ಸುರಕ್ಷಿತ ಅಂತರ ಗಾಳಿಗೆ ತೂರಿ ಪುರಿ ಜಗನ್ನಾಥ ಯಾತ್ರೆ!
ನ್ಯಾಯಾಲಯದ ಆದೇಶದ ಸ್ಪಷ್ಟ ಉಲ್ಲಂಘನೆ
ಭುವನೇಶ್ವರ, ಜೂ.24: ಕೇಂದ್ರ ಸರಕಾರದ ನಿಯಂತ್ರಣ ಮೀರಿ ದೇಶದಾದ್ಯಂತ ಕೊರೋನ ಸೋಂಕು ಅತ್ಯಂತ ವೇಗವಾಗಿ ಹರಡುತ್ತಿರುವ ಈ ಸಂದರ್ಭದಲ್ಲೇ ಒಡಿಶಾದ ಪುರಿಯಲ್ಲಿ ನಡೆದ ಜಗನ್ನಾಥ ರಥಯಾತ್ರೆಯನ್ನು ನಿರ್ವಹಿಸಿದ ರೀತಿ ಗಮನಾರ್ಹ ಸಮಸ್ಯೆಯಾಗಿಯೇ ಉಳಿಯುವ ಸಾಧ್ಯತೆಯಿದೆ ಎಂದು ಸುದ್ದಿಸಂಸ್ಥೆ ‘ದಿ ವೈರ್’ ವರದಿ ಮಾಡಿದೆ. ವರದಿಯ ಸಾರಾಂಶ ಹೀಗಿದೆ : ಈ ವಾರದ ಆರಂಭದಲ್ಲಿ ಜಗನ್ನಾಥ ರಥ ಯಾತ್ರೆ ಅಥವಾ ಒಡಿಯಾ ಭಾಷೆಯಲ್ಲಿ ಹೇಳುವಂತೆ ರಥ ಜಾತ್ರೆಗೆ ಚಾಲನೆ ದೊರಕಿದೆ. ಆದರೆ ರಥಯಾತ್ರೆಯ ಜೊತೆಗೇ ಅಪಾರ ಸಂಖ್ಯೆಯಲ್ಲಿ ಭಕ್ತರು ಮಾಸ್ಕ್ ಧರಿಸದೆ , ಸುರಕ್ಷಿತ ಅಂತರ ನಿಯಮಕ್ಕೆ ಲಕ್ಷವನ್ನೇ ನೀಡದೆ ಪುರಿಯ ರಸ್ತೆಯಲ್ಲೆಲ್ಲಾ ಸಾಗಿ ಹೋಗಿದ್ದು, ಕೊರೋನ ಸಮಸ್ಯೆಯನ್ನು ಇನ್ನಷ್ಟು ಕೆಟ್ಟದಾಗಿಸುವಲ್ಲಿ ಒಡಿಶಾ ಸರಕಾರ, ಕೇಂದ್ರ ಸರಕಾರ ಹಾಗೂ ಸುಪ್ರೀಂಕೋರ್ಟ್ ಸಮಾನ ಅಪರಾಧಿಗಳಾಗಿದ್ದಾರೆ ಎಂದು ದೇಶದ ಜನ ಭಾವಿಸುವಂತಾಗಿದೆ.
