ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ: ಆರೋಪಿ ನಿರಂಜನ್ ಭಟ್ಗೆ 15 ದಿನಗಳ ಜಾಮೀನು
ನಿರಂಜನ್ ಭಟ್
ಉಡುಪಿ, ಜೂ. 24: 2016ರಲ್ಲಿ ನಡೆದ ಉಡುಪಿಯ ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣದ ಆರೋಪಿ, ನಂದಳಿಕೆಯ ನಿರಂಜನ್ ಭಟ್(30)ಗೆ ಉಡುಪಿ ನ್ಯಾಯಾಲಯ 15 ದಿನಗಳ ಕಾಲ ಷರತ್ತುಬದ್ಧ ಜಾಮೀನು ನೀಡಿ ಆದೇಶಿಸಿದೆ.
ನಿರಂಜನ್ ಭಟ್ ಕಳೆದ ನಾಲ್ಕು ವರ್ಷಗಳಿಂದ ಜಾಮೀನು ಸಿಗದೆ ಜೈಲಿ ನಲ್ಲಿದ್ದು, ಈತನ ತಂದೆ ಹಾಗೂ ಪ್ರಕರಣದ ಸಾಕ್ಷನಾಶ ಆರೋಪಿ ಶ್ರೀನಿವಾಸ್ ಭಟ್ ಜೂ. 22ರಂದು ಅನಾರೋಗ್ಯದಿಂದ ನಿಧನರಾಗಿದ್ದರು. ಈತ ಶ್ರೀನಿವಾಸ್ ಭಟ್ ಅವರ ಏಕೈಕ ಪುತ್ರನಾಗಿರುವುದರಿಂದ, ಧಾರ್ಮಿಕ ಕಾರ್ಯ ನೆರವೇರಿಸಲು ಜಾಮೀನು ನೀಡುವಂತೆ ಕೋರಿ ಅರ್ಜಿ ಸಲ್ಲಿಸಲಾಗಿತ್ತು.
ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಿ.ಎಂ.ಜೋಶಿ ಜೂ.23ರಂದು ಹಾಗೂ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ಮ್ಯಾಜಿಸ್ಟ್ರೇಟ್ ಕೋರ್ಟ್ ಜೂ.24ರಂದು ಜಾಮೀನು ನೀಡಿದೆ. ಇದೀಗ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಿರಂಜನ್ ಜೂ.25ರಂದು ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಜಾಮೀನು ಷರತ್ತಿನಲ್ಲಿ ಐದು ಲಕ್ಷ ರೂ. ಮೊತ್ತದ ಬಾಂಡ್ ನೀಡುವಂತೆ ಹಾಗೂ ಜು.7ರಂದು ನ್ಯಾಯಾಲಯಕ್ಕೆ ಹಾಜರಾಗಿ, ನ್ಯಾಯಾಂಗ ಬಂಧನ್ಕೆ ಒಳಗಾಗುವಂತೆ ಕೋರ್ಟ್ ತಿಳಿಸಿದೆ. 2016ರ ಜು.28ರಂದು ಇಂದ್ರಾಳಿಯ ಮನೆಯಲ್ಲಿ ಭಾಸ್ಕರ್ ಶೆಟ್ಟಿಯನ್ನು ಅವರ ಪತ್ನಿ ಹಾಗೂ ಮಗನೊಂದಿಗೆ ಸೇರಿ ನಿರಂಜನ್ ಭಟ್ ಕೊಲೆ ಮಾಡಿ ಸುಟ್ಟು ಹಾಕಿದ್ದನು ಎಂದು ದೂರು ದಾಖಲಾಗಿದೆ. ಆ.8ರಂದು ಪೊಲೀಸರಿಂದ ಬಂಧಿತನಾಗಿದ್ದ ನಿರಂಜನ್ ಭಟ್, ತನ್ನ ಕೈ ಬೆರಳಲ್ಲಿದ್ದ ವಜ್ರದ ಉಂಗುರ ಹಾಗೂ ಕಿವಿಯ ಎರಡು ಓಲೆಗಳನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದನು.
ಪ್ರಕರಣದ ಸಾಕ್ಷ ನಾಶ ಆರೋಪದಡಿ ಶ್ರೀನಿವಾಸ ಭಟ್ ಹಾಗೂ ರಾಘವೇಂದ್ರನನ್ನು ಪೊಲೀಸರು ಆ.11ರಂದು ಬಂಧಿಸಿದ್ದರು. ಅ.1ರಂದು ಇವರನ್ನು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಾಮೀನು ನೀಡಿತ್ತು. ಕಳೆದ ಕೆಲವು ವರ್ಷಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಶ್ರೀನಿವಾಸ ಭಟ್, ವಿಚಾರಣೆಗೆ ಗೈರು ಹಾಜರಾಗುತ್ತಿದ್ದರು. ಅನಾರೋಗ್ಯ ಪೀಡಿತ ತಂದೆಯನ್ನು ನೋಡಲು ಒಂದು ತಿಂಗಳ ಕಾಲ ಜಾಮೀನು ನೀಡುವಂತೆ ಕೋರಿ ನಿರಂಜನ್ ಭಟ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 2019ರ ಆ.9 ರಂದು ತಿರಸ್ಕರಿಸಿ ಆದೇಶ ನೀಡಿತ್ತು. ಇದೀಗ ನಾಲ್ಕು ವರ್ಷಗಳ ನಂತರ ನಿರಂಜನ್ ಭಟ್ಗೆ ಜಾಮೀನು ದೊರೆತಿದೆ.