ಸ್ಯಾನಿಟರಿ ನ್ಯಾಪ್‍ಕಿನ್‍ಗಳು ಉಗ್ರಾಣದ ಪಾಲು: ನೋಡಲ್ ಅಧಿಕಾರಿಗೆ ಜಿಪಂ ಸಿಇಒ ನೋಟಿಸ್
ಬಾಗಲಕೋಟೆ, ಜೂ.22: ಸರಕಾರಿ ಹಾಗೂ ವಸತಿ ಶಾಲೆಗಳಲ್ಲಿ ಕಲಿಯುತ್ತಿರುವ ಹೆಣ್ಣು ಮಕ್ಕಳಿಗೆ ವಿತರಿಸಲು ಸರಕಾರ ಸರಬರಾಜು ಮಾಡಿದ್ದ ಸ್ಯಾನಿಟರಿ ನ್ಯಾಪ್‍ಕಿನ್‍ಗಳನ್ನು ವಿತರಿಸದೇ ಎರಡ್ಮೂರು ವರ್ಷಗಳಿಂದ ಉಗ್ರಾಣದಲ್ಲಿಯೇ ಅಕ್ರಮವಾಗಿ ಸಂಗ್ರಹಿಸಿಟ್ಟಿರುವುದು ಬಾಗಲಕೋಟೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದ್ದು, ಈ ಹಿನ್ನೆಲೆಯಲ್ಲಿ ಶುಚಿ ಕಾರ್ಯಕ್ರಮದ ನೋಡಲ್ ಅಧಿಕಾರಿ ಡಾ.ಬಿ.ಜಿ.ಹುಬ್ಬಳ್ಳಿ ಅವರಿಗೆ ಜಿಪಂ ಸಿಇಒ ನೋಟಿಸ್ ಜಾರಿ ಮಾಡಿದ್ದಾರೆ.
ಋತುಸ್ರಾವದ ಸಮಯದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಶುಚಿ ಯೋಜನೆಯಡಿ ಸ್ಯಾನಿಟರಿ ನ್ಯಾಪ್‍ಕಿನ್ ಪೂರೈಸಲಾಗುತ್ತದೆ. ಸರಕಾರಿ ಹಾಗೂ ವಸತಿ ಶಾಲೆಗಳಲ್ಲಿ ಕಲಿಯುತ್ತಿರುವ ಹೆಣ್ಣು ಮಕ್ಕಳಿಗೆ ಕೊಡಲಾಗುತ್ತದೆ ಎಂದು ಬಾಗಲಕೋಟೆ ಜಿಎಂ ಸಿಇಒ ಗಂಗೂಬಾಯಿ ಮಾನಕರ ತಿಳಿಸಿದ್ದಾರೆ.
ಸ್ಯಾನಿಟರಿ ನ್ಯಾಪ್‍ಕಿನ್ ವಿತರಣೆಯ ಉಸ್ತುವಾರಿ ಸಿಇಒ ನೇತೃತ್ವದಲ್ಲಿಯೇ ಜಿಲ್ಲಾ ಮಟ್ಟದ ಸಮಿತಿ ಇದೆ. ನ್ಯಾಪ್‍ಕಿನ್‍ಗಳು ಪೂರೈಕೆಯಾಗದ ವಿಚಾರ ಸಮಿತಿಯ ಗಮನಕ್ಕೂ ತಂದಿಲ್ಲ ಎಂದು ಸಿಇಒ ತಿಳಿಸಿದರು. ಗ್ರಾಮೀಣ ಹೆಣ್ಣು ಮಕ್ಕಳಿಗೆ ಪೂರೈಸಲಾದ ಸ್ಯಾನಿಟರಿ ನ್ಯಾಪ್‍ಕಿನ್‍ಗಳನ್ನು ಉಗ್ರಾಣದಲ್ಲಿ ನೆಲದ ಮೇಲೆ ಬೇಕಾಬಿಟ್ಟಿ ಎಸೆದಿರುವುದು ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಹಾಗೂ ಸಂಗ್ರಹಿಸಿಟ್ಟಿರುವುದು ನಮ್ಮ ಗಮನಕ್ಕೆ ಬಂದಿದ್ದು, ಅದನ್ನು ಪರಿಶೀಲಿಸಲಿದ್ದೇವೆ ಎಂದು ತಿಳಿಸಿದರು.