ಪುರಿ ಜಗನ್ನಾಥ ಯಾತ್ರೆಗೆ ಅವಕಾಶ ಕೋರಿದ್ದ ಅರ್ಜಿ ಭಾರತದ ಮುಖ್ಯ ನ್ಯಾಯಾಧೀಶ (ಸಿಜೆಐ) ಎಸ್.ಎ. ಬೋಬ್ಡೆ ನೇತೃತ್ವದ ನ್ಯಾಯಪೀಠದೆದುರು ವಿಚಾರಣೆಗೆ ಬಂದಾಗ , ರಥಯಾತ್ರೆಗೆ ಅನುಮತಿ ನೀಡಿದರೆ ಜಗನ್ನಾಥ ದೇವರೂ ತಮ್ಮನ್ನು ಕ್ಷಮಿಸಲಾರ ಎಂದು ಹೇಳಿ ಅರ್ಜಿ ತಳ್ಳಿಹಾಕಿದ್ದ ಸಿಜೆಐ, ಅಂತಿಮ ಕ್ಷಣದಲ್ಲಿ ನಾಗಪುರದಲ್ಲಿರುವ ತಮ್ಮ ಮನೆಯಿಂದಲೇ ನ್ಯಾಯಾಲಯದ ತೀರ್ಪನ್ನು ಉಲ್ಟಾ ಮಾಡಿ ರಥಯಾತ್ರೆಗೆ ಅನುಮತಿ ಮಂಜೂರು ಮಾಡಿದ್ದರು. ಕಳೆದ ತಿಂಗಳಿನಲ್ಲಿ ಒಡಿಶಾದಲ್ಲಿ ಕೊರೋನ ಸೋಂಕಿನ ಪ್ರಮಾಣದಲ್ಲಿ 80ಶೇ.ದಷ್ಟು ಹೆಚ್ಚಳವಾಗಿತ್ತು. ಸೂಕ್ತ ಪರೀಕ್ಷೆಯ ವ್ಯವಸ್ಥೆಯಿಲ್ಲದೆ, ಪರಿಣತ ಆರೋಗ್ಯ ಸಿಬ್ಬಂದಿಗಳ ಕೊರತೆಯಿಂದ ಕೊರೋನ ಸೋಂಕು ನಿರ್ವಹಣೆಯಲ್ಲಿ ಕಳಪೆ ಸಾಧನೆ ತೋರಿದ್ದ ಒಡಿಶಾ ಸರಕಾರ, ರಥಯಾತ್ರೆಗೆ ಅನುಮತಿ ನೀಡುವ ಬಗ್ಗೆ ಸ್ಪಷ್ಟ ನಿರ್ಧಾರಕ್ಕೆ ಬಂದಿರಲಿಲ್ಲ. ಬಳಿಕ ಎನ್‌ಜಿಒ ಸಂಸ್ಥೆಯೊಂದು ರಥಯಾತ್ರೆಗೆ ತಡೆಯಾಜ್ಞೆ ಕೋರಿ ಸುಪ್ರೀಂಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿತ್ತು. (ಇದನ್ನು ರಾಜ್ಯ ಸರಕಾರ ಬೆಂಬಲಿಸಿತ್ತು ಎನ್ನಲಾಗಿದೆ). ಈ ಅರ್ಜಿಯ ಬಗ್ಗೆ ಸುಪ್ರೀಂಕೋರ್ಟ್ ಎರಡು ಬಾರಿ ವಿಚಾರಣೆ ನಡೆಸಿತ್ತು. ನ್ಯಾಯಾಲಯದಲ್ಲಿ ಮೊದಲನೇ ಸಲ ವಿಚಾರಣೆ ಸಂದರ್ಭ ರಾಜ್ಯ ಸರಕಾರದ ಪ್ರತಿನಿಧಿ ಇದಕ್ಕೆ ಒಪ್ಪಿದ್ದರು. ಎರಡನೇ ಬಾರಿಯ ವಿಚಾರಣೆಯನ್ನು ನ್ಯಾಯಾಧೀಶ ಎಸ್.ಆರ್. ಭಟ್ ಅವರಿದ್ದ ಏಕಪೀಠಕ್ಕೆ ವಹಿಸಲಾಗಿತ್ತು.
