಾಗಿದೆ.







