ಮೈಸೂರು: ಅಯೋಧ್ಯೆಯಲ್ಲಿ ಸಾಕೇತ್ ಬುದ್ಧ ವಿಹಾರ ನಿರ್ಮಾಣ ಮಾಡುವಂತೆ ಒತ್ತಾಯಿಸಿ ಧರಣಿ

ಮೈಸೂರು,ಜೂ.22: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯವನ್ನು ನಿಲ್ಲಿಸುವಂತೆ ಒತ್ತಾಯಿಸಿ ಮಾಜಿ ಮೇಯರ್ ಪುರುಷೋತ್ತಮ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಬಲ್ಲಾಳ್ ವೃತ್ತದಲ್ಲಿರುವ ಬುದ್ಧ ವಿಹಾರದ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಿ ಪ್ರತಿಭಟನಾಕಾರರು, ಅಯೋಧ್ಯೆಯಲ್ಲಿ ಸಾಕೇತ್ ಬುದ್ಧ ವಿಹಾರ ನಿರ್ಮಾಣ ಮಾಡುವಂತೆ ಒತ್ತಾಯಿಸಿದರು.
ಇದೇ ವೇಳೆ ಮಾತನಾಡಿದ ದಲಿತ ಮುಖಂಡ ಮಾಜಿ ಮೇಯರ್ ಪುರುಷೋತ್ತಮ್, ಅಯೋಧ್ಯೆಯಲ್ಲಿ ರಾಮ ಮಂದಿರ ಮತ್ತು ಬಾಬ್ರಿ ಮಸೀದಿ ಇತ್ತು ಎಂಬುದು ಸುಳ್ಳಾಗಿದೆ. ಅಲ್ಲಿ ಬುದ್ಧ ವಿಹಾರ ಇತ್ತು ಎಂಬುದಕ್ಕೆ ಅಲ್ಲಿ ಸಿಕ್ಕಿರುವ ಬುದ್ಧನ ಅವಶೇಷಗಳೇ ಕಾರಣ, ರಾಮಮಂದಿರ ಇತ್ತು ಎಂದು ವಿವಾದ ಹುಟ್ಟುಹಾಕಿ ಇಡೀ ದೇಶವನ್ನೇ ಅಶಾಂತಿಗೆ ದೂಡಲಾಗಿತ್ತು ಎಂದು ಆರೋಪಿಸಿದರು.
ಸುಪ್ರೀಂ ಕೋರ್ಟ್ ರಾಮಜನ್ಮ ಭೂಮಿ ಮತ್ತು ಬಾಬ್ರಿ ಮಸೀದಿ ವಿವಾದದ ತೀರ್ಪನ್ನು ಹಲವು ವರ್ಷಗಳ ಕಾಲ ನಡೆಸಿ ನಂತರ ರಾಮಜನ್ಮ ಭೂಮಿ ಕಟ್ಟಲು ಆದೇಶ ನೀಡಿದೆ. ರಾಮಮಂದಿರ ಕಟ್ಟಲು ಅಲ್ಲಿನ ಭೂಮಿಯನ್ನು ಅಗೆಯುತ್ತಿರ ಬೇಕಾದರೆ ಬುದ್ಧನ ಕುರುಹುಗಳು ಸಿಕ್ಕಿವೆ. ಅಲ್ಲಿ ಸಾಕೇತ್ ಬುದ್ಧ ಮಂದಿರ ಇತ್ತು ಎಂಬುದಕ್ಕೆ ಇವುಗಳೇ ಸಾಕ್ಷಿಯಾಗಿವೆ. ಹಾಗಾಗಿ ಅಯೋದ್ಯೆಯಲ್ಲಿ ರಾಮಮಂದಿರ ಮತ್ತು ಬಾಬ್ರಿ ಮಸೀದಿ ಕಟ್ಟುವ ಬದಲು ಬುದ್ಧ ವಿಹಾರ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರು. ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಹಿಂಪಡೆಯಬೇಕು, ಕೇಂದ್ರ ಸರ್ಕಾರ ಬುದ್ಧನ ವಿಹಾರ ಕಟ್ಟಲು ಅದೇಶಿಸಬೇಕು ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಎವಿಎಸ್‍ಎಸ್ ತುಂಬಲ ರಾಮಣ್ಣ, ರಾಜು, ಮಹಾತ್ಮ ಸ್ವಾಮಿ, ವಕೀಲರ ಸಂಘದ ಅಧ್ಯಕ್ಷ ವಿಷ್ಣು, ಮಾಜಿ ಜಿ.ಪಂ.ಸದಸ್ಯ ಸುಬ್ಬಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ನಮಗೆ ಬುದ್ಧ ಬೇಕೆ ಹೊರತು ರಾಮನಲ್ಲ, ಇಡೀ ವಿಶ್ವವೇ ಬುದ್ದನ ಮಾರ್ಗವನ್ನು ಅನುಸರಿಸುತ್ತಿದೆ ಹೊರತು ರಾಮನಲ್ಲ, ಹಾಗಾಗಿ ಅಯೋಧ್ಯೆಯಲ್ಲಿ ಸಾಕೇತ್ ಬುದ್ಧ ವಿಹಾರ ನಿರ್ಮಾಣ ಮಾಡಬೇಕು.
-ಪುರುಷೋತ್ತಮ್, ದಲಿತ ಮುಖಂಡ







