ಆರ್ಡರ್ ಮಾಡಿದ 1,300 ವೆಂಟಿಲೇಟರ್ ಗಳಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಬಂದಿದ್ದು ಕೇವಲ 90 !

ಸಾಂದರ್ಭಿಕ ಚಿತ್ರ
ಬೆಂಗಳೂರು, ಜೂ.22: ಕೊರೋನ ಮಹಾಮಾರಿ ವಿರುದ್ಧ ಪರಿಣಾಮಕಾರಿ ರೀತಿಯಲ್ಲಿ ಹೋರಾಡಲು ರಾಜ್ಯ ಸರಕಾರ 1,300 ವೆಂಟಿಲೇಟರ್ ಗಳಿಗೆ ಆರ್ಡರ್ ಮಾಡಿದ್ದರೆ, ಬಂದಿದ್ದು ಕೇವಲ 90 ವೆಂಟಿಲೇಟರ್ ಗಳು ಎಂದು ತಿಳಿದುಬಂದಿದೆ.
ಕೊರೋನ ಸೋಂಕು ಕಾಣಿಸಿಕೊಳ್ಳತೊಡಗಿದಾಗ ಕೇಂದ್ರ ಸರಕಾರ ಮುನ್ನಡೆಸುತ್ತಿರುವ ಹಿಂದೂಸ್ತಾನ್ ಲ್ಯಾಟೆಕ್ಸ್ ಲಿಮಿಟೆಡ್ ಎಲ್ಲ ರಾಜ್ಯಗಳಿಗೂ ನೀಡಿದಂತೆ ಕರ್ನಾಟಕಕ್ಕೂ ಕೇವಲ 90 ವೆಂಟಿಲೇಟರ್ ಗಳನ್ನು ರವಾನಿಸಿದೆ. ಆದರೆ ಇತರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಇದು ತೀರಾ ಕಡಿಮೆ.
ರಾಜ್ಯ ಸರಕಾರ 1,300 ವೆಂಟಿಲೇಟರ್ ಗಳನ್ನು ಕೇಂದ್ರ ಸರಕಾರ ನಡೆಸುತ್ತಿರುವ ಹಿಂದೂಸ್ತಾನ್ ಲ್ಯಾಟೆಕ್ಸ್ ಲಿಮಿಟೆಡ್ ನಿಂದ, ಮೈಸೂರು ಮೂಲದ ಕಂಪನಿಯಾಗಿರುವ ಸ್ಕ್ಯಾನ್'ರೇ ಟೆಕ್ನಾಲಜೀಸ್ ನಿಂದ 130 ಹಾಗೂ ಸ್ಥಳೀಯ ಉತ್ಪಾದಕರಿಂದ 70 ವೆಂಟಿಲೇಟರ್ ಗಳನ್ನು ಖರೀದಿಸಲು ನಿರ್ಧರಿಸಿತ್ತು. ಇದರಂತೆ ಮೂರು ತಿಂಗಳ ಹಿಂದೆಯೇ ಹಿಂದೂಸ್ತಾನ ಲ್ಯಾಟೆಕ್ಸ್ ಲಿಮಿಟೆಡ್'ಗೆ 1,300 ವೆಂಟಿಲೇಟರ್ ಗಳನ್ನೂ ಪೂರೈಸುವಂತೆ ಮನವಿ ಕೂಡ ಮಾಡಿಕೊಂಡಿತ್ತು. ಆದರೆ, ಈವರೆಗೂ ರಾಜ್ಯಕ್ಕೆ 63 ವೆಂಟಿಲೇಟರ್ ಗಳು ಮಾತ್ರ ರವಾನಿಸಲಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಕರ್ನಾಟಕ ರಾಜ್ಯ ಡ್ರಗ್ ಲಾಜಿಸ್ಟಿಕ್ಸ್ ಮತ್ತು ವೇರ್ ಹೌಸಿಂಗ್ ಸೊಸೈಟಿಯ ಹೆಚ್ಚುವರಿ ನಿರ್ದೇಶಕಿ ಮಂಜುಶ್ರೀ, ಕೇಂದ್ರ ಸರಕಾರದ ಬಳಿ ಆರ್ಡರ್ ಮಾಡಿದ್ದ 1,300 ವೆಂಟಿಲೇಟರ್ ಗಳಲ್ಲಿ ಈವರೆಗೂ ರಾಜ್ಯಕ್ಕೆ ಯಾವೊಂದೂ ವೆಂಟಿಲೇಟರ್ ಗಳೂ ಬಂದಿಲ್ಲ. ಸ್ಕ್ಯಾನ್'ರೇ ಬಳಿ ಆರ್ಡರ್ ಮಾಡಲಾಗಿದ್ದ 130 ವೆಂಟಿಲೇಟರ್ ಗಳ ಪೈಕಿ 35, ಸ್ಥಳೀಯ ಕಂಪನಿಗಳಲ್ಲಿ ಆರ್ಡರ್ ಮಾಡಲಾಗಿದ್ದ 90 ಪೈಕಿ 28 ವೆಂಟಿಲೇಟರ್ ಗಳು ಬಂದಿವೆ ಎಂದು ಹೇಳಿದ್ದಾರೆ.