ಆದರೆ ದಿಢೀರಾಗಿ ಇದನ್ನು ಮೂವರು ಸದಸ್ಯರ ನ್ಯಾಯಪೀಠಕ್ಕೆ ವಹಿಸಲಾಯಿತು. ಆದರೆ ರಥಯಾತ್ರೆ ರದ್ದುಗೊಳಿಸುವ ವಿಚಾರ ಸಾರ್ವಜನಿಕರ ಭಾವನೆಗೆ ವಿರೋಧವೆಂದು ಬಹುಶ ಭಾವಿಸಲಾಯಿತು. ರಾಜ್ಯ ಮತ್ತು ಕೇಂದ್ರ ಸರಕಾರಗಳು ಸೂಕ್ತ ವ್ಯವಸ್ಥೆ ಮಾಡಲು ಒಪ್ಪಿಕೊಂಡವು. ಸುಮಾರು 10ರಿಂದ 12 ಲಕ್ಷದಷ್ಟು ಜನಸಂದೋಹವನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಈ ಹಿಂದೆ ಹೇಳಿದ್ದ ಒಡಿಶಾ ಸರಕಾರ ತನ್ನ ಹೇಳಿಕೆ ಬದಲಿಸಿತು. ಜನರು ಗುಂಪು ಸೇರಲು ಅವಕಾಶ ನೀಡದ ರೀತಿಯಲ್ಲಿ ರಥಯಾತ್ರೆಯನ್ನು ನಿರ್ವಹಿಸಲು ತಾನು ಸಿದ್ಧ ಎಂದು ನ್ಯಾಯಾಲಯಕ್ಕೆ ವಚನ ನೀಡಿತು. ಅಂತಿಮ ಕ್ಷಣದಲ್ಲಿ ನ್ಯಾಯಾಲಯದ ತೀರ್ಪನ್ನು ಸಿಜೆಐ ಬದಲಿಸಿದರು. ರಥಯಾತ್ರೆಯನ್ನು ಪ್ರತ್ಯಕ್ಷ ಕಂಡವರು ಅಥವಾ ಟಿವಿಯಲ್ಲಿ ವೀಕ್ಷಿಸಿದವರಿಗೆ, ಇಂತಹ ಕಾರ್ಯಕ್ರಮದಲ್ಲಿ ಸುರಕ್ಷಿತ ಅಂತರ ಕಾಯ್ದುಕೊಳ್ಳಲು ಸಾಧ್ಯವೇ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ. ರಥವನ್ನು ಎಳೆಯುವಾಗ ಸುರಕ್ಷಿತ ಅಂತರದ ಬಗ್ಗೆ ಯಾರು ಕಾಳಜಿ ವಹಿಸುತ್ತಾರೆ. ಪುರಿಯಲ್ಲಿ ಈಗ ಆಗುತ್ತಿರುವುದೂ ಇದೇ. ಅಲ್ಲಿ ಲಕ್ಷಾಂತರ ಜನರು ಸುರಕ್ಷಿತ ಅಂತರ ಹಾಗಿರಲಿ, ಕನಿಷ್ಟ ಮಾಸ್ಕ್ ಕೂಡಾ ಧರಿಸದೆ ರಸ್ತೆಯಲ್ಲಿ ಓಡಾಡುತ್ತಿದ್ದಾರೆ. ಸರಕಾರ ಮಾತ್ರ ಎಲ್ಲಾ ಶಿಷ್ಟಾಚಾರಗಳನ್ನೂ ಪಾಲಿಸಿ ರಥಯಾತ್ರೆ ನಡೆಯುತ್ತಿದೆ ಎಂದು ಹೇಳಿಕೆ ನೀಡಿದೆ.
