ಆಸ್ಟ್ರೇಲಿಯದಲ್ಲಿ ಮತ್ತೆ ಕೊರೋನ ಆರ್ಭಟ: ಮಿಲಿಟರಿ ನೆರವು ಯಾಚಿಸಿದ ಸರಕಾರ

ಮೆಲ್ಬೋರ್ನ್,ಜೂ.24: ನಗರದಲ್ಲಿ ಮತ್ತೆ ಅಟ್ಟಹಾಸಗೈಯುತ್ತಿರುವ ಕೊರೋನ ವೈರಸ್ ಸೋಂಕಿನ ನಿಯಂತ್ರಣಕ್ಕಾಗಿ ನೆರವಾಗಲು ಆಸ್ಟ್ರೇಲಿಯ ಸರಕಾರವು ಸೇನೆಯ ನೆರವು ಕೇಳಿದೆ. ಆಸ್ಟ್ರೇಲಿಯದ ಎರಡನೆ ಅತ್ಯಧಿಕ ಜನಸಂಖ್ಯೆಯ ನಗರವಾದ ಮೆಲ್ಬೋರ್ನ್‌ನಲ್ಲಿ ಕಳೆದ ಒಂದು ವಾರದಿಂದ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿರುವುದು ಸರಕಾರಕ್ಕೆ ಆತಂಕ ಮೂಡಿಸಿದೆ.
ಮೆಲ್ಬೋರ್ನ್ ನಗರದಲ್ಲಿ ಕೊರೋನ ಹಾವಳಿಯನ್ನು ಮಟ್ಟಹಾಕಲು ಸೇನೆಯ ನೆರವನ್ನು ಒದಗಿಸುವ ಕೊಡುಗೆಯನ್ನು ನಗರಾಡಳಿತಕ್ಕೆ ನೀಡಿರುವುದಾಗಿ ಆಸ್ಟ್ರೇಲಿಯದ ಆರೋಗ್ಯ ಸಚಿವ ಗ್ರೆಗ್ ಹಂಟ್ ತಿಳಿಸಿದ್ದಾರೆ.
ಆಸ್ಟ್ರೇಲಿಯದಲ್ಲಿ ಬುಧವಾರ 80 ವರ್ಷದ ವೃದ್ಧ ಓರ್ವ ಕೊರೋನ ಸೋಂಕಿಗೆ ಬಲಿಯಾಗಿದ್ದು, ಇದು ಒಂದು ತಿಂಗಳ ಬಳಿಕ ದೇಶದಲ್ಲಿ ಕೋವಿಡ್-19ನಿಂದ ಮೃತಪಟ್ಟ ಮೊದಲ ಪ್ರಕರಣವಾಗಿದೆ.
ಸೇನೆಯ ನೆರವಿನ ಕೊಡುಗೆಯನ್ನು ಸ್ವೀಕರಿಸಿರುವುದಾಗಿ ವಿಕ್ಟೋರಿಯಾ ರಾಜ್ಯದ ಮುಖ್ಯಮಂತ್ರಿ ಡೇನಿಯಲ್ ಆ್ಯಂಡ್ರೂಸ್ ತಿಳಿಸಿದ್ದಾರೆ. ಸೇನೆಯ ನೆರವಿನಿಂದ ರೋಗಿಗಳ ತಪಾಸಣೆಯನ್ನು ಅಧಿಕ ಸಂಖ್ಯೆಯಲ್ಲಿ ಮಾಡಲು ಸಾಧ್ಯ ಹಾಗೂ ಫಲಿತಾಂಶಗಳು ಕೂಡಾ ತ್ವರಿತವಾಗಿ ದೊರೆಯಲಿವೆ ಎಂದವರು ಹೇಳಿದ್ದಾರೆ.
ಆಸ್ಟ್ರೇಲಿಯದಲ್ಲಿ ಈವರೆಗೆ 7500 ಕೊರೋನ ಸೋಂಕಿನ ಪ್ರಕರಣಗಳು ವರದಿಯಾಗಿದ್ದು, 103 ಮಂದಿ ಮೃತಪಟ್ಟಿದ್ದಾರೆ.







