ರಾಜತಾಂತ್ರಿಕ ವಿವಾದದ ನಡುವೆ ಪಾಕ್ ರಾಯಭಾರಿ ಕಚೇರಿ ಸಿಬ್ಬಂದಿ ಬಲವನ್ನು ಶೇ.50ರಷ್ಟು ತಗ್ಗಿಸಲು ಭಾರತದ ನಿರ್ಧಾರ

ಕೃಪೆ: facebook
ಹೊಸದಿಲ್ಲಿ,ಜೂ.23: ಉಭಯ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಬಿಕ್ಕಟ್ಟಿನ ನಡುವೆಯೇ ಭಾರತವು ದಿಲ್ಲಿಯಲ್ಲಿನ ಪಾಕಿಸ್ತಾನ ರಾಯಭಾರಿ ಕಚೇರಿಯ ಸಿಬ್ಬಂದಿ ಬಲವನ್ನು ಶೇ.50ರಷ್ಟು ತಗ್ಗಿಸುವುದಾಗಿ ಮತ್ತು ಇಸ್ಲಾಮಾಬಾದ್ನ ಭಾರತೀಯ ರಾಯಭಾರಿ ಕಚೇರಿಯಲ್ಲಿನ ತನ್ನ ಅರ್ಧದಷ್ಟು ಸಿಬ್ಬಂದಿಗಳನ್ನು ವಾಪಸ್ ಕರೆಸಿಕೊಳ್ಳುವುದಾಗಿ ಮಂಗಳವಾರ ಹೇಳಿದೆ. ತನ್ನ ಸೂಚನೆಯನ್ನು ಪಾಲಿಸಲು ಏಳು ದಿನಗಳ ಸಮಯಾವಕಾಶವನ್ನು ಅದು ನೀಡಿದೆ.
ಪಾಕ್ ರಾಯಭಾರಿ ಕಚೇರಿಯ ಚಾರ್ಜ್ ಡಿ ಅಫೇರ್ಸ್ ಸೈಯದ್ ಹೈದರ್ ಶಾ ಅವರಿಗೆ ಬುಲಾವ್ ನೀಡಿದ್ದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಅವರ ಕಚೇರಿಯ ಅಧಿಕಾರಿಗಳ ಚಟುವಟಿಕೆಗಳ ಕುರಿತು ತನ್ನ ಕಳವಳವನ್ನು ವ್ಯಕ್ತಪಡಿಸಿದೆ ಎಂದು ಅಧಿಕೃತ ಹೇಳಿಕೆಯು ತಿಳಿಸಿದೆ.
ಮೇ 31ರಂದು ಕೇಂದ್ರವು ಬೇಹುಗಾರಿಕೆ ಆರೋಪಗಳಲ್ಲಿ ಪಾಕ್ ರಾಯಭಾರಿ ಕಚೇರಿಯ ಉದ್ಯೋಗಿಗಳಾದ ಅಬಿದ್ ಹುಸೇನ್ ಮತ್ತು ಮುಹಮ್ಮದ್ ತಾಹಿರ್ ಅವರನ್ನು ದೇಶದಿಂದ ಉಚ್ಚಾಟಿಸಿತ್ತು.
ಪಾಕ್ ಅಧಿಕಾರಿಗಳು ರಾಯಭಾರಿ ಕಚೇರಿಯಲ್ಲಿನ ತಮ್ಮ ಹುದ್ದೆಗಳಿಗೆ ಉಚಿತವಲ್ಲದ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದರೆ ಅದಕ್ಕೆ ಸಮಾಂತರವಾಗಿ ಪಾಕಿಸ್ತಾನವು ಇಸ್ಲಾಮಾಬಾದ್ನ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳು ತಮ್ಮ ಶಾಸನಬದ್ಧ ರಾಜತಾಂತ್ರಿಕ ಕರ್ತವ್ಯಗಳನ್ನು ನಿರ್ವಹಿಸದಂತೆ ಬೆದರಿಕೆಯೊಡ್ಡಲು ನಿರಂತರ ಅಭಿಯಾನವನ್ನು ನಡೆಸುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ತಿಳಿಸಿದೆ.
