ಬ್ರಹ್ಮಾವರ ಯೋಜನಾ ಪ್ರಾಧಿಕಾರ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯ
ಉಡುಪಿ, ಜೂ. 23: ಜಿಲ್ಲೆಯ ಬ್ರಹ್ಮಾವರ ನಗರಕ್ಕೆ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961 ಪ್ರಕರಣ 4-ಎ ರನ್ವಯ ಸ್ಥಳೀಯ ಯೋಜನಾ ಪ್ರದೇಶವನ್ನಾಗಿ ಹಾಗೂ ಕಲಂ 4-ಸಿ(1)ರನ್ವಯ ಮತ್ತು 4-ಸಿ(3) (1)(11)(111) ಹಾಗೂ (4)ರನ್ವಯ ಪ್ರತ್ಯೇಕ ಯೋಜನಾ ಪ್ರಾಧಿಕಾರವನ್ನು ರಚಿಸಿ ಸರಕಾರ ಆದೇಶ ಹೊರಡಿಸಿದೆ.
ಬ್ರಹ್ಮಾವರ ಸ್ಥಳೀಯ ಯೋಜನಾ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಚಾಂತಾರು ಗ್ರಾಪಂ ವ್ಯಾಪ್ತಿಯ ಹೇರೂರು ಹಾಗೂ ಚಾಂತಾರು ಗ್ರಾಮಗಳು, ವಾರಂಬಳ್ಳಿ ಗ್ರಾಪಂ ವ್ಯಾಪ್ತಿಯ ವಾರಂಬಳ್ಳಿ ಗ್ರಾಮ, ಹಂದಾಡಿ ಗ್ರಾಪಂ ವ್ಯಾಪ್ತಿಯ ಕುಮ್ರಗೋಡು, ಮಟಪಾಡಿ ಹಾಗೂ ಹಂದಾಡಿ ಗ್ರಾಮಗಳು, ಹಾರಾಡಿ ಗ್ರಾಪಂ ವ್ಯಾಪ್ತಿಯ ಹಾರಾಡಿ ಹಾಗೂ ಬೈಕಾಡಿ ಗ್ರಾಮಗಳು ಸೇರಿರುತ್ತವೆ.
ಬ್ರಹ್ಮಾವರ ಸ್ಥಳೀಯ ಯೋಜನಾ ಪ್ರಾಧಿಕಾರದ ವ್ಯಾಪ್ತಿಗೆ ಒಳಪಡುವ ಸ್ಥಳೀಯ ಯೋಜನಾ ಪ್ರದೇಶದಲ್ಲಿ ವ್ಯವಸ್ಥಿತ ಬೆಳವಣಿಗೆ ಹಾಗೂ ಯೋಜನಾ ಬದ್ಧವಾಗಿ ನಗರ ಬೆಳೆಯುವಂತೆ ಯೋಜನೆ ರೂಪಿಸಲು ಸಾಧ್ಯವಾಗುವ ದೃಷ್ಟಿಯಿಂದ ಹಾಗೂ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರನ್ವಯ ಕೇಂದ್ರ ಹಾಗೂ ರಾಜ್ಯ ಸರಕಾರಿ ಕಛೇರಿಗಳು ಮತ್ತು ಸ್ಥಳೀಯ ಸಂಸ್ಥೆಗಳು ಕೈಗೊಳ್ಳುವ ಯಾವುದೇ ಅಭಿವೃದ್ಧಿ ಕಾರ್ಯಗಳ ಬಗ್ಗೆ ಈ ಪ್ರಾಧಿಕಾರಕ್ಕೆ ಮಾಹಿತಿ ನೀಡಲು ಹಾಗೂ 8 ಗ್ರಾಮಗಳಿಗೆ ಸಂಬಂಧಪಟ್ಟಂತೆ ಕಂದಾಯ ಇಲಾಖೆಯು ಭೂಪರಿವರ್ತನೆ ಸಂಬಂಧಪಟ್ಟ ಎಲ್ಲಾ ಪ್ರಕರಣ ಗಳಿಗೂ ನಗರ ಯೋಜನಾ ವಿಷಯವಾಗಿ ಸೂಕ್ತ ತಾಂತ್ರಿಕ ಅಭಿಪ್ರಾಯ ಹಾಗೂ ಬ್ರಹ್ಮಾವರ ಸ್ಥಳೀಯ ಯೋಜನಾ ಪ್ರಾಧಿಕಾರದ ವ್ಯಾಪ್ತಿಗೆ ಬರುವಂತಹ ಅಭಿವೃಧ್ದಿಗಳಾದ ವಿನ್ಯಾಸ/ಲೇಔಟ್ ನಕ್ಷೆ ಅನುಮೋದನೆ ಮತ್ತು ಕಟ್ಟಡ ನಕ್ಷೆ ಪರವಾನಿಗೆಗಳಿಗೆ ನಗರ ಯೋಜನಾ ವಿಷಯವಾಗಿ ಸೂಕ್ತ ತಾಂತ್ರಿಕ ಅಭಿಪ್ರಾಯ/ಅನುಮೋದನೆಗಳನ್ನು ಕಚೇರಿಯಿಂದ ಪಡೆಯುವಂತೆ ಬ್ರಹ್ಮಾವರ ಯೋಜನಾ ಪ್ರಾಧಿಕಾರದ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







