ಕೋವಿಡ್-19 ಆಸ್ಪತ್ರೆಗಳಲ್ಲಿ ನರಕಯಾತನೆಯ ಅನುಭವ: ಪೊಲೀಸ್ ಇನ್ಸ್ ಪೆಕ್ಟರ್‌ರದ್ದು ಎನ್ನಲಾದ ಆಡಿಯೊ ವೈರಲ್
ಬೆಂಗಳೂರು, ಜೂ.23: "ಕೋವಿಡ್-19 ವಿರುದ್ಧ ಹೋರಾಟ ನಡೆಸುತ್ತಿರುವ ಸೈನಿಕರಿಗೆ ಸೂಕ್ತ ರೀತಿಯ ಆರೋಗ್ಯ ಸೇವೆ ದೊರೆಯುತ್ತಿಲ್ಲ. ಕೋವಿಡ್-19 ಆಸ್ಪತ್ರೆಗಳಲ್ಲೂ ಹಾಸಿಗೆ ದೊರೆಯದೆ, ನರಕಯಾತನೆ ಅನುಭವಿಸುವಂತೆ ಆಗಿದೆ ಎಂದು ಆರೋಪಿಸಿರುವ, ಪೊಲೀಸ್ ಇನ್ಸ್ ಪೆಕ್ಟರ್ ಒಬ್ಬರದ್ದು ಎನ್ನಲಾದ ಆಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
"ಕೊರೋನ ದೃಢಪಟ್ಟ ಸೋಂಕಿತರು, ಶಂಕಿತರನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸೂಕ್ತ ರೀತಿಯಲ್ಲಿ ನೋಡಿಕೊಳ್ಳುತ್ತಿಲ್ಲ. ತುರ್ತು ಸಂದರ್ಭದಲ್ಲಿ ಹಾಸಿಗೆ ವ್ಯವಸ್ಥೆಯೂ ಇಲ್ಲ. ಈ ಬಗ್ಗೆ ಸಂಬಂಧಪಟ್ಟ ಆರೋಗ್ಯಾಧಿಕಾರಿ ಗಮನಕ್ಕೆ ತರಲಾಗಿದ್ದರೂ, ನಿರ್ಲಕ್ಷ್ಯ ವಹಿಸುತ್ತಾರೆ. ಸ್ವತಃ ಕೊರೋನ ಸೈನಿಕರಾಗಿರುವ ಪೊಲೀಸರಿಗೆ ಸೂಕ್ತ ರೀತಿಯ ವ್ಯವಸ್ಥೆ ಇಲ್ಲದಂತೆ ಆಗಿದ್ದು, ಪ್ರತಿಯೊಬ್ಬರು ಜಾಗೃತಿವಹಿಸಿ" ಎಂದು ಆಡಿಯೊದಲ್ಲಿ ಹೇಳಿದ್ದಾರೆ.
"ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಒಂದೆರೆಡು ತಿಂಗಳಿನಿಂದ ನೆಗೆಟಿವ್ ಬಂದಿರುವವರು, ಪಾಸಿಟಿವ್ ಬಂದಿರುವವರು ಎಲ್ಲರನ್ನೂ ಒಟ್ಟಿಗೆ ಇರಿಸಲಾಗಿದೆ. ಇಲ್ಲಿಗೆ ಬಂದ ಮೇಲೆ ಸಾಮಾನ್ಯ ಕೂಲಿಕಾರ, ಇಂಜಿನಿಯರ್, ಪೊಲೀಸರು ಎಲ್ಲರೂ ಒಂದೇ. ಒಳಗಿನ ಅವಾಂತರ ಗೊತ್ತಾಗುತ್ತದೆ ಎಂದು ಮಾಧ್ಯಮದವರನ್ನಾಗಲೀ ಬೇರೆಯವರನ್ನಾಗಲೀ ಆಸ್ಪತ್ರೆಯ ಹತ್ತಿರ ಸುಳಿಯಲೂ ಬಿಡುತ್ತಿಲ್ಲ. ಅಲ್ಲದೆ, ತಮಗೆ ಯಾವ ಲಕ್ಷಣಗಳೂ ಇಲ್ಲ. ಆರೋಗ್ಯವಾಗಿದ್ದೇನೆ. ಆದರೂ ಪಾಸಿಟಿವ್ ವರದಿ ಕೊಟ್ಟಿದ್ದಾರೆ" ಎಂದು ಅವರು ಭಾವುಕರಾಗಿದ್ದಾರೆ.
"ಕೋವಿಡ್-19 ಸೋಂಕಿನಿಂದ ಮೃತಪಟ್ಟ ಪೊಲೀಸ್ ಸಿಬ್ಬಂದಿಯನ್ನು ಅವರ ಮಡದಿ, ಮಕ್ಕಳೇ ಅಂತಿಮ ದರ್ಶನ ಪಡೆಯಲು ಮುಂದಾಗಿಲ್ಲ. ಹೀಗಿರುವಾಗ ಯಾರಿಗಾಗಿ ನಾವು ದುಡಿಯಬೇಕು. ಇದು ನಮಗೆ ಉದಾಹರಣೆ ಆಗಿದ್ದು, ಯಾವುದೇ ಕಾರಣಕ್ಕೂ ಸೋಂಕಿಗೆ ಗುರಿಯಾಗಬಾರದು. ಅದಷ್ಟು ಎಲ್ಲರಲ್ಲೂ ಅರಿವು ಮೂಡಿಸಿ" ಎಂದು ಪೊಲೀಸ್ ಇನ್ಸ್ ಪೆಕ್ಟರ್ ಅವರದ್ದು ಎನ್ನಲಾದ ಆಡಿಯೊದಲ್ಲಿ ವಿವರಿಸಲಾಗಿದೆ.







