ಮುಂಜಾಗ್ರತಾ ಕ್ರಮಗಳೊಂದಿಗೆ ನಾಳೆಯಿಂದ ಎಸೆಸೆಲ್ಸಿ ಪರೀಕ್ಷೆ: ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ನಿಷೇಧಾಜ್ಞೆ

ಬೆಂಗಳೂರು, ಜೂ.24: ಕೋವಿಡ್-19 ಮುಂಜಾಗ್ರತಾ ಕ್ರಮಗಳ ನಡುವೆ ರಾಜ್ಯಾದ್ಯಂತ ಎಸೆಸೆಲ್ಸಿ ಪರೀಕ್ಷೆ ಪ್ರಾರಂಭಗೊಳ್ಳುತ್ತಿದ್ದು, ನಾಳೆ ದ್ವಿತೀಯ ಭಾಷೆ ಇಂಗ್ಲಿಷ್ ಮತ್ತು ಕನ್ನಡ ವಿಷಯದ ಪರೀಕ್ಷೆ ನಡೆಯಲಿದೆ.
ರಾಜ್ಯಾದ್ಯಂತ 3,209 ಪರೀಕ್ಷಾ ಕೇಂದ್ರಗಳಲ್ಲಿ ಬೆಳಗ್ಗೆ 10.30ಕ್ಕೆ ಪರೀಕ್ಷೆ ಪ್ರಾರಂಭಗೊಳ್ಳಲಿದೆ. ಆದರೆ, ಕೋವಿಡ್-19 ಹಿನ್ನೆಲೆಯಲ್ಲಿ ಪ್ರತಿ ವಿದ್ಯಾರ್ಥಿಗೂ ಥರ್ಮಲ್ ಸ್ಕ್ಯಾನಿಂಗ್ ಇರುವುದರಿಂದ ಪರೀಕ್ಷಾ ಕೇಂದ್ರಗಳಿಗೆ ನಿಗದಿತ ಅವಧಿಗಿಂತ ಒಂದು ಗಂಟೆ ಮೊದಲೇ ಹಾಜರಿರಬೇಕೆಂದು ವಿದ್ಯಾರ್ಥಿಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚಿಸಿದೆ.
ಪ್ರತಿ ವಿದ್ಯಾರ್ಥಿಗೆ ತಲಾ 2ರಂತೆ ರಾಜ್ಯಾದ್ಯಂತ ಎಲ್ಲ ವಿದ್ಯಾರ್ಥಿಗಳಿಗೆ ಉಚಿತವಾಗಿ ಮಾಸ್ಕ್ ವಿತರಿಸಲಾಗುವುದು. ಆರೋಗ್ಯ ತಪಾಸಣಾ ಕೌಂಟರ್ ನಲ್ಲಿ ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸುವ ಅಧಿಕೃತ ಅಧಿಕಾರಿ, ಸಿಬ್ಬಂದಿಗಳು ಪ್ರತಿ ವಿದ್ಯಾರ್ಥಿಯು ಮಾಸ್ಕ್ ಧರಿಸಿರುವುದನ್ನು ಖಚಿತ ಪಡಿಸಿಕೊಳ್ಳಲಿದ್ದಾರೆ. ನಂತರ ಸ್ಯಾನಿಟೈಸರ್ ನಿಂದ ಕೈಗಳಿಂದ ಸ್ವಚ್ಛಗೊಳಿಸಿ, ಥರ್ಮಲ್ ಸ್ಕ್ಯಾನರ್ ಮೂಲಕ ದೇಹದ ಉಷ್ಣತೆಯನ್ನು ಪರಿಶೀಲಿಸಿ ಪರೀಕ್ಷಾ ಕೊಠಡಿ ಒಳಗೆ ಪ್ರವೇಶಿಸಲು ಅವಕಾಶ ನೀಡಲಾಗುತ್ತದೆ.
ನಿಷೇಧಾಜ್ಞೆ ಜಾರಿ: ಪರೀಕ್ಷಾ ಕೇಂದ್ರಗಳ 200 ಮೀಟರ್ ಸುತ್ತಮುತ್ತ ಕಲಂ 144ಅಡಿಯಲ್ಲಿ ನಿಷೇಧಾಜ್ಞೆ ಹೊರಡಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಪ್ರವೇಶದ್ವಾರ ಹಾಗೂ ಮುಂಭಾಗದಲ್ಲಿ ಜನದಟ್ಟಣೆ ಉಂಟಾಗದಂತೆ ಪೊಲೀಸ್ ಸಿಬ್ಬಂದಿಗಳು ಬ್ಯಾರಿಕೇಡ್‍ಗಳನ್ನು ಹಾಕಿ ನಿಯಂತ್ರಿಸಲಿದ್ದಾರೆ. ಆ ಮೂಲಕ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ.
- ಪರೀಕ್ಷೆಯು ಬೆಳಗ್ಗೆ 10.30ರಿಂದ 1.30ರವರೆಗೆ ನಡೆಯಲಿದೆ.
- ಪರೀಕ್ಷಾ ಕೇಂದ್ರಗಳಿಗೆ ನಿಗದಿಗಿಂತ ಒಂದು ಗಂಟೆ ಮೊದಲು ಹಾಜರಾಗಬೇಕು.
- ಪ್ರತಿ ವಿದ್ಯಾರ್ಥಿಗೆ ಉಚಿತ ಎರಡು ಮಾಸ್ಕ್ ವಿತರಣೆ
- ಉಚಿತ ಸಾರಿಗೆ ವ್ಯವಸ್ಥೆ
- ಪರೀಕ್ಷಾ ಕೇಂದ್ರದ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ






.jpg)
.jpg)
.jpg)
.jpg)