ಇಲ್ಲಿ ಗಮನಾರ್ಹ ಅಂಶವೆಂದರೆ, ಮೊದಲು ಜಾತ್ರೆಗೆ ತಡೆಯಾಜ್ಞೆ ನೀಡಿದಾಗ ಸುಪ್ರೀಂಕೋರ್ಟ್, ಸಂವಿಧಾನದ 25ನೇ ಪರಿಚ್ಛೇದವನ್ನು ಉಲ್ಲೇಖಿಸಿತ್ತು. ಅಂದರೆ ಆರೋಗ್ಯದ ಸಮಸ್ಯೆಯಿಂದಾಗಿ ಧಾರ್ಮಿಕ ಕಾರ್ಯಕ್ರಮಗಳನ್ನು ನಿರ್ಬಂಧಿಸುವುದು. ಆದರೆ ಎರಡನೇ ಬಾರಿಯ ವಿಚಾರಣೆ ಸಂದರ್ಭ ರಥಯಾತ್ರೆಯ ಪರ ವಾದ ಮಂಡಿಸಿದ ವಕೀಲ ಕೆ.ವಿ. ವಿಶ್ವನಾಥನ್, ರಥಯಾತ್ರೆ ಆಯೋಜಿಸಿ ಹಾಗೂ ಅದನ್ನು ಟಿವಿಯಲ್ಲಿ ನೇರಪ್ರಸಾರ ಮಾಡಿದರೆ ಸಂವಿಧಾನದ 25 ಮತ್ತು 26ನೇ ಪರಿಚ್ಛೇದವನ್ನು ಸೂಕ್ತವಾಗಿ ಸಮತೋಲನ ಮಾಡಿದಂತಾಗುತ್ತದೆ ಎಂದು ಹೇಳಿದರು. (ಆರೋಗ್ಯ, ಸಾರ್ವಜನಿಕ ಕ್ರಮ ಮತ್ತು ನೈತಿಕತೆಗೆ ಗಮನ ನೀಡಿ ಧಾರ್ಮಿಕ ಕಾರ್ಯಕ್ರಮಗಳನ್ನು ನಿರ್ವಹಿಸುವ ಹಕ್ಕು 26ನೇ ಪರಿಚ್ಛೇದದಡಿ ಬರುತ್ತದೆ). ಮುಂದಿನ ದಿನಗಳಲ್ಲಿ ‘ಸೂಕ್ತ ಸಮತೋಲನ’ದ ಭರವಸೆಯನ್ನು ಎಲ್ಲಾ ಧಾರ್ಮಿಕ ಸಂಘಟನೆಗಳು ನ್ಯಾಯಾಲಯಕ್ಕೆ ನೀಡುವ ಸಮಯ ಬರಬಹುದು.
ಭಾರತದಲ್ಲಿ, ಕೋವಿಡ್-19 ಮತ್ತು ಧಾರ್ಮಿಕ ಸಮಾವೇಶಗಳು ತಬ್ಲೀಗಿ ಜಮಾಅತ್‌ನ ಸಮಾವೇಶಕ್ಕೆ ಸಮಾನಾರ್ಥಕವಾಗಿವೆ. ಕಳೆದ ಮಾರ್ಚ್‌ನಲ್ಲಿ ದಿಲ್ಲಿಯಲ್ಲಿ ನಡೆದ ತಬ್ಲೀಗಿ ಸಮಾವೇಶದಲ್ಲಿ ಪಾಲ್ಗೊಂಡ ನೂರಾರು ಜನರಲ್ಲಿ ಕೊರೋನ ಸೋಂಕು ದೃಢಪಟ್ಟ ಬಳಿಕ ಕೊರೋನ ಸೋಂಕನ್ನು ಕ್ಷಿಪ್ರವಾಗಿ ಹರಡಿಸಿದ್ದು ತಬ್ಲೀಗಿ ಕಾರ್ಯಕ್ರಮ ಎಂದು ಪ್ರಚಾರ ಮಾಡಲಾಯಿತು. ಬೆನ್ನಲ್ಲೇ, ಮುಸ್ಲಿಮರು ಕೊರೋನ ವಿರುದ್ಧದ ಹೋರಾಟಕ್ಕೆ ಅಡ್ಡಿ ತರುತ್ತಿದ್ದಾರೆ ಎಂದು ಮುಖ್ಯವಾಹಿನಿಯ ಕೆಲವು ಮಾಧ್ಯಮಗಳು ಹಾಗೂ ರಾಜಕೀಯ ಮುಖಂಡರು ಆರೋಪಿಸಿದ ಬಳಿಕ ದೇಶದಾದ್ಯಂತ ಪ್ರದರ್ಶನ, ಪ್ರತಿಭಟನೆ ನಡೆದವು.
ಕೃಪೆ: Thewire.in