ಜೂ. 25 ರಿಂದ ಎಸೆಸ್ಸೆಲ್ಸಿ ಪರೀಕ್ಷೆ: ದ.ಕ.ಜಿಲ್ಲೆಯಲ್ಲಿ ಸಕಲ ಸಿದ್ಧತೆ

ಮಂಗಳೂರು, ಜೂ.24: ಕೊರೋನ-ಲಾಕ್‌ಡೌನ್ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿದ್ದ ಎಸೆಸ್ಸೆಲ್ಸಿ ಪರೀಕ್ಷೆಯು ಜೂ.25(ಗುರುವಾರ)ರಿಂದ ಆರಂಭಗೊಳ್ಳಲಿದ್ದು, ದ.ಕ.ಜಿಲ್ಲೆಯು ಸಂಪೂರ್ಣ ಸಜ್ಜಾಗಿದೆ. ಜುಲೈ 4ರವರೆಗೆ ಪರೀಕ್ಷೆ ನಡೆಯಲಿದೆ.
ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶದಲ್ಲಿ ದ.ಕ.ಜಿಲ್ಲೆ ಪ್ರಥಮ ಸ್ಥಾನದಲ್ಲಿ ಕಾಣಿಸಿಕೊಳ್ಳಬೇಕೆಂಬ ನಿಟ್ಟಿನಲ್ಲಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯು 2018-19ನೆ ಸಾಲಿನ ಪರೀಕ್ಷೆಗೆ ವಿಶೇಷ ಸಿದ್ಧತೆ ನಡೆಸಿತ್ತು. ಆದರೆ ಈ ಬಾರಿ ಅಂತಹ ಸಿದ್ಧತೆಗೆ ಕೊರೋನ ಅಡ್ಡಿಯಾಗಿದೆ. ಇದೀಗ ವಿದ್ಯಾರ್ಥಿ ಗಳ ಪೋಷಕರ ಮತ್ತು ಸಾರ್ವಜನಿಕರ ತೀವ್ರ ವಿರೋಧದ ಮಧ್ಯೆಯೂ ಪರೀಕ್ಷೆ ನಡೆಸಲು ರಾಜ್ಯ ಸರಕಾರ ಮುಂದಾಗಿದೆ. ಅದರಂತೆ ದ.ಕ. ಜಿಲ್ಲೆಯಲ್ಲಿ ಅಧಿಕಾರಿಗಳು, ಶಿಕ್ಷಕ ವರ್ಗವು ವಿದ್ಯಾರ್ಥಿಗಳು ಯಾವುದೇ ಗಾಬರಿಗೊಳಗಾಗದೆ ಪರೀಕ್ಷೆ ಬರೆಯುವಂತೆ ಮನವಿ ಮಾಡಿದ್ದಾರೆ.
ದ.ಕ.ಜಿಲ್ಲೆಯಲ್ಲಿ 30,835 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಹೆಸರು ನೋಂದಾಯಿಸಿದ್ದಾರೆ. 95 ಪರೀಕ್ಷಾ ಕೇಂದ್ರಗಳಲ್ಲಿ 1585 ಕೊಠಡಿಗಳನ್ನು ತೆರೆಯಲಾಗಿದೆ. ಹೆಚ್ಚುವರಿಯಾಗಿ 19 ಪರೀಕ್ಷೆ ಕೇಂದ್ರಗಳನ್ನು ಕಾಯ್ದಿರಿಸಲಾಗಿದೆ. ಪ್ರತಿ ಕೊಠಡಿಯಲ್ಲಿ 20 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಜ್ವರ ಲಕ್ಷಣವಿರುವ ವಿದ್ಯಾರ್ಥಿಗಳಿಗೆ ಪ್ರತೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ 102 ವಿಶ್ರಾಂತಿ ಕೊಠಡಿ ಸಿದ್ಧಪಡಿಸಲಾಗಿದೆ.
ಪ್ರತಿ ಪರೀಕ್ಷಾ ಕೇಂದ್ರದಲ್ಲಿಯೂ ವಿದ್ಯಾರ್ಥಿಗಳು ಸುರಕ್ಷಿತ ಅಂತರ ಕಾಯ್ದುಕೊಂಡು (ಕನಿಷ್ಟ 1 ಮೀ)ಪರೀಕ್ಷೆ ಬರೆಯಲು ಅನುಕೂಲ ಕಲ್ಪಿಸಲಾಗಿದೆ. ಕೇಂದ್ರದೊಳಗೆ ಪ್ರವೇಶಿಸುವ ಮೊದಲು ತಾಪಮಾನ ಪರೀಕ್ಷೆ, ಸ್ಯಾನಿಟೈಸರ್ ನೀಡಲು ವ್ಯವಸ್ಥೆ ಮಾಡಲಾಗಿದೆ. ಹಾಲ್ ಟಿಕೆಟ್ ನೀಡುವಾಗಲೇ ತಲಾ 2ರಂತೆ ಮಾಸ್ಕ್‌ಗಳನ್ನೂ ವಿತರಿಸಲಾಗಿದೆ. ಥರ್ಮಲ್ ಸ್ಕ್ರೀನಿಂಗ್ ಸಾಧನವನ್ನು ಎಲ್ಲ ಪರೀಕ್ಷಾ ಕೇಂದ್ರಗಳಿಗೆ ನೀಡಲಾಗಿದೆ.
ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಎಲ್ಲ ಕೋಣೆಗಳನ್ನು ಸ್ಯಾನಿಟೈಸ್ ಮಾಡಲಾಗಿದೆ. ಅಲ್ಲದೆ ಎಲ್ಲ ಡೆಸ್ಕ್ ಮತ್ತು ಬೆಂಚ್‌ಗಳನ್ನು ಡೆಟಾಲ್ ಹಾಕಿ ತೊಳೆದು ಸ್ವಚ್ಛ ಮಾಡಲಾಗಿದೆ. ಇದರಿಂದ ಯಾವುದೇ ವೈರಾಣುಗಳು ಕೋಣೆಯೊಳಗೆ ಪ್ರವೇಶಿಸುವುದಿಲ್ಲ. ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರದ ಸ್ವಚ್ಛತೆಯ ಬಗ್ಗೆ ಆತಂಕಪಡುವ ಅಗತ್ಯವಿರುವುದಿಲ್ಲ ಎಂದು ಡಿಡಿಪಿಐ ಮಲ್ಲೆಸ್ವಾಮಿ ತಿಳಿಸಿದ್ದಾರೆ.
ಪರೀಕ್ಷೆಗೆ ಹೆಸರು ನೋಂದಾಯಿಸಲ್ಪಟ್ಟ ವಿದ್ಯಾರ್ಥಿಗಳ ಪೈಕಿ ಬಹುತೇಕ ಮಕ್ಕಳನ್ನು ಹೆತ್ತವರೇ ಕರೆ ತರಲಿದ್ದಾರೆ. ಕೆಲವರು ಸಾರ್ವಜನಿಕ ವಾಹನ ಮತ್ತು ಇನ್ನು ಕೆಲವರು ಶಾಲಾ ವಾಹನಗಳಲ್ಲಿ ಆಗಮಿಸಲಿದ್ದಾರೆ. ಯಾವುದೇ ಸಾರಿಗೆ ವ್ಯವಸ್ಥೆ ಇಲ್ಲದ ವಿದ್ಯಾರ್ಥಿಗಳಿಗಾಗಿ ಅನುದಾನ ರಹಿತ ಶಾಲೆಗಳ ಶಾಲಾ ವಾಹನಗಳನ್ನು ಬಳಕೆ ಮಾಡಲಾಗುತ್ತದೆ. ಕೇರಳದ 367 ಮಂದಿ ವಿದ್ಯಾರ್ಥಿಗಳಿಗೆ ದ.ಕ. ಜಿಲ್ಲಾಡಳಿತದ ವತಿಯಿಂದ ಗಡಿ ಭಾಗಗಳಲ್ಲಿಯೂ ಬಸ್ ವ್ಯವಸ್ಥೆ ಮಾಡಲಾಗಿದೆ.
ಗುರುವಾರ ದ್ವಿತೀಯ ಭಾಷಾ ಪರೀಕ್ಷೆ
ಗುರುವಾರ ಬೆಳಗ್ಗೆ 10:30ಕ್ಕೆ ದ್ವಿತೀಯ ಭಾಷಾ (ಕನ್ನಡ/ಇಂಗ್ಲಿಷ್) ಪರೀಕ್ಷೆ ನಡೆಯಲಿದೆ. ಪರೀಕ್ಷಾ ಕೇಂದ್ರಗಳು ಬೆಳಗ್ಗೆ 8 ಗಂಟೆಗೆ ತೆರೆಯಲ್ಪಡ ಲಿದೆ. ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್ ಇತ್ಯಾದಿ ಸಿದ್ಧತೆ ಮಾಡಬೇಕಿರುವುದರಿಂದ ವಿದ್ಯಾರ್ಥಿಗಳು ಆದಷ್ಟು ಬೇಗ ಹಾಜರಾಗಲು ಸೂಚಿಸಲಾಗಿದೆ ಎಂದು ಡಿಡಿಪಿಐ ಮಲ್ಲೇಸ್ವಾಮಿ ತಿಳಿಸಿದ್ದಾರೆ.







