ಮಂಗಳೂರು: ವ್ಯಕ್ತಿಗೆ ಕೊರೋನ ಪಾಸಿಟಿವ್; ಖಾಸಗಿ ಆಸ್ಪತ್ರೆಯ 35 ವೈದ್ಯ-ಸಿಬ್ಬಂದಿಗೆ ಕ್ವಾರಂಟೈನ್
ಮಂಗಳೂರು, ಜೂ. 23: ನಗರದ ಖಾಸಗಿ ಆಸ್ಪತ್ರೆಯಲ್ಲಿ ಹೃದಯಸಂಬಂಧಿ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಗೆ ಕೊರೋನ ಸೋಂಕು ತಗುಲಿರುವುದು ಮಂಗಳವಾರ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ರೋಗಿಯ ತಪಾಸಣೆ, ಚಿಕಿತ್ಸೆ ನೀಡಿದ್ದ ಆಸ್ಪತ್ರೆಯ ಸುಮಾರು 35 ವೈದ್ಯ-ಸಿಬ್ಬಂದಿಯನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ.
ಮಂಗಳೂರು ನಿವಾಸಿಯಾದ 49 ವರ್ಷದ ವ್ಯಕ್ತಿಯು ಮೀನುಗಾರಿಕಾ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರು. ಇವರು ಬಹುದಿನಗಳಿಂದ ಹೃದಯಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ನಿರಂತರವಾಗಿ ಚಿಕಿತ್ಸೆಗೆ ಇದೇ ಆಸ್ಪತ್ರೆಗೆ ದಾಖಲಾಗುತ್ತಿದ್ದರು. ಈ ರೋಗಿಯು ಎಂದಿ ನಂತೆಯೇ ಶುಕ್ರವಾರ ಕೂಡ ಆಸ್ಪತ್ರೆಗೆ ದಾಖಲಾದಾಗ ಇವರ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿ ವೆನ್ಲಾಕ್ ಆಸ್ಪತ್ರೆಗೆ ಕಳುಹಿಸಿ ಕೊಡಲಾಗಿತ್ತು. ಆರೋಗ್ಯ ಇಲಾಖೆ ಪ್ರಕಟಿಸಿದ ವರದಿಯಲ್ಲಿ ಪಾಸಿಟಿವ್ ಎಂದು ಬಂದಿದೆ. ರೋಗಿಗೆ ಸೋಂಕು ಇರುವುದು ದೃಢಪಟ್ಟ ತಕ್ಷಣವೇ ಖಾಸಗಿ ಆಸ್ಪತ್ರೆಯ ಸುಮಾರು 35 ವೈದ್ಯ-ಸಿಬ್ಬಂದಿಯನ್ನು ವಿಶೇಷ ಕೊಠಡಿಗಳಲ್ಲಿ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ.
‘ಆಸ್ಪತ್ರೆಗೆ ದಾಖಲಾಗುವ ಹೃದಯ ಸಂಬಂಧಿ ಕಾಯಿಲೆಯಂತಹ ಪ್ರಕರಣಗಳಿಗೆ ವಿಶೇಷ ನಿಗಾ ಇರಿಸಲಾಗುತ್ತದೆ. ಅದೇ ಪ್ರಕಾರ 49 ವರ್ಷದ ವ್ಯಕ್ತಿಯನ್ನು ಕೂಡ ‘ಐಸೋಲೇಶನ್ ವಾರ್ಡ್’ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಇವರಿಗೆ ಸೋಂಕು ತಗುಲಿರುವುದು ಸಂಜೆ ಗಮನಕ್ಕೆ ಬಂದಿತು. ಕೂಡಲೇ ತಮ್ಮ ಆಸ್ಪತ್ರೆಯ ಸುಮಾರು 35 ವೈದ್ಯ-ಸಿಬ್ಬಂದಿಯನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಆಸ್ಪತ್ರೆಯಲ್ಲಿ ಎಲ್ಲ ಸಿಬ್ಬಂದಿಯೂ ಪಿಪಿಇ ಕಿಟ್ ಧರಿಸಿಯೇ ತಪಾಸಣೆ-ಚಿಕಿತ್ಸೆ ನೀಡುತ್ತಾರೆ. ಸುರಕ್ಷತಾ ದೃಷ್ಟಿಯಿಂದ ಸಿಬ್ಬಂದಿಯನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ’ ಎಂದು ನಗರದ ಖಾಸಗಿ ಆಸ್ಪತ್ರೆಯ ಉನ್ನತ ಮೂಲಗಳು ತಿಳಿಸಿವೆ.







