ಮೈಸೂರು: ಪೇದೆಗೆ ಕೊರೋನ ಸೋಂಕು; ಪೊಲೀಸ್ ಅಧಿಕಾರಿಗಳಿಗೆ ಹೋಂ ಕ್ವಾರಂಟೈನ್

ಮೈಸೂರು,ಜೂ.22: ಮೈಸೂರು ಜಿಲ್ಲೆ ನಂಜನಗೂಡು ಗ್ರಾಮಾಂತರ ಠಾಣೆಯ ಕಾನ್ಸಟೇಬಲ್‍ಗೆ ಕೊರೋನ ಪಾಸಿಟಿವ್ ಕಂಡು ಬಂದಿದ್ದು ಈ ಹಿನ್ನೆಲೆ ಮೈಸೂರಿನ ಪೊಲೀಸ್ ಅಧಿಕಾರಿಗಳನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ.
ಕೊರೋನ ಸೋಂಕಿತ ಪೊಲೀಸ್ ಸಿಬ್ಬಂದಿ ಟಿ ನರಸೀಪುರ ಪೊಲೀಸ್ ಠಾಣೆಯ ಬುಲೆಟ್ ನಾಪತ್ತೆ ಪ್ರಕರಣದ ತನಿಖೆಯ ವಿಶೇಷ ತನಿಖಾ ತಂಡದಲ್ಲಿದ್ದರು. ಅಡಿಷನಲ್ ಎಸ್ ಪಿ ಸ್ನೇಹ ಸೇರಿ 22 ಮಂದಿ, ಕೊರೋನ ಸೋಂಕಿತ ಪೊಲೀಸ್ ಸಿಬ್ಬಂದಿಯ ಪ್ರಾಥಮಿಕ ಸಂಪರ್ಕದಲ್ಲಿದ್ದರು.
ಎಸ್ಪಿ ರಿಷ್ಯಂತ್ ಸೇರಿ 36 ಜನರು ಸೆಕೆಂಡರಿ ಸಂಪರ್ಕದಲ್ಲಿದ್ದರು. ಸೋಂಕಿತ ಸಿಬ್ಬಂದಿ ಎಸ್‍ಪಿ ಕಚೇರಿಯಲ್ಲಿ ಕೆಲಸ ಮಾಡಿದ್ದರು ಎನ್ನಲಾಗಿದ್ದು, ಎಸ್‍ಪಿ ಹಾಗೂ ಐಜಿಪಿ ಕಚೇರಿ ಒಂದೇ ಕಟ್ಟಡದಲ್ಲಿ ಇರುವ ಕಾರಣ ಐಜಿಪಿ(ದಕ್ಷಿಣ ವಲಯ) ವಿಪುಲ್ ಕುಮಾರ್, ಎಸ್‍ಪಿ ರಿಷ್ಯಂತ್ ಹಾಗೂ ಎಎಸ್‍ಪಿ ಸ್ನೇಹ ಹೋಂ ಕ್ವಾರಂಟೈನ್ ನಲ್ಲಿದ್ದಾರೆ. ಇನ್ನು ಮೈಸೂರು ಮಹಾನಗರ ಪಾಲಿಕೆ ಸಿಬ್ಬಂದಿ ಇಡೀ ಕಟ್ಟಡ ಸ್ಯಾನಿಟೈಸ್ ಮಾಡಿದ್ದಾರೆ.
ಎಸ್ಪಿ ಕಚೇರಿಯ 18 ಸಿಬ್ಬಂದಿಗೆ ರಜೆ ನೀಡಲಾಗಿದ್ದು ಸದ್ಯ ಅಧಿಕಾರಿಗಳು ಮನೆಯಿಂದಲೇ ಕಾನೂನು ಸುವ್ಯವಸ್ಥೆ ಪಾಲಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಎಲ್ಲೆಂದರಲ್ಲಿ ಕೊರೋನ ಪ್ರಕರಣ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆ ಭಯದ ವಾತಾವರಣ ಸೃಷ್ಠಿಯಾಗಿದೆ.





