ಧಾರ್ಮಿಕ ಸಮಾರಂಭಗಳಿಂದಾಗಿ ಹೆಚ್ಚುತ್ತಿರುವ ಕೊರೋನ ವೈರಸ್: ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

ಜಿನೀವ, ಜೂ. 23: ಕೊರೋನ ವೈರಸ್ ಸಾಂಕ್ರಾಮಿಕವನ್ನು ನಿಭಾಯಿಸುವಲ್ಲಿ ಯಶಸ್ವಿಯಾಗಿರುವ ದೇಶಗಳಲ್ಲಿ, ಧಾರ್ಮಿಕ ಸಮಾರಂಭಗಳು ಮತ್ತು ಇತರ ಕಾರಣಗಳಿಂದಾಗಿ ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಅಧಿಕಾರಿ ಮರಿಯಾ ವಾನ್ ಕೆರ್ಖೋವ್ ಹೇಳಿದ್ದಾರೆ.
‘‘ನೆಲೆಯೂರುವ ಯಾವುದೇ ಅವಕಾಶ ವೈರಸ್‌ಗೆ ಲಭಿಸಿದರೆ ಅದು ನೆಲೆಯೂರುತ್ತದೆ. ಇಂಥ ಪ್ರಕರಣಗಳನ್ನು ಕ್ಷಿಪ್ರವಾಗಿ ಪತ್ತೆಹಚ್ಚುವ ಸ್ಥಿತಿಯಲ್ಲಿ ಈ ದೇಶಗಳು ಇವೆ ಎನ್ನುವುದು ಮಹತ್ವದ ವಿಷಯವಾಗಿದೆ’’ ಎಂದು ಆನ್‌ಲೈನ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹೇಳಿದರು.
ದಕ್ಷಿಣ ಕೊರಿಯದಲ್ಲಿ ಕ್ಲಬ್‌ಗಳು ಮತ್ತು ಅಮ್ಯೂಸ್‌ಮೆಂಟ್ ಪಾರ್ಕ್‌ಗಳು ಮುಂತಾದ ಸಾರ್ವಜನಿಕ ಸ್ಥಳಗಳೊಂದಿಗೆ ನಂಟು ಹೊಂದಿದ ಕೊರೋನ ವೈರಸ್ ಪ್ರಕರಣಗಳ ಸಂಖ್ಯೆ ಈಗ ಹೆಚ್ಚುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಇನ್ನೋರ್ವ ಅಧಿಕಾರಿ ಮೈಕ್ ರಯಾನ್ ಹೇಳಿದರು.
ಇಟಲಿಯ ತ್ಯಾಜ್ಯ ನೀರಿನಲ್ಲಿ ಕೊರೋನ ವೈರಸ್ ಪತ್ತೆಯಾಗಿದ್ದು, ಅಲ್ಲಿ ಸೋಂಕು ಪ್ರಕರಣಗಳು ಪತ್ತೆಯಾಗುವ ಮುನ್ನ ವೈರಸ್ ಎಲ್ಲೆಡೆ ಹರಡುವ ಸಾಧ್ಯತೆಗಳಿವ ಎಂದು ಅವರು ಎಚ್ಚರಿಸಿದರು.





