ದೇಶದಲ್ಲಿ ಕೊರೋನ ವೈರಸ್ ಗೆ 14 ಸಾವಿರ ಬಲಿ

ಹೊಸದಿಲ್ಲಿ : ಕೊರೋನ ಸೋಂಕಿನಿಂದ ದೇಶದಲ್ಲಿ ಮೃತಪಟ್ಟವರ ಸಂಖ್ಯೆ ಸೋಮವಾರ 14 ಸಾವಿರ ದಾಟಿದೆ. ಆದರೆ ಮೂರು ದಿನಗಳಲ್ಲಿ ಮೊದಲ ಬಾರಿಗೆ ಸೋಂಕು ಪ್ರಕರಣಗಳ ಸಂಖ್ಯೆ 15 ಸಾವಿರಕ್ಕಿಂತ ಕಡಿಮೆ ದಾಖಲಾಗಿದೆ.
ಸೋಮವಾರ 314 ಮಂದಿ ಸೋಂಕಿನಿಂದ ಮೃತಪಟ್ಟಿದ್ದು, ಒಟ್ಟು ಮೃತರ ಸಂಖ್ಯೆ 14,006ಕ್ಕೇರಿದೆ. 13 ಸಾವಿರದ ಗಡಿ ದಾಟಿದ ಎರಡನೇ ದಿನಗಳಲ್ಲಿ ಈ ಮೈಲುಗಲ್ಲು ದಾಟಿದೆ. ಒಟ್ಟು ಸೋಂಕಿತರ ಸಂಖ್ಯೆ 4.4ಲಕ್ಷಕ್ಕೇರಿದ್ದು, ಗುಣಮುಖರಾದವರ ಸಂಖ್ಯೆ 2.47 ಲಕ್ಷ ತಲುಪಿದೆ.
ಸೋಮವಾರ 14,778 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ರವಿವಾರ ದಾಖಲಾದ 15,372ಕ್ಕೆ ಹೋಲಿಸಿದರೆ ಇದು ಕಡಿಮೆ. ಕಳೆದ ಆರು ದಿನಗಳಲ್ಲಿ ಮೊದಲ ಬಾರಿಗೆ ಪ್ರಕರಣಗಳ ಸಂಖ್ಯೆ ಹಿಂದಿನ ದಿನಕ್ಕೆ ಹೋಲಿಸಿದರೆ ಕಡಿಮೆಯಾಗಿದೆ.
ಆದಾಗ್ಯೂ ತಮಿಳುನಾಡಿನಲ್ಲಿ 2,710 ಪ್ರಕರಣಗಳು ವರದಿಯಾಗಿವೆ. ತೆಲಂಗಾಣ (872), ಕೇರಳ (138), ನಾಗಾಲ್ಯಾಂಡ್ (69) ಮತ್ತು ಮಣಿಪುರ (57) ರಾಜ್ಯಗಳಲ್ಲಿ ಗರಿಷ್ಠ ಪ್ರಕರಣಗಳು ದಾಖಲಾಗಿವೆ.
ಮಹಾರಾಷ್ಟ್ರಕ್ಕೆ ಸೋಮವಾರ ಕೂಡಾ ಯಾವುದೇ ನಿರಾಳತೆ ಸಿಕ್ಕಿಲ್ಲ. 3,721 ಹೊಸ ಪ್ರಕರಣಗಳೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 1,35,796ಕ್ಕೇರಿದೆ. ಕಳೆದ ಆರು ದಿನಗಳಿಂದ ಸತತವಾಗಿ ಮೂರು ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗುತ್ತಿವೆ. ಇಷ್ಟಾಗಿಯೂ ಸಾಪ್ತಾಹಿಕ ಪ್ರಗತಿ ದರ ಶೇಕಡ 3ಕ್ಕೆ ಇಳಿದಿದೆ ಎಂದು ಸರ್ಕಾರ ಹೇಳಿಕೊಂಡಿದೆ.
ಮಹಾರಾಷ್ಟ್ರದಲ್ಲಿ ಒಟ್ಟು ಮೃತರ ಸಂಖ್ಯೆ 6283ಕ್ಕೇರಿದೆ. ಆದರೆ ಸಾವಿನ ಸಂಖ್ಯೆಯ ವರದಿಗಾರಿಕೆಯಲ್ಲಿ ದೊಡ್ಡ ತಪ್ಪುಗಳಾಗಿವೆ ಎಂದು ತಜ್ಞರು ಹೇಳಿದ್ದಾರೆ. ಕಳೆದ ಕೆಲ ದಿನಗಳಿಂದ ಮೂರು ಸಾವಿರಕ್ಕೂ ಅಧಿಕ ಪ್ರಕರಣ ದಾಖಲಾಗುತ್ತಿದ್ದ ದೆಹಲಿಯಲ್ಲಿ ಸೋಮವಾರ 2,909 ಪ್ರಕರಣಗಳು ದೃಢಪಟ್ಟಿವೆ. ತಮಿಳುನಾಡಿನಲ್ಲಿ ಗರಿಷ್ಠ (2710) ಪ್ರಕರಣಗಳು ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 62,087ಕ್ಕೇರಿದೆ. 37 ಮಂದಿ ಸೋಮವಾರ ಮೃತಪಟ್ಟಿದ್ದು, ಒಟ್ಟು ಮೃತರ ಸಂಖ್ಯೆ 794ಕ್ಕೇರಿದೆ.







