ರಾಜ್ಯದಲ್ಲಿ ಮತ್ತೆ ಲಾಕ್‍ಡೌನ್ ?: ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ್ದು ಹೀಗೆ...

ಬೆಂಗಳೂರು, ಜೂ.23: ರಾಜ್ಯದಲ್ಲಿ ಇತ್ತೀಚೆಗೆ ಕೋವಿಡ್-19 ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಪರಿಸ್ಥಿತಿ ಹೀಗೆ ಮುಂದುವರಿದರೆ ಮತ್ತೊಮ್ಮೆ ಲಾಕ್‍ಡೌನ್ ಬಗ್ಗೆ ಚಿಂತಿಸಲಾಗುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಟ್ವೀಟ್ ಮಾಡಿದ್ದಾರೆ.
ಈ ಬಗ್ಗೆ ಟಾಸ್ಕ್ ಫೋರ್ಸ್ ಸಭೆ, ತಜ್ಞರು ಮತ್ತು ಮುಖ್ಯಮಂತ್ರಿ ಜೊತೆ ಸಮಾಲೋಚನೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ. ಕೊರೋನ ಸೋಂಕು ನಿಯಂತ್ರಿಸಲು ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದ್ದು, ಮಾಸ್ಕ್ ಅನ್ನು ಕಡ್ಡಾಯವಾಗಿ ಧರಿಸಬೇಕು, ಸ್ಯಾನಿಟೈಸರ್ ಬಳಕೆ ಹಾಗೂ ಸೂಕ್ತವಾದ ಸುರಕ್ಷಿತ ಅಂತರ ಕಾಪಾಡಿಕೊಳ್ಳುವ ಮೂಲಕ ನಿಯಂತ್ರಣ ಕಾರ್ಯಕ್ಕೆ ಕೈ ಜೋಡಿಸಬೇಕಿದೆ ಎಂದು ಅವರು ಮನವಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಆರೋಗ್ಯ ಇಲಾಖೆ ವತಿಯಿಂದ ಅನೇಕ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಬೆಂಗಳೂರು ಸುತ್ತಮುತ್ತಲ ಸ್ಥಳಗಳು ಮತ್ತು ಬಿಬಿಎಂಪಿ ವ್ಯಾಪ್ತಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುವ 16 ಆಸ್ಪತ್ರೆಗಳನ್ನು ಕೋವಿಡ್ ಹೆಲ್ತ್ ಸೆಂಟರ್ ಗಳಾಗಿ ನಿಗದಿ ಮಾಡಲಾಗಿದೆ ಎಂದು ಶ್ರೀರಾಮುಲು ತಿಳಿಸಿದ್ದಾರೆ.
ಈ ಆಸ್ಪತ್ರೆಗಳಲ್ಲಿ 1,330 ಹಾಸಿಗೆಗಳು ಲಭ್ಯವಿದ್ದು, ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಕಾಯ್ದಿರಿಸಲಾಗಿದೆ. 1,330 ಹಾಸಿಗೆಗಳ ಪೈಕಿ 527ಕ್ಕೆ ಆಕ್ಸಿಜನ್ ಸಂಪರ್ಕ ಇದ್ದು, 167 ಐಸಿಯು ಹಾಸಿಗೆಗಳಿವೆ. ಇತರ 92 ಹಾಸಿಗೆಗಳಿಗೆ ವೆಂಟಿಲೇಟರ್ ಗಳ ಸೌಲಭ್ಯವಿದೆ ಎಂದು ಅವರು ಹೇಳಿದ್ದಾರೆ.
ರಾಜ್ಯದಲ್ಲಿ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಸಮುದಾಯ ಭವನಗಳು, ಪ್ರದರ್ಶನ ಕೇಂದ್ರಗಳು, ಹೊಟೇಲ್ ಹಾಗೂ ಕ್ರೀಡಾಂಗಣಗಳನ್ನು ಕೋವಿಡ್ ಕೇರ್ ಸೆಂಟರ್ ಗಳಾಗಿ ಪರಿವರ್ತಿಸಲಾಗುತ್ತಿದೆ. ಈ ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಅಗತ್ಯ ವೈದ್ಯಕೀಯ ಸಿಬ್ಬಂದಿ ಇರಲಿದ್ದು, 24/7 ಕಾರ್ಯನಿರ್ವಹಿಸಲಿವೆ. 50 ವರ್ಷಕ್ಕಿಂತ ಕೆಳಗಿನ ವಯಸ್ಸಿನ ಸೋಂಕಿನ ಲಕ್ಷಣಗಳಿಲ್ಲದ ರೋಗಿಗಳಿಗೆ ಇಲ್ಲಿ ಚಿಕಿತ್ಸೆ ಸಿಗಲಿದೆ ಎಂದು ಶ್ರೀರಾಮುಲು ತಿಳಿಸಿದ್ದಾರೆ.