ಮೇ ತಿಂಗಳಿನಲ್ಲಿ ಬಿಲ್ವೆಲ್ ಪಾಸಿಟಿವ್ ಏರ್ ವೇ ಪ್ರೆಶರ್ (ಬಿಐಪಿಎಪಿ) 200 ಯಂತ್ರಗಳನ್ನು ಫ್ರೆಂಚ್ ಕಂಪನಿಯಾದ ಸೆಫಾಮ್ ನಿಂದ ಆರ್ಡರ್ ಮಾಡಲಾಗಿತ್ತು. ಇದರಲ್ಲಿ ಈವರೆಗೂ 94 ಯಂತ್ರಗಳು ಪೂರೈಕೆಯಾಗಿವೆ. ಈ ಯಂತ್ರ ಕೂಡ ವೆಂಟಿಲೇಟರ್ ರೀತಿಯಲ್ಲಿಯೇ ಕೆಲಸ ಮಾಡಲಿದೆ. ಆದರೆ ವೆಂಟಿಲೇಟರ್ ರೀತಿ ಪರಿಣಾಮಕಾರಿಯಾಗಿ ಕೆಲಸ ಮಾಡುವುದಿಲ್ಲ. ಟ್ಯೂಬ್ ಗಳೂ ಕೂಡ ಇದರಲ್ಲಿ ಇರುವುದಿಲ್ಲ. ಯಂತ್ರದ ಸಾಧನವನ್ನು ವ್ಯಕ್ತಿಯ ಮೂಗು ಮತ್ತು ಬಾಯಿಯ ಮೇಲೆ ಇರಿಸಿ ಆಮ್ಲಜನಕವನ್ನು ಪಂಪ್ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಈ ಹಿಂದೆ ಕಳಪೆ ಮಟ್ಟದ ವೆಂಟಿಲೇಟರ್ ಗಳನ್ನು ಪೂರೈಕೆ ಮಾಡಲಾಗಿತ್ತು. ಹೀಗಾಗಿ 27 ವೆಂಟಿಲೇಟರ್ ಗಳನ್ನು ವಾಪಸ್ ಕಳುಹಿಸುವ ನಿರ್ಧಾರವನ್ನು ರಾಜ್ಯ ಸರಕಾರ ಕೈಗೊಂಡಿತ್ತು.
ಈ ಕುರಿತು ಪ್ರತಿಕ್ರಿಯೆ ನೀಡಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು, ಆರೋಗ್ಯ ಇಲಾಖೆ ಆರ್ಡರ್ ಮಾಡಿರುವ ಕುರಿತು ನನಗೆ ತಿಳಿದಿಲ್ಲ. ಆದರೆ, ವೈದ್ಯಕೀಯ ಶಿಕ್ಷಣ ಇಲಾಖೆ ಆರ್ಡರ್ ಮಾಡಿದ್ದ ಶೇ. 80ರಷ್ಟು ವೆಂಟಿಲೇಟರ್ ಗಳು ಎಲ್ಲಾ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗಳಿಗೆ ತಲುಪಿವೆ. ಇಡೀ ವಿಶ್ವದಾದ್ಯಂತ ವೆಂಟಿಲೇಟರ್ ಗಳಿಗೆ ಬೇಡಿಕೆಗಳು ಹೆಚ್ಚಾಗಿದ್ದು, ಹೀಗಾಗಿ ಸಮಸ್ಯೆಗಳು ಎದುರಾಗಬಹುದು. ಈಗಾಗಲೇ ಎಲ್ಲಾ ಆಸ್ಪತ್ರೆಗಳನ್ನು ಅಪ್ ಗ್ರೇಡ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ







