ಪೊಲೀಸ್ ಸಿಬ್ಬಂದಿಗೆ ಪ್ರತ್ಯೇಕ ಕೊರೋನ ತಪಾಸಣೆ ಕೇಂದ್ರ: ಬಸವರಾಜ ಬೊಮ್ಮಾಯಿ

ಬೆಂಗಳೂರು, ಜೂ.22: ಕೋವಿಡ್-19 ಸಂಬಂಧ ರಾಜ್ಯ ಪೊಲೀಸ್ ಇಲಾಖೆಯ ಸಿಬ್ಬಂದಿಗೆ ಪ್ರತ್ಯೇಕ ತಪಾಸಣಾ ಮತ್ತು ಚಿಕಿತ್ಸಾ ಕೇಂದ್ರ ವ್ಯವಸ್ಥೆ ಕಲ್ಪಿಸುವಂತೆ ಆರೋಗ್ಯ ಇಲಾಖೆಯ ಜೊತೆಗೆ ಚರ್ಚೆ ನಡೆಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ನುಡಿದರು.
ಸೋಮವಾರ ನಗರದ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ತುರ್ತು ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸ್ ಅಧಿಕಾರಿಗಳು ಮತ್ತು ಕೊರೋನ ಸೈನಿಕರಿಗೆ ತಪಾಸಣೆ ಮಾಡಬೇಕು. ಆದ್ಯತೆ ಮೇರೆಗೆ ಇದು ಆಗಬೇಕು. ಈ ಬಗ್ಗೆ ಆರೋಗ್ಯಾಧಿಕಾರಿಗಳ ಜೊತೆ ಸಭೆ ನಡೆಸಲಾಗುತ್ತದೆ ಎಂದರು.
ದಿನೇ ದಿನೇ ಕೊರೋನ ಸೋಂಕಿತ ಪ್ರಮಾಣ ಹೆಚ್ಚಳ ಹಾಗೂ ಕೊರೋನ ಸೈನಿಕರಿಗೂ ಸೋಂಕು ತಗುಲಿತ್ತಿರುವ ಕುರಿತು ಗಂಭೀರ ಚರ್ಚೆ ನಡೆಸಲಾಗಿದೆ ಎಂದ ಅವರು, ಕ್ವಾರಂಟೈನ್ ಕೇಂದ್ರ, ಚೆಕ್ ಪೋಸ್ಟ್, ಕೋವಿಡ್ ಸೆಂಟರ್, ಪರೀಕ್ಷಾ ಕೇಂದ್ರ, ಸೀಲ್ ಡೌನ್ ಪ್ರದೇಶ ಸೇರಿ ಎಲ್ಲಾ ಕಡೆ ಪೊಲೀಸರು ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಆದರೆ, ಇತ್ತೀಚೆಗೆ ಪೊಲೀಸ್ ಸಿಬ್ಬಂದಿಗೂ ಹೆಚ್ಚಾಗಿ ಸೋಂಕು ತಗುಲುತ್ತಿದೆ. ಬೆಂಗಳೂರಿನಲ್ಲಿ 59 ಪೊಲೀಸ್ ಸಿಬ್ಬಂದಿಗೆ ಕೊರೋನ ದೃಢಪಟ್ಟಿದ್ದು, ಇದುವರೆಗೂ 6 ಪೊಲೀಸ್ ಠಾಣೆಗಳನ್ನು ಸೀಲ್‍ಡೌನ್ ಮಾಡಲಾಗಿದೆ ಎಂದು ತಿಳಿಸಿದರು.
ಆಸ್ಪತ್ರೆ ಸಾಮರ್ಥ್ಯ ಹೆಚ್ಚಿಸುವ ಕುರಿತು ಇಂದಿನ ಸಭೆಯಲ್ಲಿ ಚರ್ಚೆಯಾಗಿದೆ. ಸದ್ಯ ಬೆಂಗಳೂರಿನಲ್ಲಿ ಕೋವಿಡ್-19 ಚಿಕಿತ್ಸೆಗೆ 13 ಆಸ್ಪತ್ರೆಗಳು ಇವೆ. ಇದರ ಜೊತೆಗೆ 3 ಸರಕಾರಿ ಮತ್ತು 10 ಖಾಸಗಿ ಮೆಡಿಕಲ್ ಕಾಲೇಜುಗಳು ಇದ್ದು, ಇವರ ಸಹಕಾರ ಪಡೆದುಕೊಳ್ಳಲು ನಿರ್ಧರಿಸಲಾಗಿದೆ. ಅವುಗಳನ್ನೂ ಕೋವಿಡ್ ಆಸ್ಪತ್ರೆಗಳನ್ನಾಗಿ ಮಾಡಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.







