ಸುರಕ್ಷಿತ ಅಂತರ ಮರೆತು ರೈಲು ನಿಲ್ದಾಣದಲ್ಲಿ ಗುಂಪು ಸೇರಿದ ಕಾರ್ಮಿಕರು: ಅಸಹಾಯಕತೆ ವ್ಯಕ್ತಪಡಿಸಿದ ಬಿಜೆಪಿ ಸಂಸದ

Photo: twitter.com/Rajveerdiler
ಲಕ್ನೊ, ಜೂ.24: ಉತ್ತರಪ್ರದೇಶದ ಆಲಿಗಢ ರೈಲು ನಿಲ್ದಾಣದಲ್ಲಿ ವಲಸೆ ಕಾರ್ಮಿಕರು ಸುರಕ್ಷಿತ ಅಂತರ ನಿಯಮವನ್ನು ಮರೆತು ಗುಂಪು ಸೇರಿರುವ ಘಟನೆಯ ವೀಡಿಯೊ ವೈರಲ್ ಆಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಸಂಸದ ರಾಜ್ವೀರ್ ದಿಲೆರ್, ಜನಸಂದಣಿ ಹೆಚ್ಚಿರುವಾಗ ಇಂತದ್ದೆಲ್ಲಾ ಸಂಭವಿಸುತ್ತದೆ , ಏನೂ ಮಾಡುವಂತಿಲ್ಲ ಎಂದು ಹೇಳಿದ್ದಾರೆ. ಉತ್ತರಪ್ರದೇಶದ ಆಲಿಗಢ ಮೂಲದ ನೂರಾರು ಕಾರ್ಮಿಕರು ಬಿಹಾರದ ಇಟ್ಟಿಗೆ ಗೂಡುಗಳಲ್ಲಿ ಕೆಲಸ ಮಾಡಲು ತಮ್ಮ ಕುಟುಂಬದ ಸದಸ್ಯರ ಸಹಿತ ರೈಲು ನಿಲ್ದಾಣಕ್ಕೆ ಗುಂಪು ಗುಂಪಾಗಿ ಆಗಮಿಸುವ ಮತ್ತು ರೈಲ್ವೇ ಫ್ಲಾಟ್ಫಾರಂನಲ್ಲಿ ಗುಂಪಾಗಿ ಕುಳಿತು ರೈಲಿಗಾಗಿ ಕಾಯುತ್ತಿರುವ ವೀಡಿಯೊ ದೃಶ್ಯ ಮಂಗಳವಾರ ವೈರಲ್ ಆಗಿದೆ.
ಉತ್ತರಪ್ರದೇಶದಲ್ಲಿ ಕೊರೋನ ಸೋಂಕು ಉಲ್ಬಣಿಸಿರುವ ಸಂದರ್ಭದಲ್ಲೇ ಸುರಕ್ಷಿತ ಅಂತರ ಪಾಲನೆಯ ನಿಯಮವನ್ನು ಉಲ್ಲಂಘಿಸಿರುವ ಬಗ್ಗೆ ಬಿಜೆಪಿ ಸಂಸದ (ಕಾರ್ಮಿಕರನ್ನು ಬಿಹಾರಕ್ಕೆ ಕರೆದೊಯ್ಯುವ ರೈಲಿಗೆ ಹಸಿರು ನಿಶಾನೆ ತೋರಲು ಆಗಮಿಸಿದ್ದರು) ರಾಜ್ವೀರ್ ದಿಲ್ರನ್ನು ಮಾಧ್ಯಮದವರು ಪ್ರಶ್ನಿಸಿದಾಗ, ಪರಿಸ್ಥಿತಿ ನಿಭಾಯಿಸಲು ನಾವು ಪ್ರಯತ್ನಿಸಿದೆವು. ಆದರೆ ಜನಸಂದಣಿ ಹೆಚ್ಚಿರುವಾಗ ಮತ್ತು ಸ್ಥಳಾವಕಾಶ ಕಡಿಮೆಯಿರುವಾಗ ಇಂತಹ ಘಟನೆ ಸಂಭವಿಸುತ್ತದೆ . ಏನೂ ಮಾಡಲಾಗದು ಎಂದು ಅಸಹಾಯಕತೆ ವ್ಯಕ್ತಪಡಿಸಿರುವುದಾಗಿ ವರದಿಯಾಗಿದೆ.
ಮೂರೂ ರೈಲುಗಳು ಬಿಹಾರದ ಗಯಾಕ್ಕೆ ತೆರಳುತ್ತದೆ. ಸುರಕ್ಷಿತ ಅಂತರದ ಬಗ್ಗೆ ತಿಳಿಹೇಳಲು ನಾವು ಪ್ರಯತ್ನಿಸಿದೆವು. ಆದರೆ ಕಾರ್ಮಿಕರ ಬಳಿ ಸಾಮಾನು ಸರಂಜಾಮು ಹೆಚ್ಚಿತ್ತು. ಮಕ್ಕಳೂ ಹೆಚ್ಚಿನ ಸಂಖ್ಯೆಯಲ್ಲಿದ್ದರು. ರೈಲುಗಳನ್ನು ಸಮರ್ಪಕವಾಗಿ ಸ್ಯಾನಿಟೈಸ್ ಮಾಡಿದ್ದೇವೆ ಎಂದು ರೈಲು ನಿಲ್ದಾಣದಲ್ಲಿದ್ದ ಹಿರಿಯ ಅಧಿಕಾರಿ ಕುಲ್ದೇವ್ ಸಿಂಗ್ ಹೇಳಿದ್ದಾರೆ.







