ಕೊರೋನದಿಂದ ಮೃತಪಟ್ಟರೆ ಸೂಕ್ತ ಸುರಕ್ಷತೆಯೊಂದಿಗೆ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸುವುದು ತಪ್ಪಲ್ಲ : ಯು.ಟಿ.ಖಾದರ್

ಮಂಗಳೂರು : ಮೃತ ದೇಹದ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿದರೆ ಕೊರೋನ ಸೋಂಕು ಹರಡುತ್ತದೆ ಎನ್ನುವುದು ಎಲ್ಲೂ ಸಾಭೀತಾಗಿಲ್ಲ. ಕೊರೋನ ಸೋಂಕು ಹರಡದಂತೆ ಸಾಕಷ್ಟು ಎಚ್ಚರಿಕೆ ವಹಿಸಬೇಕು ಆದರೆ ಈ ಬಗ್ಗೆ ಅನಗತ್ಯವಾದ ಭೀತಿಯನ್ನು ಜನರಲ್ಲಿ ಹಬ್ಬಿಸುವ ಅಗತ್ಯವಿಲ್ಲ. ಈ ಬಗ್ಗೆ ಜನ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಶಾಸಕ ಯು.ಟಿ.ಖಾದರ್ ಸುದ್ದಿ ಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಕೊರೋನ ಸೋಂಕಿನಿಂದ ಮೃತಪಟ್ಟ ಹಿನ್ನೆಲೆಯಲ್ಲಿ ತಾನು ಪಿಪಿಇ ಕಿಟ್ ಧರಿಸದೆ ಧಪನ ಮಾಡುವ ಸಂದರ್ಭದಲ್ಲಿ ಭಾಗವಹಿಸಿರುವ ಬಗ್ಗೆ ಕೆಲವು ವ್ಯಕ್ತಿಗಳು ಮಾಡಿರುವ ಟೀಕೆಗಳ ಬಗ್ಗೆ ಯು.ಟಿ.ಖಾದರ್ ಸುದ್ದಿಗೋಷ್ಠಿಯಲ್ಲಿಂದು ಸ್ಪಷ್ಟ ಪಡಿಸಿದ್ದಾರೆ.
ಮೃತ ದೇಹವನ್ನು ಗೌರವಯುತವಾಗಿ ಅಂತ್ಯ ಸಂಸ್ಕಾರ ಮಾಡುವುದು ನಮ್ಮೆಲ್ಲರ ಹೊಣೆಗಾರಿಕೆ. ಈ ನಿಟ್ಟೆನಲ್ಲಿ ತಾನು ಮಂಗಳವಾರ ಬೋಳಾರದ ಧಪನ ಭೂಮಿಯಲ್ಲಿ ನಡೆದ ಅಂತ್ಯ ಸಂಸ್ಕಾರದಲ್ಲಿ ಸೂಕ್ತ ಮುನ್ನೆಚ್ಚರಿಕೆಯೊಂದಿಗೆ ಭಾಗವಹಿಸಿದ್ದೇನೆ. ಈ ಸಂದರ್ಭದಲ್ಲಿ ಮೃತ ದೇಹವನ್ನು ಇತರರಿಗೆ ಸೋಂಕು ಹರಡದಂತೆ ಸುರಕ್ಷಿತವಾಗಿ ಪ್ಯಾಕ್ ಮಾಡಿ ತರಲಾಗಿತ್ತು ಎಂದು ಯು.ಟಿ.ಖಾದರ್ ತಿಳಿಸಿದ್ದಾರೆ.
ಎಸೆಸೆಲ್ಸಿ ಪರೀಕ್ಷೆ ಸೂಕ್ತ ಮುಂಜಾಗ್ರತಾ ಕ್ರಮ ಅಗತ್ಯ
ಎಸೆಸೆಲಿಸ್ಸಿ ಪರೀಕ್ಷಾ ಕೇಂದ್ರಗಳನ್ನು ಸೂಕ್ತವಾಗಿ ಸ್ಯಾನಿಟೈಸ್ ಮಾಡಬೇಕು ಮತ್ತು ಕೇಂದ್ರದ ವ್ಯಾಪ್ತಿಯಲ್ಲಿ ಸೂಕ್ತ ವಾಹನ ನಿಲುಗಡೆಗೆ, ವಿದ್ಯಾರ್ಥಿಗಳಿಗೆ ಹಾಜರಾಗಲು ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಯು.ಟಿ.ಖಾದರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಮಮತಾ ಗಟ್ಟಿ, ಶಾಹುಲ್ ಹಮೀದ್, ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಮೋನು ಮೊದಲಾದವರು ಉಪಸ್ಥಿತರಿದ್ದರು.







