ಮಕ್ಕಳಿಗೆ ಆನ್‍ಲೈನ್ ಶಿಕ್ಷಣ ನಿಷೇಧ: ಪರಿಶೀಲಿಸಿ ವಿವರಣೆ ನೀಡಲು ಸರಕಾರಕ್ಕೆ ಹೈಕೋರ್ಟ್ ಆದೇಶ

ಬೆಂಗಳೂರು, ಜೂ.23: ಒಂದರಿಂದ ಐದನೆ ತರಗತಿವರೆಗಿನ ಮಕ್ಕಳಿಗೆ ಆನ್‍ಲೈನ್ ಶಿಕ್ಷಣವನ್ನು ನಿಷೇಧಿಸಿ ಹೊರಡಿಸಿರುವ ಆದೇಶಕ್ಕೆ ಸಂಬಂಧಿಸಿದಂತೆ ನಿಗದಿತ ಅವಧಿಯವರೆಗಾದರೂ ಶಿಕ್ಷಣವನ್ನು ಮುಂದುವರಿಸಲು ಸಾಧ್ಯವೇ ಎಂಬುದನ್ನು ಪರಿಶೀಲಿಸಿ ವಿವರಣೆ ನೀಡಿ ಎಂದು ಹೈಕೋರ್ಟ್ ರಾಜ್ಯ ಸರಕಾರಕ್ಕೆ ತಿಳಿಸಿದೆ.
ವಿವಿಧ ಶಾಲೆಗಳಲ್ಲಿ 1 ರಿಂದ 5ನೆ ತರಗತಿವರೆಗೆ ಕಲಿಯುತ್ತಿರುವ ವಿದ್ಯಾರ್ಥಿಗಳ ಪೋಷಕರು ಸಲ್ಲಿಸಿರುವ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎಸ್.ಎಸ್.ಓಕಾ ಹಾಗೂ ನ್ಯಾಯಮೂರ್ತಿ ಆರ್.ನಟರಾಜ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.
ರಾಜ್ಯ ಸರಕಾರ 1 ರಿಂದ 5ನೆ ತರಗತಿವರೆಗಿನ ಮಕ್ಕಳಿಗೆ ಆನ್‍ಲೈನ್ ಶಿಕ್ಷಣವನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಆದರೆ, ಕರ್ನಾಟಕ ಶಿಕ್ಷಣ ಕಾಯ್ದೆ ವ್ಯಾಪ್ತಿಗೆ ಒಳಪಡದ ಸಿಬಿಎಸ್‍ಸಿ, ಐಸಿಎಸ್‍ಸಿ ಪಠ್ಯಕ್ರಮದ ಶಾಲೆಗಳಿಗೆ ರಾಜ್ಯ ಸರಕಾರದ ಈ ಆದೇಶ ಹೇಗೆ ಅನ್ವಯವಾಗಲಿದೆ ಎಂಬ ಬಗ್ಗೆ ವಿವರಣೆ ನೀಡುವಂತೆ ರಾಜ್ಯ ಸರಕಾರದ ಪರ ವಕೀಲರಿಗೆ ನಿರ್ದೇಶನ ನೀಡಿದ ನ್ಯಾಯಪೀಠ ವಿಚಾರಣೆಯನ್ನು ಜೂ.26ಕ್ಕೆ ಮುಂದೂಡಿತು.
ಕೊರೋನ ವೈರಸ್ ಸೋಂಕು ಭೀತಿ ಹಿನ್ನೆಲೆಯಲ್ಲಿ ತಜ್ಞರ ಸಮಿತಿ ನೀಡಿದ ಅಭಿಪ್ರಾಯ ಆಧರಿಸಿ 1ರಿಂದ 5ನೆ ತರಗತಿ ಆನ್‍ಲೈನ್ ಶಿಕ್ಷಣ ನಿಷೇಧಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಪೋಷಕರು, ಶಾಲಾ ಆಡಳಿತ ಮಂಡಳಿ ಅವರೊಂದಿಗೆ ಇನ್ನೂ ಚರ್ಚೆ ನಡೆಯುತ್ತಿರುವಾಗಲೇ ಸರಕಾರ ಈ ತೀರ್ಮಾನ ತೆಗೆದುಕೊಂಡಿದೆ. ಅಭಿಪ್ರಾಯ ತಿಳಿಸಲು ಸಂಬಂಧಿತರಿಗೆ ಸಮರ್ಪಕ ಅವಕಾಶವನ್ನೂ ನೀಡಿಲ್ಲ. ಪ್ರಸ್ತುತ ಸಂದರ್ಭದಲ್ಲಿ ಮಕ್ಕಳ ಶಿಕ್ಷಣ ಮುಂದುವರಿಸಲು ಪರ್ಯಾಯ ವ್ಯವಸ್ಥೆಯನ್ನೂ ಸೂಚಿಸಿಲ್ಲ. ಏಕ ಪಕ್ಷೀಯವಾಗಿ ತೆಗೆದುಕೊಂಡಿರುವ ಸರಕಾರದ ಈ ನಿರ್ಧಾರ ಮೂಲಭೂತ ಹಕ್ಕಿನ ಉಲ್ಲಂಘನೆ ಎಂದು ಅರ್ಜಿಯಲ್ಲಿ ದೂರಲಾಗಿದೆ.
ಈ ಹಿನ್ನೆಲೆಯಲ್ಲಿ 1 ರಿಂದ 5ನೆ ತರಗತಿವರೆಗಿನ ಮಕ್ಕಳಿಗೆ ಆನ್‍ಲೈನ್ ಶಿಕ್ಷಣ ನಿಷೇಧಿಸಿ ರಾಜ್ಯ ಸರಕಾರ ಹೊರಡಿಸಿರುವ ಆದೇಶ ರದ್ದುಪಡಿಸಬೇಕು. ಅರ್ಜಿ ಇತ್ಯರ್ಥಗೊಳ್ಳುವವರೆಗೆ ಆದೇಶ ಜಾರಿಗೆ ತಡೆ ನೀಡಬೇಕೆಂದು ಅರ್ಜಿದಾರರು ಮನವಿ ಮಾಡಿಕೊಂಡಿದ್ದಾರೆ.