ಪಾಕ್ ಅಧಿಕಾರಿಗಳ ಉಚ್ಚಾಟನೆಯ 15 ದಿನಗಳ ಬಳಿಕ ಇಸ್ಲಾಮಾಬಾದ್ನ ಭಾರತೀಯ ರಾಯಭಾರಿ ಕಚೇರಿಯಲ್ಲಿ ಚಾಲಕ ಹುದ್ದೆಯಲ್ಲಿದ್ದ ಪಾಲ್ ಸೆಲ್ವದಾಸ್ ಮತ್ತು ದ್ವಿಮು ಬ್ರಹ್ಮ ಅವರು ಹಲವಾರು ಗಂಟೆಗಳ ಕಾಲ ನಾಪತ್ತೆಯಾಗಿದ್ದರು. ಭಾರತವು ಬಲವಾದ ಪ್ರತಿಭಟನೆಯನ್ನು ಸಲ್ಲಿಸಿದ ಬಳಿಕವೇ ಪಾಕ್ ಅಧಿಕಾರಿಗಳು ಅವರನ್ನು ಬಿಡುಗಡೆಗೊಳಿಸಿದ್ದರು.
ಬಂದೂಕಿನ ಮೊನೆಯಲ್ಲಿ ಅವರನ್ನು ಅಪಹರಿಸಿದ್ದು ಪಾಕಿಸ್ತಾನವು ಭಾರತೀಯ ಅಧಿಕಾರಿಗಳನ್ನು ಬೆದರಿಸಲು ಯಾವುದೇ ಮಟ್ಟಕ್ಕೂ ಇಳಿಯಲು ಹೇಸುವುದಿಲ್ಲ ಎನ್ನುವುದನ್ನು ತೋರಿಸುತ್ತಿದೆ. ಜೂ.22ರಂದು ಭಾರತಕ್ಕೆ ಮರಳಿರುವ ಸೆಲ್ವದಾಸ್ ಮತ್ತು ಬ್ರಹ್ಮ ಪಾಕ್ ಏಜೆನ್ಸಿಗಳು ತಮ್ಮನ್ನು ಎಷ್ಟೊಂದು ಬರ್ಬರವಾಗಿ ನಡೆಸಿಕೊಂಡಿದ್ದವು ಎನ್ನುವುದನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ ಎಂದು ಹೇಳಿಕೆಯು ತಿಳಿಸಿದೆ.
ಪಾಕಿಸ್ತಾನದ ನಡವಳಿಕೆಯು ದ್ವೇಷದ ವಾತಾವರಣದಲ್ಲಿ ಭಾರತ ಮತ್ತು ಪಾಕಿಸ್ತಾನಗಳ ರಾಜತಾಂತ್ರಿಕರ ಸುರಕ್ಷತೆಯನ್ನು ಖಚಿತಪಡಿಸುವ ರಾಜತಾಂತ್ರಿಕ ಸಂಬಂಧಗಳ ಕುರಿತು ವಿಯೆನ್ನಾ ಒಪ್ಪಂದ,1961 ಮತ್ತು 1992ರ ನೀತಿ ಸಂಹಿತೆಗೆ ಅನುಗುಣವಾಗಿಲ್ಲ ಎಂದು ಒತ್ತಿ ಹೇಳಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯವು,ವ್ಯತಿರಿಕ್ತವಾಗಿ ಅದು ಗಡಿಯಾಚೆಯ ಹಿಂಸೆ ಮತ್ತು ಭೀತಿವಾದವನ್ನು ಬೆಂಬಲಿಸುವ ವ್ಯಾಪಕ ನೀತಿಯನ್ನು ಸೂಚಿಸುತ್ತದೆ ಎಂದಿದೆ.







