ಚೀನಾದ ಇನ್ನೂ 4 ಸರಕಾರಿ ಮಾಧ್ಯಮಗಳು ವಿದೇಶಿ ಸಂಸ್ಥೆಗಳು: ಅಮೆರಿಕ ಘೋಷಣೆ

ವಾಶಿಂಗ್ಟನ್, ಜೂ. 23: ಚೀನಾದ ಇನ್ನೂ ನಾಲ್ಕು ಸರಕಾರಿ ಒಡೆತನದ ಮಾಧ್ಯಮ ಸಂಸ್ಥೆಗಳನ್ನು ಅಮೆರಿಕ ಸೋಮವಾರ ವಿದೇಶಿ ಸಂಸ್ಥೆಗಳು ಎಂಬುದಾಗಿ ಘೋಷಿಸಿದೆ ಹಾಗೂ ಅವುಗಳು ಚೀನಾದ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದಿಂದ ನಿಯಂತ್ರಿಸಲ್ಪಡುವ ಪ್ರಚಾರ ಸಂಸ್ಥೆಗಳು ಎಂದು ಬಣ್ಣಿಸಿದೆ.
ಅಮೆರಿಕವು ವಿದೇಶಿ ಸಂಸ್ಥೆಗಳು ಎಂಬುದಾಗಿ ಘೋಷಿಸಿದ ಚೀನಾದ ಮಾಧ್ಯಮ ಸಂಸ್ಥೆಗಳೆಂದರೆ ಚೀನಾ ಸೆಂಟ್ರಲ್ ಟೆಲಿವಿಶನ್, ಚೀನಾ ನ್ಯೂಸ್ ಸರ್ವಿಸ್, ಪೀಪಲ್ಸ್ ಡೇಲಿ ಮತ್ತು ಗ್ಲೋಬಲ್ ಟೈಮ್ಸ್. ಇದರೊಂದಿಗೆ ಅಮೆರಿಕವು ವಿದೇಶಿ ಸಂಸ್ಥೆಗಳು ಎಂಬುದಾಗಿ ಘೋಷಿಸಿದ ಚೀನಾದ ಮಾಧ್ಯಮಗಳ ಸಂಖ್ಯೆ 9ಕ್ಕೇರಿದೆ.
ಈ ಬೆಳವಣಿಗೆಯು ಅಮೆರಿಕ ಮತ್ತು ಚೀನಾಗಳ ನಡುವೆ ಈಗಾಗಲೇ ನೆಲೆಸಿರುವ ಉದ್ವಿಗ್ನತೆಯನ್ನು ಮತ್ತಷ್ಟು ವೃದ್ಧಿಸಬಹುದಾಗಿದೆ. ಜಗತ್ತಿನಾದ್ಯಂತ ಕೊರೋನ ವೈರಸ್ ಸಾಂಕ್ರಾಮಿಕ ಹರಡಲು ಚೀನಾ ಕಾರಣ ಎಂಬುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪದೇ ಪದೇ ಆರೋಪಿಸುತ್ತಿದ್ದಾರೆ.
‘‘ಈ ಸಂಸ್ಥೆಗಳು ಸ್ವತಂತ್ರ ಸುದ್ದಿ ಸಂಸ್ಥೆಗಳಲ್ಲ. ಅವುಗಳನ್ನು ಚೀನಾದ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷ ನಿಯಂತ್ರಿಸುತ್ತದೆ. ಅವುಗಳು ಚೀನಾ ಸರಕಾರದ ಪ್ರಚಾರ ಸಂಸ್ಥೆಗಳಾಗಿವೆ’’ ಎಂದು ಅಮೆರಿಕದ ವಿದೇಶ ಇಲಾಖೆಯ ವಕ್ತಾರೆ ಮೋರ್ಗನ್ ಒರ್ಟಾಗಸ್ ಹೇಳಿದ್ದಾರೆ.
ಅಮೆರಿಕವು ಫೆಬ್ರವರಿ 18ರಂದು ಚೀನಾದ ಸುದ್ದಿ ಸಂಸ್ಥೆಗಳಾದ ಕ್ಸಿನುವಾ ಸುದ್ದಿ ಸಂಸ್ಥೆ, ಚೀನಾ ಗ್ಲೋಬಲ್ ಟೆಲಿವಿಶನ್ ನೆಟ್‌ವರ್ಕ್, ಚೀನಾ ರೇಡಿಯೊ ಇಂಟರ್‌ನ್ಯಾಶನಲ್, ಚೀನಾ ಡೇಲಿ ಡಿಸ್ಟ್ರಿಬ್ಯೂಶನ್ ಕಾರ್ಪೊರೇಶನ್ ಮತ್ತು ಹಾಯ್ ಟಿಯಾನ್ ಡೆವೆಲಪ್‌ಮೆಂಟ್ ಯುಎಸ್‌ಎಗಳನ್ನು ವಿದೇಶಿ ಸಂಸ್ಥೆಗಳೆಂದು ಘೋಷಿಸಿತ್ತು.
ಸೂಕ್ತ ಪ್ರತಿಕ್ರಿಯೆ: ಚೀನಾ
ಅಮೆರಿಕದಲ್ಲಿರುವ ಚೀನಾದ ಇನೂ ನಾಲ್ಕು ಸರಕಾರಿ ಮಾಧ್ಯಮಗಳ ಕಚೇರಿಗಳ ವಿರುದ್ಧ ಅಮೆರಿಕ ನಿರ್ಬಂಧಗಳನ್ನು ವಿಧಿಸಿರುವುದಕ್ಕೆ ಪ್ರತಿಕ್ರಿಯಿಸಿರುವ ಚೀನಾ, ಇದಕ್ಕೆ ಸೂಕ್ತ ಪ್ರತಿಕ್ರಿಯೆ ನೀಡುವುದಾಗಿ ಹೇಳಿದೆ.
ಚೀನಾ ಈಗಾಗಲೇ ಈ ವರ್ಷ 12ಕ್ಕೂ ಅಧಿಕ ಅಮೆರಿಕದ ಪತ್ರಕರ್ತರನ್ನು ದೇಶದಿಂದ ಉಚ್ಚಾಟಿಸಿದ್ದು, ಮಾಧ್ಯಮ ಕಚೇರಿಗಳಿಗೆ ಸಂಬಂಧಿಸಿ ಎರಡು ದೇಶಗಳ ನಡುವಿನ ವಿವಾದ ತಾರಕಕ್ಕೇರಿದೆ.







